ಕುಡಿಯುವ ನೀರು ಪೂರೈಕೆಯಲ್ಲಿ ನಿರ್ಲಕ್ಷ್ಯವಹಿಸಿದ್ದಲ್ಲಿ ಕಠಿಣ ಕ್ರಮ-ಪಾಟೀಲ್
ಕುಡಿಯುವ ನೀರು ಪೂರೈಕೆಯಲ್ಲಿ ನಿರ್ಲಕ್ಷ್ಯವಹಿಸಿದರೆ ಕ್ರಮ
ಯಾದಗಿರಿಃ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವರು, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಾಜಶೇಖರ ಬಿ.ಪಾಟೀಲ್ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಬರ ಪರಿಹಾರ ಹಾಗೂ ಕಾರ್ಯನಿರ್ವಹಣೆ ಕುರಿತು ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಕುಡಿಯುವ ನೀರು ಪೂರೈಕೆಗೆ ಹಣದ ಕೊರತೆ ಇಲ್ಲ. ಈ ವಿಷಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಗೆ ಖುದ್ದಾಗಿ ಹಾಜರಾಗಿ: ಪ್ರಗತಿ ಪರಿಶೀಲನಾ ಸಭೆ ಸೇರಿದಂತೆ ಯಾವುದೇ ಸಭೆ ಇದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಂಪೂರ್ಣ ಮಾಹಿತಿಯ ಜೊತೆಗೆ ಖುದ್ದಾಗಿ ಹಾಜರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶಹಾಪುರ ತಾಲ್ಲೂಕಿನಲ್ಲಿ 105 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, 68 ಕಾರ್ಯನಿರ್ವಹಿಸುತ್ತಿವೆ. ಸುರಪುರ ತಾಲ್ಲೂಕಿನಲ್ಲಿ 110 ಘಟಕಗಳಿದ್ದು, 60 ಕಾರ್ಯನಿರ್ವಹಿಸುತ್ತಿವೆ. ಯಾದಗಿರಿ ತಾಲ್ಲೂಕಿನಲ್ಲಿ 111 ಘಟಕಗಳಿದ್ದು, 69 ಕಾರ್ಯನಿರ್ವಹಿಸುತ್ತಿವೆ. ಈ ಪರಿಶೀಲನಾ ವರದಿಯನ್ನು ಮೂರನೇ ತಂಡದಿಂದ ತಯಾರಿಸಲಾಗಿದ್ದು, ಈ ಬಗ್ಗೆ ಆಕ್ಷೇಪ ಇದ್ದರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು.
ಒಂದು ವೇಳೆ ಸಂಬಂಧಪಟ್ಟ ಇಲಾಖೆಯವರು ತಪ್ಪು ಮಾಹಿತಿ ನೀಡಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಶಾಸಕರಾದ ನಾಗನಗೌಡ ಕಂದಕೂರ ಅವರು ಮಾತನಾಡಿ, ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಾಗಿ ಪ್ಲೋರೈಡ್ ನೀರು ಇದೆ. ಈ ಬಗ್ಗೆ ಪ್ರತಿ ಸಭೆಯಲ್ಲಿ ಪ್ರಸ್ತಾಪಿಸಿ, ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರಾದ ಶರಣಬಸಪ್ಪಗೌಡ ದರ್ಶನಾಪೂರ ಹಾಗೂ ವೆಂಕಟರಡ್ಡಿಗೌಡ ಮುದ್ನಾಳ ಅವರು ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಅಧಿಕಾರಿಗಳು ನೀಡಿದ ವರದಿ ತಪ್ಪಾಗಿದೆ. ವಾಸ್ತವದಲ್ಲಿ ಅವರು ಹೇಳಿರುವಷ್ಟು ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ, ನಗರಪ್ರದೇಶದಲ್ಲಿ 3 ದಿನಗಳಿಗೆ ಬದಲು 2 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಜ್‍ಕುಮಾರ್ ಪತ್ತಾರ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 24 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ, ವಿವಿಧ ಗ್ರಾಮಗಳಲ್ಲಿ ಒಟ್ಟು 52 ಖಾಸಗಿ ಬೋರ್‍ವೆಲ್‍ಗಳಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಶೇ.45ರಷ್ಟು ಮಳೆ ಕೊರತೆ: ಜಂಟಿ ಕೃಷಿ ನಿರ್ದೇಶಕರಾದ ದೇವಿಕಾ ಆರ್. ಅವರು ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದ್ದು, ರೈತರು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಜಿಲ್ಲೆಯಾದ್ಯಂತ ಮಾರ್ಚ್‍ನಿಂದ ಮೇ 31ರವರೆಗೆ ಪೂರ್ವ ಮುಂಗಾರು 62 ಮಿ.ಮೀ ಮಳೆ ಆಗಬೇಕಿತ್ತು. ಆದರೆ, 34 ಮಿ.ಮೀ ಮಾತ್ರ ಮಳೆ ಸುರಿದಿದ್ದು, ಶೇ.45ರಷ್ಟು ಮಳೆ ಕೊರತೆ ಇದೆ ಎಂದು ಸಭೆಗೆ ಮಾಹಿತಿ ನೀಡಿದರು.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಪ್ರಮುಖ ಬೆಳೆಗಳಾದ ತೊಗರಿ, ಉದ್ದು, ಹೆಸರು, ¸ನಿಗಮ (ಕೆಎಸ್‍ಎಸ್‍ಸಿ), ರಾಷ್ಟ್ರೀಯ ಬೀಜ ನಿಗಮ (ಎನ್‍ಎಸ್‍ಸಿ) ಹಾಗೂ ಖಾಸಗಿ ಸಂಸ್ಥೆಗಳಿಂದ ದಾಸ್ತಾನು ಮಾಡಲಾಗಿದೆ. ರಸಗೊಬ್ಬರ 79,285 ಮೆಟ್ರಿಕ್ ಟನ್ ಬೇಡಿಕೆ ಇದ್ದು, 95,567 ಮೆಟ್ರಿಕ್ ಟನ್ ಜಿಲ್ಲೆಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಮೇ ಅಂತ್ಯದವರೆಗೆ 12,130 ಮೆಟ್ರಿಕ್ ಟನ್ ರಸಗೊಬ್ಬರವನ್ನು ಖಾಸಗಿ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿಯಲ್ಲಿ ಈಗಾಗಲೇ ದಾಸ್ತಾನು ಇದೆ. ಹಾಗಾಗಿ, ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಇರುವುದಿಲ್ಲ.
ಮಳೆ ಬರದಿದ್ದರೆ ಪರ್ಯಾಯ ಬೆಳೆ ಪದ್ಧತಿ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ತಿಳಿಸಿದರು.
ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಹೋಬಳಿ ಮಟ್ಟದ ಎಲ್ಲಾ ಬೆಳೆಗಳಿಗೆ ಹೆಸರು ನೋಂದಾಯಿಸಲು ಜುಲೈ 31ರವರೆಗೆ ಅವಕಾಶ ಇದೆ.
ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ಭತ್ತ (ನೀರಾವರಿ), ತೊಗರಿ (ಮಳೆ ಆಶ್ರಿತ) ಬೆಳೆಗಳಿಗೆ ಹೆಸರು ನೋಂದಾಯಿಸಲು ಆಗಸ್ಟ್ 14 ಕೊನೆಯ ದಿನವಾಗಿದೆ. ವಿಮಾ ಮೊತ್ತವು ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿದೆ. ಜಿಲ್ಲೆಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಫ್ಯೂಚರ್ ಜನರಲ್ ಇನ್ಸೂರೆನ್ಸ್ ಕಂಪನಿಯನ್ನು ನಿಗದಿಪಡಿಸಲಾಗಿದೆ.
ಬೆಳೆ ವಿಮೆ ಬಗ್ಗೆ ಕೃಷಿ ಅಭಿಯಾನ ಮತ್ತು ವಿಮೆ ಪರಿಹಾರ ಪಡೆದ ರೈತರಿಂದ ಪ್ರಚಾರ ಮಾಡಲಾಗುತ್ತಿದೆ. ಇನ್ನು 2018-19ನೇ ಸಾಲಿನಲ್ಲಿ 48 ರೈತರ ಆತ್ಮಹತ್ಯೆ ಪ್ರಕರಣ ವರದಿಯಾಗಿದ್ದು, ಇವುಗಳಲ್ಲಿ 9 ರೈತರ ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. ಒಪ್ಪಲಾದ 37 ಪ್ರಕರಣಗಳ ರೈತರ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಲಾಗಿದ್ದು, 2 ಪ್ರಕರಣಗಳ ಎಫ್‍ಎಸ್‍ಎಲ್ ವರದಿ ಬರಬೇಕಿದೆ ಎಂದು ವಿವರಿಸಿದರು.
