ಮಾಜಿ ಡಿವೈಎಸ್ಪಿ ಅನುಪಮಾ ಶಣೈ ನೇತೃತ್ವದಲ್ಲಿ ಹೊಸ ಪಕ್ಷ ಉದಯ
ಮೌಲ್ಯಾಧಾರಿತ ರಾಜಕಾರಣ ನಮ್ಮ ಗುರಿ – ಅನುಪಮಾ ಶಣೈ
ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕೂಡ್ಲಗಿ ವಿಭಾಗದ ಡಿವೈಎಸ್ಪಿ ಆಗಿದ್ದಾಗ ಅಂದಿನ ಸಚಿವ ಪರಮೇಶ್ವರ್ ನಾಯಕ್ ವಿರುದ್ಧ ಸೆಡ್ಡು ಹೊಡೆದಿದ್ದ ಅನುಪಮಾ ಶಣೈ ಕೊನೆಗೆ ಡಿವೈಎಸ್ಪಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಮಾಜಿ ಡಿವೈಎಸ್ಪಿ ಅನುಪಮಾ ಶಣೈ ರಾಜಕೀಯಕ್ಕೆ ಎಂಟ್ರಿ ಆಗಿದ್ದು ಹೊಸ ಪಕ್ಷದ ಉದಯಕ್ಕೆ ಕಾರಣರಾಗಿದ್ದಾರೆ. ಕೂಡ್ಲಗಿ ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಹೊಸ ಪಕ್ಷಕ್ಕೆ ಚಾಲನೆ ನೀಡಲಾಗಿದೆ. ಅನುಪಮಾ ಶಣೈ ನೇತೃತ್ವದ ಹೊಸ ಪಕ್ಷದ ಹೆಸರು ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷ ಎಂದು ಘೋಷಿಸಿದರು.
ಈ ವೇಳೆ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಅನುಪಮಾ ಶಣೈ ಮಾತನಾಡಿ ನಾವು ಭಾರತೀಯ ರಾಷ್ಟ್ರವಾದವನ್ನು ಪ್ರತಿಪಾದಿಸುತ್ತೇವೆ. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡುವುದು ನಮ್ಮ ಪಕ್ಷದ ಗುರಿ. ಪ್ರಜಾಪ್ರಭುತ್ವದ ರಕ್ಷಣೆ ನಮ್ಮ ಪಕ್ಷದ ಧ್ಯೇಯ. ಜನಪರ ಮತ್ತು ಕನೂನುಪರ ಆಡಳಿತ, ಅಸ್ಪೃಶ್ಯತೆ ನಿವರಣೆಗಾಗಿ ಶ್ರಮಿಸುವುದು. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ ಪ್ರಮಾಣಿಕರಿಗೆ ಮತ್ತು ಪ್ರಾಮಾಣಿಕ ಅಧಿಕಾರಿಗಳಿಗೆ ಪ್ರೇರಣೆ ನೀಡುವುದು, ಕೃಷಿಗೆ ಪ್ರಾಧಾನ್ಯತೆ ನೀಡುವುದು, ಮಹಿಳಾಪರ, ಮಾನವೀಯತೆಯ ಆಡಳಿತ ನೀಡುವುದು. ಮೌಲ್ಯಾಧಾರಿತ ರಾಜಕಾರಣ ಮಾಡುವುದು ನಮ್ಮ ಗುರಿ ಎಂದು ತಿಳಿಸಿದರು.