ಪ್ರಮುಖ ಸುದ್ದಿ

ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಪಣ ತೊಡಿ – ದರ್ಶನಾಪುರ ಕರೆ

ಕಾರ್ಮಿಕರ ಜಿಲ್ಲಾ ಮಟ್ಟದ ಸಮಾವೇಶ

ಮಕ್ಕಳನ್ನು ಕಾರ್ಮಿಕರನ್ನಾಗಿಸಲ್ಲ ಪ್ರಮಾಣ ಮಾಡಿ – ದರ್ಶನಾಪುರ

ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಪಣ ತೊಡಿ – ದರ್ಶನಾಪುರ ಕರೆ

yadgiri, ಶಹಾಪುರಃ ವಿವಿದ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಶ್ರಮ ಜೀವಿಗಳು. ಕಾರ್ಮಿಕರು ಕಾರ್ಮಿಕರಾಗಿಯೇ ಉಳಿಯಬಾರದು ಸರ್ಕಾರಿ ಸವಲತ್ತುಗಳನ್ನು ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗುವ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬೇಕೆಂದು ಮಾಜಿ ಸಚಿವ, ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.

ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ರವಿವಾರ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ ಜಿಲ್ಲಾ ಘಟಕದಿಂದ ನಡೆದ ಕಾರ್ಮಿಕರ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರು ಒಂದು ಪಣ ತೊಡಬೇಕಿದೆ. ತಮಗೆ ಎಷ್ಟೆ ಕಷ್ಟ ಬಂದರೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುತ್ತೇವೆ. ನಮ್ಮ ಮಕ್ಕಳನ್ನು ನಮ್ಮಂತೆ ಕಾರ್ಮಿಕರನ್ನಾಗಿ ಮಾಡದೆ ಶೈಕ್ಷಣಿಕವಾಗಿ ಅವರನ್ನು ಬೆಳೆಸಿ ಉನ್ನತ ಹುದ್ದೆ ಅಲಂಕರಿಸುವಂತೆ ಮಾಡುತ್ತೇವೆ ಎಂದು ಇಂದು ಪ್ರಮಾಣೀಕರಿಸಬೇಕಿದೆ.

ಕಾರ್ಮಿಕರಿಗೆ ಸಾಕಷ್ಟು ಸರ್ಕಾರಿ ಸೌಲಭ್ಯಗಳಿವೆ. ಕಾರ್ಮಿಕರ ಬದುಕು ಹಸನುಗೊಳಿಸಲು ಸರ್ಕಾರ ಅವರಿಗೆ ಆರೊಗ್ಯ ವಿಮೆ, ಮಕ್ಕಳ ಶಿಕ್ಷಣಕ್ಕಾಗಿ ಪ್ರೋತ್ಸಾಹ ಧನ, ಮನೆ ಕಟ್ಟಿಕೊಳ್ಳಲು ಸಾಲ ಸಬ್ಸಿಡಿ ಸೌಲಭ್ಯ, ಎರಡು ಲಕ್ಷ ರೂ.ವರೆಗೆ ಆರೊಗ್ಯದ ವಿಮೆ, ಕಾರ್ಮಿಕರ ಮಕ್ಕಳ ಮದುವೆಗೆ 60 ಸಾವಿರ ರೂ. ಅಪಘಾತದಲ್ಲಿ ಮೃತರಾದರೆ ಸಹಾಯಧನ, ಕಾರ್ಮಿಕರು ಆಕಸ್ಮಿಕ ಮೃತರಾದರೆ ಧನ ಸಹಾಯ ಹೀಗೆ ಹತ್ತಾರು ಸವಲತ್ತುಗಳಿದ್ದು, ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಉಪಯುಕ್ತ ಸವಲತ್ತುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿದೆ. ಜನಪ್ರತಿನಿಧಿಗಳಾದ ನಮಗೆ ಅವುಗಳ ಕುರಿತು ಸಮರ್ಪಕ ಮಾಹಿತಿ ಇಲ್ಲ, ಹೀಗಾಗಿ ಕಾರ್ಮಿಕ ಸಂಘಟನೆ ಈ ಕುರಿತು ಗ್ರಾಮ ಗ್ರಾಮಗಳಲ್ಲಿ ಜಾಗೃತಿ ಮೂಡಿಸುತ್ತಿರುವದು ಶ್ಲಾಘನೀಯ ಕೆಲಸವಾಗಿದೆ ಎಂದರು.