ಎಂಪಿ ಜಾಧವ ಸಲಹೆ
ಲೋಕಸಭಾ ಸದಸ್ಯರಾದ ಡಾ.ಉಮೇಶ ಜಿ.ಜಾಧವ್ ಅವರು ಮಾತನಾಡಿ, ಬೆಳೆ ವಿಮೆ ಬಗ್ಗೆ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ಹಿಂದಿನ ವರ್ಷಗಳಲ್ಲಿ ಬಾಕಿಯಿರುವ ವಿಮಾ ಮೊತ್ತವನ್ನು ಸಂಬಂಧಪಟ್ಟ ರೈತರಿಗೆ ತಲುಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಮುಂದಿನ ಸಭೆಗಳಲ್ಲಿ ಅಧಿಕಾರಿಗಳು ಇಲಾಖೆಗಳ ಮಾಹಿತಿಯನ್ನು ವಿಧಾನಸಭಾ ಕ್ಷೇತ್ರವಾರು ನೀಡಬೇಕು. ಇದರಿಂದ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನರ ಪ್ರಶ್ನೆಗಳಿಗೆ ಉತ್ತರಿಸಲು ಅನುಕೂಲವಾಗುತ್ತದೆ ಎಂದು ಅವರು ಸಲಹೆ ನೀಡಿದರು.
ಹೊಸ ಬೆಳೆಸಾಲ ವಿತರಣೆ: ವಾಣಿಜ್ಯ ಬ್ಯಾಂಕ್‍ಗಳ ರೈತರ ಬೆಳೆ ಸಾಲಮನ್ನಾಗೆ ಸಂಬಂಧಿಸಿದಂತೆ ಜಿಲ್ಲೆಯ 69,965 ರೈತರು ಅರ್ಹರಾಗಿದ್ದು, ಸಾಲಮನ್ನಾ ಮೊತ್ತ 528 ಕೋಟಿ ರೂ. ಆಗಿದೆ. ಇದರಲ್ಲಿ 204.46 ಕೋಟಿ ರೂ. ಬಿಡುಗಡೆಯಾಗಿದೆ. ರೈತರಿಗೆ ಹೊಸ ಬೆಳೆಸಾಲ ವಿತರಿಸಲಾಗುತ್ತಿದೆ ಎಂದು ಲೀಡ್ ಬ್ಯಾಂಕ್ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಸಹಕಾರ ಸಂಘಗಳ ಉಪನಿಬಂಧಕರಾದ ವಿಶ್ವನಾಥ ಮಲಕೂಡ ಅವರು ಮಾತನಾಡಿ, ಸಹಕಾರ ಬ್ಯಾಂಕ್‍ಗಳಲ್ಲಿನ ಬೆಳೆಸಾಲ ಮನ್ನಾಗೆ ಸಂಬಂಧಿಸಿದಂತೆ ಜಿಲ್ಲೆಯ 13,944 ರೈತರು ಬೆಳೆ ಸಾಲಮನ್ನಾಗೆ ಅರ್ಹರಾಗಿದ್ದಾರೆ. ಒಟ್ಟಾರೆ 30.41 ಕೋಟಿ ರೂ. ಬೆಳೆ ಸಾಲದಲ್ಲಿ 10.89 ಕೋಟಿ ರೂ. ಬಿಡುಗಡೆಯಾಗಿದೆ. 19.52 ಕೋಟಿ ರೂ. ಬಿಡುಗಡೆಗೆ ಬಾಕಿಯಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪೂರ ಅವರು ಮಾತನಾಡಿ, ಸಹಕಾರ ಸಂಘಗಳಲ್ಲಿ ರೈತರ ಖಾತೆಗೆ ಬಂದಿರುವ ಬೆಳೆಸಾಲ ಮೊತ್ತವನ್ನು ಡ್ರಾ ಮಾಡಿಕೊಳ್ಳಲು ಬಿಡುತ್ತಿಲ್ಲ. ಇದರಿಂದ ರೈತರು ಹಿಂಸೆ ಅನುಭವಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನರೇಗಾದಲ್ಲಿ ಶೇ.12.81ರಷ್ಟು ಸಾಧನೆ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕವಿತಾ ಎಸ್.ಮನ್ನಿಕೇರಿ ಅವರು ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2018-19ನೇ ಸಾಲಿನಲ್ಲಿ ನಿಗದಿಪಡಿಸಿದ್ದ 24 ಲಕ್ಷ ಮಾನವ ದಿನಗಳ ಗುರಿಯಲ್ಲಿ 23.72 ಮಾನವ ದಿನಗಳ ಗುರಿ ಸಾಧಿಸಲಾಗಿದೆ. ಇದು ಶೇ.98.83ರಷ್ಟು ಸಾಧನೆಯಾಗುತ್ತದೆ. ಇನ್ನು 2019-20ನೇ ಸಾಲಿಗೆ ನಿಗದಿಪಡಿಸಿರುವ 26.61 ಲಕ್ಷ ಮಾನವ ದಿನಗಳ ಗುರಿಯಲ್ಲಿ 3.41 ಲಕ್ಷ ಮಾನವ ದಿನಗಳ ಗುರಿ ತಲುಪಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ ಭಗವಾನ್ ಸೋನವಣೆ, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ ಅವರು ಉಪಸ್ಥಿತರಿದ್ದರು.