ಪ್ರಮುಖ ಸುದ್ದಿಬಸವಭಕ್ತಿ

ಬ್ರಿಟೀಷರ ಕಾಲದಲ್ಲೇ ಲಿಂಗಾಯತ ಪ್ರತ್ಯೇಕ ಧರ್ಮವಾಗಿತ್ತು- ಉಪ್ಪಿನ್

ಬ್ರಿಟೀಷರ ಕಾಲದಲ್ಲೇ ಲಿಂಗಾಯತ ಪ್ರತ್ಯೇಕ ಧರ್ಮವಾಗಿತ್ತು’

ವಿಜಯಪುರ ಜಿಲ್ಲೆಯ ಒಳ ಮರ್ಮದ ರಾಜಕೀಯ ಮೇಲಾಟದ ಕಾರಣಕ್ಕೆ ಲಿಂಗಾಯತ ಚಳವಳಿಯಿಂದಲೇ ಕಾಂಗ್ರೆಸ್‌ಗೆ ಸೋಲಾಯಿತು ಎನ್ನುವ ಟೀಕೆ ಮಾಡಿದ್ದು ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಶೋಭೆ ತರುವುದಲ್ಲ ಎಂದು ಬರಹಗಾರ, ಲಿಂಗಾಯತ ಹೋರಾಟಗಾರ ಶಿವಕುಮಾರ್ ಉಪ್ಪಿನ ಕಳವಳ ವ್ಯಕ್ತಪಡಿಸಿದ್ದಾರೆ.

ಧರ್ಮ ವಿಭಜನೆ ಮಾಡಿದ್ದಲ್ಲ, ಬಸವಣ್ಣರ ಕೆಲಸವನ್ನು ನಾನು ಮುಂದುವರಿಸಿದ್ದೇನೆ ಎಂದು ಆ ನಿರ್ಧಾರಕ್ಕೆ ಕಾರಣರಾದ ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರೇ ಎಷ್ಟೋ ಸಲ ಸ್ಪಷ್ಟಪಡಿಸಿದ್ದಾರೆ. ಕೆಲ ಕಿಡಿಗೇಡಿತನ, ಅಪ ಪ್ರಚಾರದಿಂದ ತಮ್ಮ ನಿರ್ಧಾರಕ್ಕೆ ಮಸಿ ಬಳಿದು ಜನರ ದಾರಿ ತಪ್ಪಿಸಲಾಯಿತು. ಲಿಂಗಾಯತ ಧರ್ಮ ವಿಭಜನೆ ಮಾಡಿಲ್ಲ. ಅದು ಯಾವತ್ತೋ ಧರ್ಮವಾಗಿತ್ತು ಎಂದು ಹೇಳಿದ್ದಾರೆ.

ಇದೆಲ್ಲ ಗೊತ್ತಿದ್ದೂ ಯಶವಂತರಾಯರು ಎಂ.ಬಿ. ಪಾಟೀಲರನ್ನು ಗುರಿಯಾಗಿಟ್ಟಕೊಂಡು ಹೀಗೆ ಹೇಳಿಕೆ ನೀಡಿದ್ದು ಲಿಂಗಾಯತ ಸಮುದಾಯಕ್ಕೇ ಮಾಡಿದ ಹಾನಿ ಎಂದು ಶಿವಕುಮಾರ್ ಖೇದ ವ್ಯಕ್ತಪಡಿಸಿದ್ದಾರೆ.

ಎಂ.ಬಿ. ಪಾಟೀಲರು ನಿಜ ಲಿಂಗಾಯತ ಧರ್ಮ, ಬಸವಾದಿ ಶರಣರ ಸಾಮಾಜಿಕ, ಸಮಾನತೆಯ ಕ್ರಾಂತಿಯನ್ನು ಮನನ ಮಾಡಿಕೊಂಡು ಅರಿವು ಬಿತ್ತುವ ಕೆಲಸ ಮಾಡಿದ್ದಾರೆ.