ಸಂಘಟನೆಯ ರಾಜ್ಯಧ್ಯಕ್ಷ ಬಿ.ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ಸುಮಾರು 40 ಲಕ್ಷ ಕಾರ್ಮಿಕರಿಗೆ ಲೇಬರ್ ಕಾರ್ಡ್ ಮಾಡಿಸಲಾಗಿದೆ. ಯಾದಗಿರಿಯಲ್ಲಿ ಕಾರ್ಮಿಕರು ಸರ್ಕಾರಿ ಸವಲತ್ತು ಪಡೆದುಕೊಳ್ಳುವಲ್ಲಿ ಮುತುವರ್ಜಿ ವಹಿಸುತ್ತಿಲ್ಲ ಎನ್ನುವದಕ್ಕಿಂದ ಹೇಗೆ ಪಡೆಯಬೇಕು ಎಂಬುದು ಅವರಿಗೆ ಯಾರೊಬ್ಬರು ಹೇಳಿಲ್ಲ. ಹೀಗಾಗಿ ನಮ್ಮ ಸಂಘಟನೆ ಜಿಲ್ಲೆಯಾದ್ಯಂತ ಗ್ರಾಮಗಳಿಗೆ ಕಾರ್ಮಿಕ ಜಾಗೃತಿ ರಥ ಯಾತ್ರೆ ನಡೆಸುವ ಮೂಲಕ ಕಾರ್ಮಿಕರೆಲ್ಲರಿಗೂ ಉಚಿತವಾಗಿ ಕಾರ್ಮಿಕ ಕಾರ್ಡ್ ಮಾಡಿಸಿಕೊಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಎರಡು ಲಕ್ಷ ಕಾರ್ಮಿಕರನ್ನು ಗುರುತಿಸಿ ಸರ್ಕಾರಿ ಸೌಲಭ್ಯ ಒದಗಿಸುವ ಕಾರ್ಯ ಮಾಡುತ್ತೇನೆ ಎಂದು ವಾಗ್ದಾನ ನೀಡಿದರು.

ಸರ್ಕಾರಿ ಇಲಾಖೆಯಲ್ಲಿ ಕಾರ್ಮಿಕರಿಗಾಗಿ ಸಾಕಷ್ಟು ಯೋಜನೆಗಳಿದ್ದು, ಅವುಗಳನ್ನು ಕಾರ್ಮಿಕರಿಗೆ ಒದಗಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಪ್ರತಿಯೊಬ್ಬ ಕಾರ್ಮಿಕ ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಬೇಕು. ಕಾರ್ಮಿಕ ಇದ್ದರೇ ದೇಶ ಎಂಬುದನ್ನು ಮರೆಯಬೇಡಿ ಎಂದರು.

ಫಕೀರೇಶ್ವರ ಮಠದ ಗುರುಪಾದ ಮಹಾಸ್ವಾಮಿಗಳು, ಏಕದಂಡಗಿ ಮಠದ ಅಜೇಂದ್ರ ಸ್ವಾಮೀಜಿ, ಬುದ್ಧ ವಿಹಾರದ ಬಿಕ್ಕುಗಳು, ಗೋಗಿ ಚಂದಾಹುಸೇನಿ ದರ್ಗಾದ ಗುರುಗಳು, ಸೇಂಟ್ ಪೀಟರ್ ಚರ್ಚ್‍ನ ಫಾದರ್ ಕ್ಲೀವನ್ ಗೋಮ್ಸ್ ಸಾನ್ನಿಧ್ಯವಹಿಸಿದ್ದರು. ಡಾ.ಚಂದ್ರಶೇಖರ ಸುಬೇದಾರ, ಡಾ.ಶರಣು ಗದ್ದುಗೆ, ಕೆಂಚಪ್ಪ ನಗನೂರ, ಬಸವರಾಜ ಹಿರೇಮಠ, ಗುರು ಕಾಮಾ, ಮಲ್ಲಿಕಾರ್ಜುನ ಗಂಧದಮಠ, ಸಣ್ಣ ನಿಂಗಣ್ಣ ನಾಯ್ಕೋಡಿ, ರವೀಂದ್ರ ಹೊಸಮನಿ ಸೇರಿದಂತೆ ಸಂಘಟನೆಯ ರಾಜ್ಯ ಕಾರ್ಯಧ್ಯಕ್ಷ ಶ್ರೀನಿವಾಸ, ಜಿಲ್ಲಾ ಅಧ್ಯಕ್ಷ ಚಾಂದಪಾಶ, ಕಾರ್ಯದರ್ಶಿ ಬಸವರಾಜ ನಗನೂರ, ದೇವಿಂದ್ರಪ್ಪ ಕನ್ಯಾಕೋಳೂರ ಇತರರು ಉಪಸ್ಥಿತರಿದ್ದರು.

