ಮುದುಕ ಕಲಿಸಿದ ಉಪಾಯ ಸಹೋದರರಿಬ್ಬರ ಈ ಕಥೆ ಓದಿ
ಮುದುಕ ಕಲಿಸಿದ ಉಪಾಯ
ಇಬ್ರಾಹಿಂ ಹಾಗೂ ಆಲಿ ಇಬ್ಬರು ಸಹೋದರರು. ತಾಯಿ ಬಾಲ್ಯದಲ್ಲೇ ಸ್ವರ್ಗಸ್ಥಳಾಗಿದ್ದಳು. ತಂದೆಯೂ ಆನಂತರ ತೀರಿದ. ಆದರೆ ತನ್ನ ಮಕ್ಕಳಿಗಾಗಿ ಬಿಟ್ಟು ಹೋದುದು ಕೇವಲ ಮೂರು ವಸ್ತುಗಳನ್ನು ಒಂದು ಹಸು, ಒಂದು ಖರ್ಜೂರದ ಮರ ಹಾಗೂ ಒಂದು ಹಳೆಯ ಕಂಬಳಿ.
ಒಮ್ಮೆ ಇಬ್ರಾಹಿಂ ಈ ಮೂರು ವಸ್ತುಗಳನ್ನು ಹಂಚಿಕೊಳ್ಳುವ ಪ್ರಸ್ತಾಪ ಮಾಡಿದ. ಮುಗ್ಧ ಆಲಿ ಹೂಂಗುಟ್ಟಿದಾಗ ಇಬ್ರಾಹಿಂ ಹಸುವಿನ ಬಗ್ಗೆ ಹೇಳಿದ. ನೋಡು ಅಲಿ, ಜೀವಂತ ಹಸುವನ್ನು ತುಂಡುಮಾಡಿ ಹಂಚಿಕೊಳ್ಳಲು ಬರೋಲ್ಲ.
ನನಗೆ ಹಸುವಿನ ಹಿಂಭಾಗವಿರಲಿ, ನಿನಗೆ ಮುಂಭಾಗವಿರಲಿ’ , ಅಲಿ ಇದಕ್ಕೆ ಒಪ್ಪಿದ. ಆತ ಹಸುವಿಗೆ ಹಸಿರು ಮೇವು ತಂದು ಹಾಕಿದ. ಕ್ರಮೇಣ ಹಸು ಹಾಲು ಕೊಡಲಾರಂಭಿಸಿತು. ಆದರೆ ಹಿಂಭಾಗ ಇಬ್ರಾಹಿಂಗೆ ಸೇರಿದ್ದರಿಂದ ಅಲಿಗೆ ಸ್ವಲ್ಪವೂ ಹಾಲು ಸಿಗುತ್ತಿರಲಿಲ್ಲ.
ಹಳ್ಳಿಯ ಒಬ್ಬ ಮುದುಕ ಇದನ್ನು ಗಮನಿಸಿದ. ಒಂದು ದಿನ ಆತ ಅಲಿಗೆ ಉಪಾಯ ಹೇಳಿದ. ಮರುದಿನ ಇಬ್ರಾಹಿಂ ಹಾಲು ಕರೆಯಲು ಬಂದಾಗ ಅಲಿ ಹಸುವಿನ ತಲೆಗೆ ಹೊಡೆದ. ರೇಗಿದ ಹಸು ಒದೆಯಲಾರಂಭಿಸಿತು.
ಇಬ್ರಾಹಿಂ ಕೋಪದಿಂದ ಕೆರಳಿ ಬೈದ, ‘ಇದು ನನಗೆ ಸೇರಿದ ಭಾಗ, ನಾನು ಏನು ಬೇಕಾದರೂ ಮಾಡುವೆ. ನೀನು ಹಾಲನ್ನು ಪಡೆದಾಗ ನಾನೇನಾದರೂ ಹೇಳುವೆನಾ?’ ಎಂದ ಅಲಿ . “ಸರಿಯಪ್ಪಾ , ನೀನು ಹಸುವಿಗೆ ಹೊಡೆಯದಿರು. ಅರ್ಧಾಂಶ ಹಾಲನ್ನು ನಿನಗೂ ಕೊಡುವೆ’ , ನಂತರ ಖರ್ಜೂರದ ಮರದ ಬಗ್ಗೆ ವಿಚಾರವಾಯಿತು.
“ನೋಡು ಅಲಿ, ಮರದ ಕೆಳಭಾಗ ಹೆಚ್ಚು ಲಾಭಕರ . ನಿನಗೆ ಯಾವ ಭಾಗ ಬೇಕು. ಆರಿಸಿಕೋ”. “ಹಾಗಾದ್ರೆ ನನಗೆ ಮರದ ಕೆಳಭಾಗವೇ ಇರಲಿ !” ಎಂದ ಮುಗ್ಧ ಅಲಿ.