ಇದರಿಂದ ಲಿಂಗಾಯತದ ಬಗ್ಗೆ ಮಹತ್ತರ ಬೆಳಕು ಚೆಲ್ಲಲು ಅನುವಾಗಿದ್ದಾರೆ. ಹಳೆಯ ಮೈಸೂರು ಭಾಗದಿಂದ ಉತ್ತರ ಕರ್ನಾಟಕದ ಎಲ್ಲೆಡೆ ಇದರಿಂದ ಜಾಗೃತಿ ಮೂಡಿದೆ. ನಾಡಿನ ಬಸವಾದಿ ಪರಂಪರೆಯ ಮಠಗಳ ಅಗ್ರಗಣ್ಯ ಮಠಾಧೀಶರು, ಪ್ರಗತಿಪರರು ಈ ಚಳವಳಿಗೆ ಕಾರಣರಾಗಿದ್ದರು.

ಸಮಾಜವಾದಿ ಹಿನ್ನೆಲೆಯಿಂದ ಬಂದ, ಬಸವಾನುಯಾಯಿ ಸಿದ್ದರಾಮಯ್ಯರು ಇದ್ದಕ್ಕೆ ತಾರ್ಕಿಕ ಅಂತ್ಯ ಕಾಣಿಸಿದ್ದು ಮರೆಯಬಾರದು. ಹಾಗಾಗಿ ತಮ್ಮದೇ ಪಕ್ಷದ ನಾಯಕರ ನಿರ್ಧಾರವನ್ನು ಪ್ರಶ್ನಿಸಿದಂತಾಗಿ, ಲಿಂಗಾಯತದ ಬೆಳವಣಿಗೆಗೆ ಯಶವಂತರಾಯ ಪಾಟೀಲರೇ ಅಡ್ಡಲಾದಂತೆ ಆಗುತ್ತದೆ ಎಂದು ಉಪ್ಪಿನ್ ನೋವಿನಿಂದ ಪ್ರತಿಕ್ರಿಯಿಸಿದ್ದಾರೆ.

ಇಂಡಿಯ ಶಾಸಕರು ಲಿಂಗಾಯತ ಪರಂಪರೆ ಅರಿತು, ಇನ್ನಾದರೂ ಎಲ್ಲ ನಾಯಕರು ಒಟ್ಟಾದರೆ ಬಸವಣ್ಣನವರು ಬಯಸಿದ್ದ ಕಲ್ಯಾಣ ಕರ್ನಾಟಕ ಕಟ್ಟಲು ಸಾಧ್ಯ. ಅದು ಬಿಟ್ಟು ನಮ್ಮವರೇ ನಮ್ಮ ಕಾಲು ಎಳೆದರೆ, ನೋಡಿದವರು ನಗಾಡುತ್ತಾರೆ.

ಇನ್ನು ಎಂ.ಬಿ. ಪಾಟೀಲರು ಬಿಎಲ್‌ಡಿಇ ಶಿಕ್ಷಣ ಸಂಸ್ಥೆಯನ್ನು ಉನ್ನತೀಕರಿಸಿ, ಸಾಮಾನ್ಯನಿಗೂ ಅದರ ಲಾಭ ಸಿಗುವಂತೆ ಮಾಡಿದ್ದಾರೆ. ಬಂಥನಾಳ ಶಿವಯೋಗಿಗಳು ಸೇರಿದಂತೆ ಹಲವರ ಒತ್ತಾಸೆಗೆ ನೀರು ಎರೆಯುತ್ತಿದ್ದಾರೆ.

ಕರೋನಾ ಸಂದರ್ಭದಲ್ಲಿ ಇವರು ಮಾಡಿದ ಕಾರ್ಯ ದೇಶದ ಜನರ ಗಮನ ಸೆಳೆದಿದ್ದೇ ಇದಕ್ಕೆ ಸಾಕ್ಷಿ ಎಂದು ಶಿವಕುಮಾರ್ ಹೇಳಿದ್ದು, ಬ್ರಿಟೀಷರ ಕಾಲದಲ್ಲೇ ಲಿಂಗಾಯತ ಧರ್ಮ ಪ್ರತ್ಯೇಕವಾಗಿತ್ತು. ಅದನ್ನು ಯಾರೂ ಒಡೆದಿಲ್ಲ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹಾನಿಯೂ ಆಗಿಲ್ಲ. ಏನೇ ಕೆಲಸ ಮಾಡಿದರೂ ಜನ ಸರಕಾರ ಬದಲಿಸೋದು ಮೊದಲಿನಿಂದಲೂ ಬಂದಿದೆ. ಈಗಲೂ ಅಷ್ಟೇ ಆಗಿದೆ ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button