ಕಾವ್ಯ

ಬಾಲ್ಯದಿ ರಂಜಿಸಿದ ಆ ಗಂಧರ್ವರು ಈಗೆಲ್ಲಿಹರು – DN ಅಕ್ಕಿ ಬರೆದ ಸಾಂಸ್ಕೃತಿಕ ಕಾವ್ಯ

ಮತ್ತೆ ಬಂದಾರೆ…ಆ ಗಂಧರ್ವರು

ಹೋದಿರೆತ್ತ ನನ ಬಾಲ್ಯ ರಂಜಿಸಿ
ಮತ್ತೆ ಬರದೆ ನೀವು |
ಚಿತ್ತ ಕಲಕಿದೆ ನಿಮ್ಮ ನೋಡಲು
ಬರುವ ಮುನ್ನ ಸಾವು || 1 ||

ಪುಂಗಿಯೂದಿ ಹೆಡೆನಾಗರಾಡಿಸುವ
ಗಾರುಡುಗನೇ?ಹಾವಾಡಿಗ |
ಲಾಗಹಾಕಿಸಿ ಸಲಾಮು ಹೊಡೆಸಿ
ಕೋತಿಕುಣಿಸುವವ ಕಿಲಾಡಿಗ || 2 ||

ವೇಷಗಾರರು ಬಂದರೆಂದರೆ
ನಮಗೆಲ್ಲ ಹಿಗ್ಗಿನೂಟ |
ಗರ್ದ್ದಿಗಮ್ಮತ್ತಿನ ಗಾಜುಕಿಂಡಿಯಲಿ
ತೆರೆದಿಟ್ಟ ಯಕ್ಷಲೋಕ || 3 ||

ಸುಡಗಾಡಸಿಧ್ಧರು ಬಾಳಸಂತರು
ಕರಡಿಯಾಟದ ಬೆರಗು |
ಗಂಗೆತ್ತಿನವರು ಬುಡಬುಡಕಿಯವರು
ಹಾಡಿನಿಂಪಿನ ದಾಸರು || 4 ||

ಶ್ರಾವಣದ ತಿಂಗಳ ನಸುಕಿನಲ್ಲಿ
ಚಳ್ಳಮ್ಮ ದಮಡಿಯ ಭಜನೆಯು |
ಗಾಢ ನಿದ್ದೆಯ ಸರಿಸಿ ಊರಿಗೆ
ದೇವಗಾನದ ಲಹರಿಯು || 5 ||

ಗೀಗೀಮೇಳ ಅಲಾಯಿಹಾಡು
ಗೊಂದಲಿಗರ ಕಥನಕಾವ್ಯ |
ಕಂದೀಲಬೆಳಕಲಿ ಛತ್ತರಿಯ ಹಿಡಿದು
ಬರವುದನರುಹುವ ಸಾರುವಯ್ಯ || 6 ||

ಎಳೆತನದ ಆಟ ಗೆಳೆತನದ ಕೂಟ
ನೆನಪೊಂದು ಮಧುರ ಕಬ್ಬ |
ಮತ್ತೆ ಬಂದರೆ ಆ ಗಂದರ್ವರೆಲ್ಲ
ಮುಪ್ಪಿಗೊಂದು ಹಬ್ಬ || 7 ||

-ಡಿ.ಎನ್.ಅಕ್ಕಿ.ಗೋಗಿ

Related Articles

4 Comments

  1. ಬಾಲ್ಯ ಗಂದರ್ವ ಬಗ್ಗೆ ನಿಮ್ಮ ಕವನ ನಮ್ಮ ಬಾಲ್ಯವನ್ನು ನೆನಪಿಸಿದೆ. ಅವೆಲ್ಲ ಸಿಕ್ಕರೆ ನಮ್ಮ ಬದುಕಿಗೂ ಒಂದು ಸಂತಸ. ನಿಮ್ಮ ಕವನಕ್ಕೆ ನಮ್ಮ ಧನ್ಯವಾದಗಳು ಅಕ್ಕಿ ಗುರುಗಳೆ

  2. ನಿಜಕ್ಕೂ ಅದ್ಭುತ ಕಾವ್ಯ.
    ಬಾಲ್ಯದ ನೆನಪುಗಳ ಮಧುರ ಮೆರವಣಿಗೆ ಮಾತ್ರವಲ್ಲ, ಸಗರನಾಡಿನ ಸಾಂಸ್ಕೃತಿಕ ಪರಂಪರೆಯ ಅನಾವರಣ ಈ ಕಾವ್ಯ. ಸ್ಮೃತಿಪಟಲದಲ್ಲಿದ್ದ ಬಾಲ್ಯದ ಫೈಲೊಂದು ಸಡನ್ನಾಗಿ ಓಪನ್ನಾಗಿ ಸುಂದರ ಲೋಕಕ್ಕೆ ಕರೆದೊಯ್ದ ಅಮರ ಕಾವ್ಯ.
    ನಮ್ಮೂರಿನ ಹೆಮ್ಮೆಯ ಡಿ.ಎನ್.ಅಕ್ಕಿ ಸರ್ ಅವರಿಗೆ ಹೃದಯ ನಮನ…

    – ಬಸವರಾಜ ಮುದನೂರ್

Leave a Reply

Your email address will not be published. Required fields are marked *

Back to top button