ಅಲಿ, ನಿತ್ಯವೂ ಎರಡು ಬಾರಿ ದೊಡ್ಡ ದೊಡ್ಡ ಕೊಡಗಳಲ್ಲಿ ನೀರು ಹೊತ್ತು ತಂದು ಬೇರುಗಳಿಗೆ ಹಾಕುತ್ತಿದ್ದ. ಇಬ್ರಾಹಿಂ ಮರದ ಮೇಲ್ಬಾಗದಲ್ಲಿ ಪಾತ್ರೆಯನ್ನು ಕಟ್ಟಿ ಪ್ರತಿ ಸಂಜೆ ಅಲ್ಲಿಂದ ‘ರಸ’ ಪಡೆಯುತ್ತಿದ್ದ.
ಹಳ್ಳಿಯ ವೃದ್ಧ ಇದನ್ನು ಕಂಡು ಅಲಿಗೆ ಉಪಾಯ ಹೇಳಿದ, ಅಂದು ಇಬ್ರಾಹಿಂ “ರಸ” ತೆಗೆಯಲು ಮರವೇರಿದೊಡನೆ ಅಲ್ಲಿ ಬಂದು ಮರದ ಕಾಂಡವನ್ನು ಕಡಿಯಲು ಆರಂಭಿಸಿದ.
‘ಯಾಕೆ ಹೀಗೆ?’ ಎಂದಾಗ ‘ಇದು ನನಗೆ ಸೇರಿದ ಭಾಗ, ನೀನೇನೂ ಹೇಳಬೇಡ’ ಎಂದಾಗ ‘ನಾಳೆಯಿಂದ ಅರ್ಧ ‘ರಸ’ ನಿನಗೂ ಕೊಡುವೆ ಬಿಡಯ್ಯಾ … ‘ ಎಂದ . ಮತ್ತೆ ಕಂಬಳಿಯ ವಿಚಾರವೂ ಬಂದಿತು.
ಇಬ್ರಾಹಿಂ ಕಂಬಳಿಯನ್ನು ರಾತ್ರಿ ಉಪಯೋಗಿಸುವಂತೆಯೂ, ಅಲಿ ಹಗಲು ಹೊತ್ತು ಉಪಯೋಗಿಸುವಂತೆಯೂ ಇಬ್ರಾಹಿಂ ಸೂಚಿಸಿದ. ಹಗಲು ಸೆಖೆ, ಹಾಗಾಗಿ ಕಂಬಳಿ ಬೇಕಾಗುತ್ತಿರಲಿಲ್ಲ. ಆದರೆ ಇಬ್ರಾಹಿಂ ರಾತ್ರಿ ಕಂಬಳಿ ಸುಖಿಸುತ್ತಿದ್ದ.
ಹಳ್ಳಿಯ ವೃದ್ಧನಿಗೆ ಈ ವಿಚಾರ ತಿಳಿಯಿತು. ಆತ ಅಲಿಗೆ ಉಪಾಯ ಹೇಳಿದ. ಹಗಲು ಸೆಖೆಯಿದ್ದುದರಿಂದ ಅಲಿ ಕಂಬಳಿಯನ್ನು ಒದ್ದೆ ಮಾಡಿದ್ದ. ರಾತ್ರಿ ಇಬ್ರಾಹಿಂ ಬಂದಾಗ ಕಂಬಳಿ ಒದ್ದೆಯಾಗಿತ್ತು.
ಬೈದಾಗ ಅಲ್ಲಿ ಹೇಳಿದ ‘ಹಗಲು ನನ್ನದಾದುದರಿಂದ ನಾನು ಹಾಗೆ ಮಾಡಿದೆ’ ಈಗ ಇಬ್ರಾಹಿಂಗೆ ತನ್ನ ತಪ್ಪಿನ ಅರಿವಾಯಿತು. ಅವನು ನಾಚಿ ಅಲಿಯ ಕ್ಷಮೆಯಾಚಿಸಿದ. ಮತ್ತೆ ಇಬ್ಬರೂ ಸುಖವಾಗಿ ಬದುಕಿದರು.
ನೀತಿ :– ಸಮರಸ ಜೀವನಕ್ಕೆ ಹೊಂದಿಕೆಯಿಂದ ಬಾಳುವ ಮನಸ್ಥಿತಿ ಹೊಂದಿರಬೇಕು, ಅದುವೇ ಜೀವನದ ಯಶಸ್ವಿಗೆ ಕಾರಣ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882