ಮಾನವ ಹಕ್ಕು ಜನ್ಮದಿಂದಲೇ ಬರಲಿದೆಃ ನ್ಯಾ.ಸದಾನಂದ ಎನ್.ನಾಯಕ
ಮಾನವನಿಂದ ಮಾನವನ ಮೇಲೆ ಶೋಷಣೆ ನಿಲ್ಲಲಿಃ ಡಿಸಿ ಮಂಜುನಾಥ
ಯಾದಗಿರಿ: ಮನುಷ್ಯ ಯಾವ ದೇಶದಲ್ಲಿಯೇ ಹುಟ್ಟಿದರೂ, ಅವನು ಜಾತಿ, ಜನಾಂಗ ಹಾಗೂ ಧರ್ಮದ ಬೇಧವಿಲ್ಲದೆ ಹುಟ್ಟಿನಿಂದಲೇ ಮಾನವ ಹಕ್ಕುಗಳನ್ನು ಪಡೆಯುತ್ತಾನೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸದಾನಂದ ಎನ್. ನಾಯಕ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ ಮತ್ತು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಡೆದ ‘ವಿಶ್ವ ಮಾನವ ಹಕ್ಕುಗಳ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿದ್ದು, ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಅದನ್ನು ತಡೆಗಟ್ಟಿ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಹಾಗೂ ವೈಯಕ್ತಿಕ ಗೌರವ ಕಾಪಾಡಿಕೊಳ್ಳುವುರೊಂದಿಗೆ ಮಾನವ ಹಕ್ಕುಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಜಿಲ್ಲಾಧಿಕಾರಿ ಜೆ.ಮಂಜುನಾಥ ಮಾತನಾಡಿ, ಭೂಮಿಯಲ್ಲಿನ ಹಲವು ಜೀವಿಗಳಲ್ಲಿ ಮಾನವ ಬುದ್ಧಿವಂತ ಮತ್ತು ಸಮಾಜ ಜೀವಿಯಾಗಿದ್ದಾನೆ. ದೇಶವು ಬಹುಭಾಷೆ, ಧರ್ಮ, ಜಾತಿ ಹಾಗೂ ಜನಾಂಗಗಳಿಂದ ಕೂಡಿದ್ದು, ನಮ್ಮ ದೇಶದ ಅಭಿವೃದ್ಧಿಯ ಜೊತೆಗೆ ಮಾನವ ಹಕ್ಕುಗಳಿಗೆ ಧಕ್ಕೆಬಾರದಂತೆ ನಡೆದುಕೊಳ್ಳುವುದು ನಿಜವಾದ ಮಾನವನ ಧರ್ಮವಾಗಿದೆ.
ಮಾನವನಿಂದ ಮಾನವನ ಮೇಲೆ ನಡೆಯುತ್ತಿರುವ ಶೋಷಣೆಯನ್ನು ತಡೆಯಬೇಕು, ಮಾನವ ಹಕ್ಕುಗಳು ಉಲ್ಲಂಘನೆಯಾದಲ್ಲಿ ಸಂಬಂಧಪಟ್ಟ ಪ್ರಾಧಿಕಾರದ ಗಮನಕ್ಕೆ ತರುವಂತೆ ಅವರು ಮನವಿ ಮಾಡಿದರು.
ಅತಿಥಿ ಉಪನ್ಯಾಸಕಿ ಜ್ಯೋತಿಲತಾ ತಡಿಬಿಡಿ ಮಠ ಅವರು ವಿಶ್ವದ ಮಾನವ ಹಕ್ಕುಗಳ ದಿನಾಚರಣೆಯ ಕುರಿತು ಉಪನ್ಯಾಸ ನೀಡಿದರು.
ನೈತಿಕ ತತ್ವದಡಿಯಲ್ಲಿ ಹುಟ್ಟಿದಂತ ಮಾನವ ಹಕ್ಕುಗಳು ಜಾಗತೀಕರಣದ ಭರಾಟೆಯಲ್ಲಿ ಉಲ್ಲಂಘನೆ ಆಗುತ್ತಿವೆ. ನಮ್ಮ ಸಂವಿಧಾನದ 3ನೇ ಭಾಗದಲ್ಲಿ ಅಳವಡಿಸಿ ಅವುಗಳನ್ನು ಉಲ್ಲಂಘನೆಯಾಗದಂತೆ ನ್ಯಾಯಾಲಗಳು ರಕ್ಷಣೆ ನೀಡುತ್ತಿವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾದ ನಾಮದೇವ ಕೆ. ಸಾಲಮಂಟಪಿ, ಅತಿಥಿಗಳಾಗಿ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಭೀಮರಾಯ ಬಿ. ಕಿಲ್ಲನಕೇರಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಾನವ ಹಕ್ಕುಗಳ ಪ್ರಮಾಣ ವಚನ ಬೋಧಿಸಲಾಯಿತು.
ಬಸ್ಸಣ್ಣಗೌಡ ಪಾಟೀಲ್ ಸ್ವಾಗತಿಸಿ, ನಿರೂಪಿಸಿದರು. ವರದರಾಜ ರಡ್ಡಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.