ಪ್ರತಿ ವಾರ್ಡಿಗೆ ಎರಡು ತರಕಾರಿ ತಳ್ಳು ಬಂಡಿ ವ್ಯವಸ್ಥೆ- ದರ್ಶನಾಪುರ
ಲಾಕ್‍ಡೌನ್ ಃ ಶಾಸಕ ದರ್ಶನಾಪುರರಿಂದ ಸಭೆ
ಶಹಾಪುರಃ ಕೊರೊನಾ ವೈರಸ್ ಭೀತಿಯಿಂದ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಜನರು ಮನೆಯಿಂದ ಹೊರ ಬಾರದಂತೆ ನಿರ್ಬಂಧಿಸಲಾಗಿದೆ. ದೈನಂದಿನ ಬದುಕಿಗಾಗಿ ಪರದಾಡುವಂತಾಗಿದೆ. ಮಹಾಮಾರಿ ವೈರಸ್ ತಡೆಗೆ ಲಾಕ್ ಡೌನ್ ನೀತಿಗಳನ್ನು ಪಾಲನೆ ಮಾಡಬೇಕಾಗಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ಇಲ್ಲಿನ ಗಣೇಶ ನಗರದ ಅವರ ಕಚೇರಿಯಲ್ಲಿ ನಡೆದ ಕೊರೊನಾ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಲಾಕ್‍ಡೌನ್ ಸಂದರ್ಭದಲ್ಲಿ ದಿನದ ಜೀವನಕ್ಕಾಗಿ ಬೇಕಾಗುವ ಜೀವನೋಪಯೋಗಿ ಅಗತ್ಯವೆನಿಸಿದ ತರಕಾರಿ ಸುಲಭವಾಗಿ ದೊರೆಯುವಂತೆ ಪ್ರತಿ ವಾರ್ಡಿಗೆ ಎರಡು ತಳ್ಳು ಬಂಡಿಯ ವ್ಯವಸ್ಥೆ ಮಾಡಬೇಕಿದೆ.
ಅಲ್ಲದೆ ಮುಖ್ಯವಾಗಿ ವಲಸೆ ಹೋಗಿದ್ದವರು ಹೊರ ರಾಜ್ಯ, ಜಿಲ್ಲೆಗಳಿಂದ ತಮ್ಮ ತಮ್ಮ ಸ್ವಗ್ರಾಮಗಳಿಗೆ ಮರಳುತ್ತಿದ್ದಾರೆ. ವಾಪಾಸ್ ಆಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಅವರನ್ನು ಸೂಕ್ತ ತಪಾಸಣೆಗೊಳಪಡಿಸಬೇಕು. ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಸಿಬ್ಬಂದಿ ತೀವ್ರ ನಿಗಾವಹಿಸಬೇಕು. ಮರಳಿದ ವಲಸೆ ಕುಟುಂಬಗಳಿಗೆ ಆರೋಗ್ಯ ನಿಗಾವಹಿಸಿವ ಜವಾಬ್ದಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳದ್ದಾಗಿದೆ ಆಯಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಿರುವಂತೆ ಸೂಚನೆ ನೀಡಲು ತಿಳಿಸಿದರು.
ನಗರದ ಪ್ರತಿ ವಾರ್ಡ ಗಲ್ಲಿಗಳಲ್ಲಿ ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಬೇಕು. ಸಮರ್ಪಕವಾಗಿ ಬ್ಲೀಚಿಂಗ್ ಪೌಡರ್ ಫಾಗಿಂಗ್ ವ್ಯವಸ್ಥೆಗೊಳಿಸಬೇಕು. ಮತ್ತು ನಗರದಲ್ಲಿ ಕಿರಾಣಿ, ಮೆಡಿಕಲ್ ಅಂಗಡಿಗಳು ಸೇರಿದಂತೆ ಖಾಸಗಿ ಆಸ್ಪತ್ರೆಗಳು ನಿರಂತರವಾಗಿ ತೆರೆಯುವಂತೆ ಸೂಕ್ತ ನಿಯಮಗಳನ್ನು ಪಾಲಿಸುವಂತೆ ಸೂಚಿಸಬೇಕು ಎಂದು ತಿಳಿಸಿದರು.
ರಸ್ತೆಗಿಳಿದ ಬೈಕ್ ಸವಾರರನ್ನು ನಿಯಂತ್ರಿಸಿ
ದೇಶವೇ ಆತಂಕದಲ್ಲಿದ್ದರೂ ಕೆಲವರು ತಮ್ಮ ಬೈಕ್‍ಗಳ ಮೆಲೆ ಅನಾವಶ್ಯಕವಾಗಿ ರಸ್ತೆಗಳಲ್ಲಿ ಗಲ್ಲಿಗಳಲ್ಲಿ ಓಣಿಗಳಲ್ಲಿ ಓಡಾಡುತ್ತಿದ್ದು ಅವರನ್ನು ಪೋಲಿಸರು ನಿಯಂತ್ರಿಸಬೇಕು. ನಿಯಮಗಳನ್ನು ಉಲ್ಲಂಘನೆ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದ ಅವರು, ಪಡ್ಡೆ ಹುಡಗರು ಮತ್ತು ಗುಟ್ಕಾ ತಿನ್ನುವ ಚಟವಿರುವವರು ಚಟಕ್ಕಾಗಿ ಗುಟ್ಕಾ ಹುಡುಕುತ್ತಾ ತಿರುಗುತ್ತಿದ್ದಾರೆ. ಇಂತವರಿಗೆ ಪಾಠ ಕಲಿಸಬೇಕು ಮತ್ತು ಅಲ್ಲಲ್ಲಿ ಗುಂಪು ಗುಂಪಾಗಿ ನಿಲ್ಲುವವರಿಗೂ ಬಿಸಿ ಮುಟ್ಟಿಸಿ ಎಂದರು.
ಸಭೆಯಲ್ಲಿ ತಹಶೀಲ್ದಾರ ಜಗನ್ನಾಥರಡ್ಡಿ, ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ, ಸಿಪಿಐ ಹನುಮರಡ್ಡೆಪ್ಪ, ತಾಲೂಕಾ ಆರೋಗ್ಯ ಅಧಿಕಾರಿ ಡಾ.ರಮೇಶ ಗುತ್ತೇದಾರ, ನಗರ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಲ್ಲಪ್ಪ ಕಣಜಿಗಿಕರ್, ನಗರಸಭೆ ಅಧಿಕಾರಿ ಹರೀಶ ಸಜ್ಜನ್ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.