ಗುಲ್ಬರ್ಗಾದಲ್ಲಿ ಜವಳಿ ಪಾರ್ಕ್ ಸಿಎಂ ಭರವಸೆ
ಗುಲ್ಬರ್ಗಾದಲ್ಲಿ ಜವಳಿ ಪಾರ್ಕ್ ಸಿಎಂ ಭರವಸೆ
ವಿಧಾನಸಭೆಃ ಗುಲ್ಬರ್ಗಾದಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಹೆಚ್ಚಿನ ವೇಗ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ನೀಡಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಬಸವರಾಜು ಮತ್ತಿಮುಡ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರದ ಯೋಜನೆಯಡಿ ಗುಲ್ಬರ್ಗಾ ಟೆಕ್ಸ್‌ಟೈಲ್ಸ್ ಪಾರ್ಕ್‌ನಿಂದ ಎಸ್‌ಪಿವಿ ಸಂಸ್ಥೆಯ ಮೂಲಕ ನಂದೂರು ಕೆಸರಟಗಿ ಕೈಗಾರಿಕಾ ಪ್ರದೇಶದ 50 ಎಕರೆ ಜಮೀನಿನಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಅನುಮೋದನೆಯಾಗಿದೆ ಎಂದರು.
ಈ ಯೋಜನೆಯ ಮಾರ್ಗಸೂಚಿಯಂತೆ ಜವಳಿ ಪಾರ್ಕ್‌ನ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ ಕೇಂದ್ರದಿಂದ ಶೇ.40ರಷ್ಟು ಅನುದಾನ ಪಡೆಯಲು ಅವಕಾಶ ಇದೆ.
ಈ ಜವಳಿ ಪಾರ್ಕ್‌ನ ನಿರ್ಮಾಣಕ್ಕೆ 49 ಕೋಟಿ ರೂ. ಅಗತ್ಯವಿದ್ದು, ಕೇಂದ್ರ ಸರ್ಕಾರದಿಂದ 18 ಕೋಟಿ ರೂ. ಅನುದಾನ ಪಡೆಯಬಹುದಾಗಿದೆ. ಇದುವರೆಗೂ 1.85 ಕೋಟಿ ರೂ. ಅನುದಾನವನ್ನು ಎಸ್‌ಪಿವಿ ಸಂಸ್ಥೆಗೆ ಬಿಡುಗಡೆ ಮಾಡಲಾಗಿದೆ ಎಂದರು.
ಈ ಜವಳಿ ಪಾರ್ಕ್ ಯೋಜನೆಗೆ ರಾಜ್ಯ ಸರ್ಕಾರದಿಂದ ವಿಶೇಷ ಅಭಿವೃದ್ಧಿ ಯೋಜನೆಯಡಿ 10 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಿದ್ದೇವೆ. ಇದರಲ್ಲಿ 4.5 ಕೋಟಿ ರೂ.ಗಳನ್ನು ಎಸ್‌ಪಿವಿ ಸಂಸ್ಥೆಗೆ ಬಿಡುಗಡೆ ಮಾಡಲಾಗಿದೆ ಎಂದರು.
ಸದ್ಯದಲ್ಲೇ ಎಸ್‌ಪಿವಿ ಸದಸ್ಯರೊಂದಿಗೆ ಸಭೆ ನಡೆಸಿ ಎಸ್‌ಪಿವಿ ಸದಸ್ಯರ ವಂತಿಗೆಯನ್ನು ಕ್ರೂಢೀಕರಿಸಿ ಜವಳಿ ಪಾರ್ಕ್ ನಿರ್ಮಾಣಕ್ಕೆ ವೇಗ ನೀಡುವುದಾಗಿಯೂ ಅವರು ಹೇಳಿದರು.