ಹಿರಿಯರ ಆರೋಗ್ಯ ತಪಾಸಣೆ ಅಗತ್ಯ- ದೇವಪ್ಪ ಕೆ.
ಎಸ್‍ಬಿಐ ವತಿಯಿಂದ ನಿವೃತ್ತ ನೌಕರರ ಆರೋಗ್ಯ ತಪಾಸಣೆ
ಯಾದಗಿರಿ, ಶಹಾಪುರ: ಸ್ವಾಸ್ಥ್ಯ ಮತ್ತು ಸದೃಢ ಸಮಾಜ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬರ ಆರೋಗ್ಯ ಬಹುಮುಖ್ಯವಾಗಿದ್ದು, ಅದರಲ್ಲಿಯೂ ಸಮಾಜ, ಕುಟುಂಬಕ್ಕೆ ಮಾರ್ಗದರ್ಶನ ಸಲಹೆ ನೀಡುವ ಹಿರಿಯರ ಆರೋಗ್ಯದ ಕಾಳಜಿ ಅತ್ಯಂತ ಮುಖ್ಯವಾಗಿದೆ ಎಂದು ಎಸ್‍ಬಿಐ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ದೇವಪ್ಪ ಕೆ. ತಿಳಿಸಿದರು.
ನಗರದ ಎಸ್‍ಬಿಐ ಬ್ಯಾಂಕ್ ಶಾಖಾ ಆವರಣದಲ್ಲಿ ಆಯೋಜಿಸಲಾಗಿದ್ದ ನಿವೃತ್ತ ನೌಕರರ (ಹಿರಿಯ ನಾಗರಿಕರ) ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಹಿರಿಯರ ಆರೋಗ್ಯ ಚಿವಾರಿಸುವ ಅಗತ್ಯವಿದೆ. ಅವರ ಅನುಭವಗಳನ್ನು ಕೇಳಬೇಕು. ವಯಸ್ಸಾದವರನ್ನು ಮಕ್ಕಳು ಸೇರಿದಂತೆ ಸಮಾಜ ಅನ್ಯಥಾ ಭಾವಿಸದೆ ಕಾಳಜಿವಹಿಸಿ ಕೈಲಾದ ಸಹಾಯ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ 60 ಜನ ಹಿರಿಯರಿಗೆ ರಕ್ತದೊತ್ತಡ ಸಕ್ಕರೆಕಾಯಿಲೆ ಸೇರಿದಂತೆ ಹಲವು ಕಾಯಿಲೆಗಳ ತಪಾಸಣೆ ಉಚಿತವಾಗಿ ನಡೆಸಲಾಯಿತು. ಹಿರಿಯರಿಗೆ ಆರೋಗ್ಯ ತಪಾಸಣೆ ಮತ್ತು ಸೂಕ್ತ ಸಲಹೆ ನೀಡಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಸವರಾಜ ಹೂಗಾರ್, ಆರ್.ಎಸ್.ಹಳಗೊಂಡ, ಎಸ್.ಎಲ್.ಚಿತ್ತರಗಿ, ಗುರಲಿಂಗಪ್ಪ ಶರಶೆಟ್ಟಿ, ಶ್ರೀನಿವಾಸಚಾರ್ಯ ಸಗರ, ಸೇರಿದಂತೆ ಇತರರು ಭಾಗವಹಿಸಿದ್ದರು.
ಆರೋಗ್ಯ ಇಲಾಖೆಯ ದೇ.ಜಿ.ಹಳಗೊಂಡ ಸುಹಾಸಿನಿ ಹಿರೇಮಠ ಮತ್ತು ಸಿಬ್ಬಂಧಿಯವರು ಆರೋಗ್ಯ ತಪಾಸಣೆ ಕೈಗೊಂಡರು.