ಶಹಾಪುರಃ ಬಾಪುಗೌಡ ಕಾಲೇಜಿನಲ್ಲಿ ಅಭಿವಿನ್ಯಾಸ ವಿನೂತನ ಕಾರ್ಯಕ್ರಮ
ವಿದ್ಯಾರ್ಥಿಗಳ ಪ್ರತಿಭೆ, ಸಮಸ್ಯೆಗಳ ಪರಿಹಾರಕ್ಕೆ ಅಭಿವಿನ್ಯಾಸ ಪೂರಕ
ಶಹಾಪುರಃ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯೇ ಶಿಕ್ಷಣದ ಮುಖ್ಯ ಉದ್ಧೇಶವಾಗಿದೆ. ಕೇವಲ ನಾಲ್ಕು ಗೋಡೆಗಳ ಮಧ್ಯೆ ಕುರಿತು ಪಾಠ ಹೇಳಿದ ಮತ್ತು ಕೇಳಿದ ಮಾತ್ರಕ್ಕೆ ಶಿಕ್ಷಣ ಪರಿಪೂರ್ಣವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕಾಲೇಜಿಗೆ ಹೊಸದಾಗಿ ಪ್ರವೇಶ ಪಡೆದ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ “ಅಭಿವಿನ್ಯಾಸ” ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಕಲಿಕಾ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಶಿವಲಿಂಗಣ್ಣ ಸಾಹು ಅಭಿಪ್ರಾಯ ಪಟ್ಟರು.
ನಗರದ ಬಾಪುಗೌಡ ದರ್ಶನಾಪೂರ ಸ್ಮಾರಕ ಮಹಿಳಾ ಪದವಿ ಕಾಲೇಜಿನ ಎನ್.ಎಸ್.ಎಸ್ ‘ಎ’ ಮತ್ತು ‘ಬಿ’ ಘಟಕಗಳ ವತಿಯಿಂದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ‘ಅಭಿವಿನ್ಯಾಸ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಥಮ ವರ್ಷದ ವಿದ್ಯಾರ್ಥಿಗಳು ಈ ಕಾಲೇಜಿನ ಸಾಂಸ್ಕøತಿಕ ಭಾಗವಾಗಲು ಪರಸ್ಪರ ಪರಿಚಯ, ಗುಂಪು ಚರ್ಚೆ, ನಾಯಕತ್ವ, ನೈತಿಕ ಮೌಲ್ಯಗಳ ಅಳವಡಿಸಿಕೊಳ್ಳುವಿಕೆ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಮುಂತಾದವುಗಳ ಮೂಲಕ ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸುವುದರ ಜೊತೆಗೆ ಕಾಲೇಜಿನ ಸೌಲಭ್ಯಗಳ ಕುರಿತು ವಿವರಿಸಿದರು.
ಆಂಗ್ಲಭಾಷೆಯ ಉಪನ್ಯಾಸಕ ಮಾನಯ್ಯ ಗೌಡಗೇರ ಮಾತನಾಡಿ, ಅಭಿವಿನ್ಯಾಸ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿನ ಹಲವಾರು ತಾರತಮ್ಯಗಳು, ಸಂಕುಚಿನ ಮನೋಭಾವನೆ, ಕೀಳರಿಮೆ ಹೋಗಲಾಡಿಸಲು ಮತ್ತು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಉತ್ತಮ ವೇದಿಕೆ ಕಲ್ಪಿಸಿಕೊಡುತ್ತದೆ ಎಂದು ತಿಳಿಸಿದರು. ಕನ್ನಡ ಹಿರಿಯ ಉಪನ್ಯಾಸಕ ಸೈಯದ್ ಚಾಂದಪಾಷ ಅವರು ವ್ಯಕ್ತಿತ್ವ ಜೀವನ ಮತ್ತು ಜೀವನದ ಕೌಶಲ್ಯಗಳನ್ನು ಕುರಿತು ಉಪನ್ಯಾಸ ನೀಡಿದರು. ಪ್ರಥಮವಾಗಿ ‘ಎ’ ಘಟಕದ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ರಾಘವೇಂದ್ರ ಹಾರಣಗೇರಾ ಅವರು ಅಭಿವಿನ್ಯಾಸದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು.
ಸಮಾರೋಪ ಭಾಷಣ ಮಾಡಿದ ರಾಜ್ಯಶಾಸ್ತ್ರ ಉಪನ್ಯಾಸಕಿ ಶುಭಲಕ್ಷ್ಮೀ ಬಬಲಾದಿ, ಅಭಿವಿನ್ಯಾಸ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿನ ಪ್ರತಿಭಾ ಅನಾವರಣಕ್ಕೆ ಮತ್ತು ಕಲಿಕೆಯ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಹಾಗೂ ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ತುಂಬಾ ಉಪಯುಕ್ತವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಾಂಸ್ಕøತಿಕ ಸಂಚಾಲಕ ಭೀಮಪ್ಪ ಭಂಡಾರಿ, ಉಪನ್ಯಾಸಕರಾದ ದೇವಿಂದ್ರಪ್ಪ ಆಲ್ದಾಳ, ಸಂಗಣ್ಣ ದಿಗ್ಗಿ, ಸತೀಶ ತುಳೇರ ಉಪಸ್ಥಿತರಿದ್ದರು. ಎನ್.ಎಸ್.ಎಸ್. ‘ಬಿ’ ಘಟಕದ ಕಾರ್ಯಕ್ರಮಾಧಿಕಾರಿ ಗಂಗಣ್ಣ ಹೊಸ್ಮನಿ ಸ್ವಾಗತಿಸಿ ವಂದಿಸಿದರು.