ಫೆ, 10 ರಂದು ಶಹಾಪುರಕ್ಕೆ ಪ್ರಜಾಧ್ವನಿ ಯಾತ್ರೆ, 50 ಸಾವಿರ ಜನ ಸೇರುವ ನಿರೀಕ್ಷೆ – ದರ್ಶನಾಪುರ
ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಕಾಂಗ್ರೆಸ್ ಬೆಂಬಲಿಸಿ- ದರ್ಶನಾಪುರ
ಬಿಜೆಪಿ ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ
ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಕಾಂಗ್ರೆಸ್ ಬೆಂಬಲಿಸಿ- ದರ್ಶನಾಪುರ
yadgiri, ಶಹಾಪುರಃ ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳ ದುರಾಡಳಿತ ಜನತೆಗೆ ತಿಳಿಸಲು ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷ ಮಾಜಿ ಸಿಎಂ ಸಿದ್ರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಪ್ರಜಾಧ್ವನಿ ಹೆಸರಿನಡಿ ಬಸ್ ಯಾತ್ರೆ ಕಾರ್ಯಕ್ರಮ ಹಾಕಿಕೊಂಡಿದ್ದು, ಫೆ.10 ರಂದು ನಗರಕ್ಕೆ ಯಾತ್ರೆ ಆಗಮಿಸಲಿದ್ದು, ಕಾರ್ಯಕ್ರಮ ಯಶಸ್ವಿಗೆ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ಎನ್‍ಜಿಓ ಲೇಔಟ್‍ನಲ್ಲಿ ಬೃಹತ್ ಪ್ರಮಾಣದಲ್ಲಿ ನಿರ್ಮಿಸಲಾಗುತ್ತಿರುವ ವೇದಿಕೆ ಸ್ಥಳವನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 50 ಸಾವಿರ ಜನರು ಸೇರುವ ನಿರೀಕ್ಷೆ ಹೊಂದಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಆಸನ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮತ್ತು ಎಲ್‍ಇಡಿ ಟಿವಿ ಅಳವಡಿಸಲಾಗುತ್ತಿದೆ.
ಅಂದು ಕಾರ್ಯಕ್ರಮಕ್ಕೆ ವಿಪಕ್ಷ ನಾಯಕ ಸಿದ್ರಾಮಯ್ಯ, ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ, ಜಮೀರಹ್ಮದ್, ಪ್ರಕಾಶ ರಾಠೋಡ ಮತ್ತು ಅಲ್ಲಮ ವೀರಭದ್ರಪ್ಪ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ರಾಮಯ್ಯನವರು ಫೆ.3 ರಿಂದ ಬಸವಕಲ್ಯಾಣದಿಂದ ಯಾತ್ರೆ ಪ್ರಾರಂಭಿಸಿದ್ದು, ಪ್ರತಿ ದಿನ ಮೂರು ಕ್ಷೇತ್ರಗಳಲ್ಲಿ ಯಾತ್ರೆ ಕಾರ್ಯಕ್ರಮ ನಡೆಯಲಿದೆ. ಫೆ. 12 ರವರೆಗೆ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಉತ್ತರ ಕರ್ನಾಟಕದ 112 ವಿಧಾನಸಭಾ ಕ್ಷೇತ್ರಗಳಲ್ಲಿ, 14 ಲೋಕಸಭಾ ಸಭಾ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ತಂಡ ಮತ್ತು ಇನ್ನುಳಿದ 14 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷ ರಾಜ್ಯಧ್ಯಕ್ಷ ಡಿ.ಕೆ.ಶಿವಕುಮಾರ ನೇತೃತ್ವದ ತಂಡ ಪ್ರಚಾರ ಕಾರ್ಯಕೈಗೊಂಡಿದ್ದಾರೆ.
-ಶರಣಬಸಪ್ಪಗೌಡ ದರ್ಶನಾಪುರ. ಶಾಸಕರು.