ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಮೇಲಿನ ಹಲ್ಲೆ ನಾಚಿಕೆಗೇಡು..!
ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಕೆಲವರು ಹಲ್ಲೆ ನಡೆಸಿದ ಘಟನೆ ಜಾರ್ಖಂಡ್ ರಾಜ್ಯದ ರಾಂಚಿ ನಗರದಲ್ಲಿ ನಡೆದಿದೆ. ಜಾರ್ಖಂಡ್ ನ ರಾಜಧಾನಿ ರಾಂಚಿಯಿಂದ ಸುಮಾರು 365 ಕಿ.ಮೀಟರ್ ದೂರದ ಪಕೂರ್ ನಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಸ್ವಾಮಿ ಅಗ್ನಿವೇಶ್ ಹೊರಟಿದ್ದರು. ಅದೇ ವೇಳೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಎಂದು ಹೇಳಿಕೊಂಡು ಕೆಲವರು ಏಕಾಏಕಿ ಕಪ್ಪುಬಟ್ಟೆ ಪ್ರದರ್ಶಿಸಿದ್ದಾರೆ.
ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತ ಸ್ವಾಮಿ ಅಗ್ನಿವೇಶ್ ವಿರುದ್ಧ ಸ್ವಾಮಿ ಅಗ್ನಿವೇಶ್ ವಿರುದ್ಧ ಕಿಡಿ ಕಾರಿದ್ದಾರೆ. ಆಗ ಪ್ರತಿಭಟನಾಕಾರರೊಂದಿಗೂ ಸಹ ಸ್ವಾಮಿ ಅಗ್ನಿವೇಶ್ ಸಂವಾದಕ್ಕೆ ಯತ್ನಿಸಿದ್ದಾರೆ. ಆದರೆ, ಪ್ರತಿಭಟನಾಕಾರರು ಮಾತ್ರ ಏಕಾಏಕಿ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಟ್ಟೆ ಹರಿದಿದ್ದಾರೆ, ನೆಲಕ್ಕೆ ಉರುಳಿಸಿ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ನಾನು ಶಾಂತಿ ಮತ್ತು ಪ್ರೀತಿಯನ್ನು ಬಯಸುತ್ತೇನೆ. ಯಾವುದೇ ರೀತಿಯ ಹಿಂಸೆಯನ್ನು ವಿರೋಧಿಸುತ್ತೇನೆ. ನಾನು ಇಂದು ರಾಂಚಿಯ ಹೋಟೆಲ್ ನಲ್ಲಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದೇನೆ. ಆದರೂ ಘಟನೆ ನಡೆಯುವ ವೇಳೆ ಪೊಲೀಸರು ಇರಲಿಲ್ಲ. ನನ್ನ ಮೇಲೆ ಏಕಾಏಕಿ ದಾಳಿ ನಡೆದದ್ದು ಯಾವ ಕಾರಣಕ್ಕೆ ಎಂಬುದು ನನಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.
ಜಾರ್ಖಂಡ್ ಸಿಎಂ ರಘುಭರ್ ದಾಸ್ ಈ ಪ್ರಕರಣದ ಬಗ್ಗೆ ಶೀಘ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಿಜೆಪಿ ನಾಯಕರೂ ಸಹ ಸ್ವಾಮಿ ಅಗ್ನಿವೇಶ್ ಅವರ ಮೇಲಿನ ಹಲ್ಲೆಯನ್ನು ಖಂಡಿಸಿದ್ದಾರೆ. ಆದರೆ, ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ನಗರಕ್ಕೆ ಬಂದಿರುವ ವಿಷಯ ಜಿಲ್ಲಾಡಳಿತಕ್ಕೆ ತಿಳಿದ ಬಳಿಕವೂ ಭದ್ರತೆ ನೀಡದೆ ಅಧಿಕಾರಿಗಳಿಗಳು ಲೋಪವೆಸಗಿದ್ದಾರೆ.
ಅಸಲಿಗೆ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ ನಡೆಸಿರುವ ಹಿಂದಿನ ಉದ್ದೇಶವೇನು. ಹಲ್ಲೇಕೋರರು ಯಾರು ಎಂಬುದು ಪತ್ತೆ ಆಗಬೇಕಿದೆ. ಹಲ್ಲೆಕೋರರಿಗೆ ತಕ್ಕ ಶಿಕ್ಷೆ ವಿಧಿಸಬೇಕಿದೆ. ಆ ಮೂಲಕ ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಜಾಗವಿಲ್ಲ. ಏನೇ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಸಹ ವಾದದಲ್ಲಿ, ಸಾತ್ವಿಕ ಹೋರಾಟದ ಮೂಲಕ ಗೆಲ್ಲಬೇಕೇ ಹೊರತು ಬಲಪ್ರದರ್ಶನದ ಮೂಲಕ ಅಲ್ಲ ಎಂಬ ಸಂದೇಶ ರವಾನೆ ಆಗಬೇಕಿದೆ.