ಸಂಜೆ 6 ಗಂಟೆವರೆಗೂ ಕಾರ್ಮಿಕರಿಗೆ ನೂತನ ಲೇಬರ್ ಕಾರ್ಡ್ ಎಂಟ್ರಿ ಸೇರಿದಂತೆ ಇತರೆ ಸೌಕರ್ಯಗಳ ಮಾಹಿತಿ ಮತ್ತು ಗಣಕಯಂತ್ರದಲ್ಲಿ ಸರ್ಕಾರಿ ಯೋಜನೆಗಳನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸುವ ಕಾರ್ಯವನ್ನು ಸುಮಾರು 25 ಜನರು ನಿರಂತರವಾಗಿ ಕಾರ್ಮಿಕರಿಗೆ ಸೇವೆ ಮಾಡುವಲ್ಲಿ ನಿರತರಾಗಿರುವದು ಕಂಡು ಬಂದಿತು. ಕಾರ್ಯಕ್ರಮಕ್ಕೆ ಬಂದ ಸಹಸ್ರರಾರು ಕಾರ್ಮಿಕರಿಗೆ ಊಟದ ವ್ಯವಸ್ಥೆಯು ಮಾಡಲಾಗಿತ್ತು.

 

ಕಾರ್ಮಿಕ ಸಂಘಟನೆಗೆ ಜಾಗ ಒದಗಿಸುವೆ- ದರ್ಶನಾಪುರ

ಕಾರ್ಮಿಕ ಸಂಘಟನೆಯ ರಾಜ್ಯಧ್ಯಕ್ಷ ಬಿ.ದೇವರಾಜು ಅವರ ಬೇಡಿಕೆಯಂತೆ, ಶಹಾಪುರದಲ್ಲಿ ಕಾರ್ಮಿಕ ಸಂಘಟನೆಗೆ ಕಾರ್ಮಿಕ ಭವನ ನಿರ್ಮಾಣಕ್ಕಾಗಿ ಸೂಕ್ತ ಜಾಗ ಕೊಡಿಸುವ ಭರವಸೆಯನ್ನು ಶಾಸಕ ದರ್ಶನಾಪುರ ನೀಡಿದರು. ಈ ಸಂದರ್ಭದಲ್ಲಿ ರಾಜ್ಯಧ್ಯಕ್ಷ ದೇವರಾಜು ಅವರು, ಒಂದು ಎಕರೆಯಷ್ಟು ಜಾಗ ಕೊಟ್ಟಲ್ಲಿ ಕಾರ್ಮಿಕ ಕಲ್ಯಾಣ ಮಂಟಪ, ಭವನ ಇತರೆ ಕಾರ್ಯಗಳಿಗೆ ಅನುಕೂಲವಾದೀತು ಎಂದು ಮತ್ತೊಮ್ಮೆ ಬೇಡಿಕೆಯನ್ನಿಟ್ಟರು.

ಈ ಸಂದರ್ಭದಲ್ಲಿ ಸ್ಪಂಧಿಸಿದ ಶಾಸಕ ದರ್ಶನಾಪುರ ಅರ್ಧ ಎಕರೆಯಷ್ಟು ಜಾಗ ಒದಗಿಸುವ ಕಾರ್ಯ ಮಾಡುವೆ. ಕಾರ್ಮಿಕ ಇಲಾಖೆಯಿಂದ ಅನುದಾನ ತಂದು ಅದನ್ನು ಕಟ್ಟಡ ನಿರ್ಮಿಸಿಕೊಳ್ಳುವ ಕೆಲಸ ನಿಮ್ಮದು ಎಂದರು. ಸಹಮತ ವ್ಯಕ್ತಪಡಿಸಿದ ದೇವರಾಜು ಅವರು ಕಾರ್ಮಿಕ ಇಲಾಖೆಯಿಂದ ಸುಮಾರು ಒಂದು ಕೋಟಿ ಅನುದಾನ ತರುವ ಕಾರ್ಯ ನಾನು ಮಾಡುತ್ತೇನೆ ಸರ್ ನೀವು ಜಾಗ ಒದಗಿಸಿ ಕೊಟ್ರೆ ಸಾಕು ಎಂದರು.

Related Articles

Leave a Reply

Your email address will not be published. Required fields are marked *

Back to top button