‘ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ’- ದಾಖಲೆ ನೀಡಿದ ಆರ್ ಅಶೋಕ್

ಮಂಡ್ಯ: ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ದಾಖಲೆ ಸಮೇತ ಆರೋಪ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾದಲ್ಲಿ 14 ಸೈಟ್ ಜಮೀನು ತೆಗೊಂಡಿದ್ದಾರೆ. ಇದು ನಿಂಗ ಎಂಬುವರಿಗೆ ಸೇರಿದ ಜಮೀನಾಗಿದೆ. ನಿಂಗ ಎಂಬುವರು 1935ರಲ್ಲಿ 1 ರೂಪಾಯಿಗೆ ಕೊಂಡುಕೊಂಡಿದ್ದರು. ಇದಾದ ನಂತರ ನಿಂಗ ಮೃತಪಟ್ಟರು. ನಿಂಗ ಅವರ ಪತ್ನಿ ನಿಂಗಮ್ಮ ಅವರು 1990ರಲ್ಲಿ ನಿಧನರಾದರು. ನಿಂಗ ಕುಟುಂಬಸ್ಥರ ವಂಶ ವಂಶದಲ್ಲಿ 27 ಜನರು ಇದ್ದಾರೆ ಎಂದು ತಿಳಿಸಿದರು.
1968ರಲ್ಲಿ ಸರ್ವೆ ನಂಬರ್ 464ರಲ್ಲಿನ ಇದೇ ಜಮೀನು ನಿಂಗಾ ಅವರ ಮತ್ತೋರ್ವ ಪುತ್ರ ಮಲ್ಲಯ್ಯ ಅವರ ಹೆಸರಿಗೆ ರಿಜಿಸ್ಟರ್ ಆಗುತ್ತದೆ. ನಂತರ 1990ರಲ್ಲಿ ಸರ್ವೆ ನಂಬರ್ 464 ಜಮೀನು ಸೇರಿದಂತೆ 462 ಎಕರೆ ಜಮೀನನ್ನು ದೇವನೂರು ಬಡವಾಣೆ ನಿರ್ಮಾಣಕ್ಕೆ ಮುಡಾ ಪ್ರಾಥಮಿಕ ಅಧಿಸೂಚನೆ ಹೊರಡಿಸುತ್ತದೆ. ನಂತರ ದೇವರಾಜು ಅವರಿಗೆ ಮುಡಾ 3 ಲಕ್ಷ ರೂ. ಅವಾರ್ಡ್ ನೀಡುತ್ತಾರೆ. ಈ ಅವಾರ್ಡ್ ನೋಟಿಸ್ಗೆ ಮಲ್ಲಯ್ಯ ಅವರು ಸಹಿ ಹಾಕುತ್ತಾರೆ. ನಂತರ 1998ರಲ್ಲಿ ಮುಡಾ ಸರ್ವೆ ನಂಬರ್ 464 ಅನ್ನು ಭೂಸ್ವಾದಿನ ಕೈಬಿಡುತ್ತದೆ.
ನಂತರ ಈ ಜಮೀನು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಡಿನೋಟಿಫಿಕೇಷನ್ ಆಗುತ್ತದೆ. ಅವಾರ್ಡ್ ಆದ ಮೇಲೆ ಡಿನೋಟಿಫಿಕೇಷನ್ ಆಗಲು ಸಾಧ್ಯವೇ ಇಲ್ಲ. ಆದರೂ ಹೇಗೆ ಡಿನೋಟಿಫಿಕೇಷನ್ ಆಗುತ್ತದೆ. ಈ ವೇಳೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದರು. ಸಿದ್ದರಾಮಯ್ಯ ಅವರು ನಿಂಗಾ ಅವರ ಮೂವರು ಪುತ್ರರಲ್ಲಿ ದೇವರಾಜು ಎಂಬ ಓರ್ವ ಪುತ್ರನಿಂದ ಸಹಿ ಹಾಕಿಸಿಕೊಂಡಿದ್ದಾರೆ. ಆದರೆ, ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ ಇದು ನಿಯಮ ಬಾಹಿರವಾಗಿದೆ. ಒಬ್ಬರ ಕೈಯಿಂದ ಸಹಿ ಹಾಕಿಸಿಕೊಂಡು ರಿಜಿಸ್ಟರ್ ಮಾಡಿಕೊಳ್ಳಲು ಆಗಲ್ಲ ಎಂದು ತಿಳಿಸಿದರು.
2010ರಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಅವರ ಅಣ್ಣ ಅರಿಶಿಣ ಕುಂಕುಮ ರೂಪದಲ್ಲಿ 3.16 ಎಕರೆ ಜಮೀನು ನೀಡುತ್ತಾರೆ. 2014ರಲ್ಲಿ ಪಾರ್ವತಿ ಅವರು ಮೂಡಾಗೆ “ನನಗೆ ಬಂದ ಜಮೀನಿನಲ್ಲಿ ನೀವು ಬಡಾವಣೆ ಮಾಡಿದ್ದೀರಿ, ಬದಲಿ ಜಾಗವನ್ನು ನನಗೆ ನೀಡಿ ಎಂದು ಪತ್ರ ಬರೆಯುತ್ತಾರೆ. 2014 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು, ಆಗ 50:50 ಅನುಮಾಪದಲ್ಲಿ ಹಂಚಿಕೆ ಮಾಡಲಾಗುತ್ತದೆ ಎಂದು ನಿಯಮ ಜಾರಿಗೆ ತಂದರು.
2017ರಲ್ಲಿ ಮುಡಾದಲ್ಲಿ ಪಾರ್ವತಿ ಅವರ ಜಾಮೀನಿನ ವಿಚಾರ ಚರ್ಚೆಗೆ ಬರುತ್ತದೆ. ಆಗ 50:50 ಅನುಪಾತದಲ್ಲಿ ಬದಲಿ ನಿವೇಶನ ಕೊಡಲು ನಿರ್ಧಾರ ಮಾಡಲಾಗುತ್ತದೆ ಎಂದು ಆಶೋಕ್ ದಾಖಲೆ ನೀಡಿ ಮಾಹಿತಿ ನೀಡಿದರು.