ಧರ್ಮಗಳ ಮಧ್ಯೆ ಸಂಘರ್ಷ ಉತ್ತಮ ಬೆಳವಣಿಗೆಯಲ್ಲಃ ರಂಭಾಪುರಿ ಶ್ರೀ
ಸ್ವಧರ್ಮ ನಿಷ್ಠೆ ಜೊತೆಗೆ ಪರಧರ್ಮ ಸಹಿಷ್ಣುತೆ ಇರಲಿ
ಶಹಾಪುರಃ ಧರ್ಮ ಪ್ರಧಾನವಾದ ಭಾರತದಲ್ಲಿ ಹಲವಾರು ಧರ್ಮಗಳು ಸಾವಿರಾರು ಜನಾಂಗಗಳು ತಮ್ಮ ತಮ್ಮ ಸಂಪ್ರದಾಯ ಪರಂಪರೆ ಅನುಸಾರ ಆಚರಣೆ ಮಾಡುತ್ತಾರೆ. ಆದರೆ ಈ ಎಲ್ಲಾ ಧರ್ಮ, ಜಾತಿ ಜನಾಂಗಗಳ ತಿರುಳು, ಗುರಿ ಮಾತ್ರ ಒಂದೇ ಆಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ|| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ನಗರ ಸಮೀಪದ ದಿಗ್ಗಿ ಗ್ರಾಮದ ಶ್ರೀ ಸಂಗಮೇಶ್ವರ ಕ್ಷೇತ್ರದಲ್ಲಿ ನಡೆದ ಜಗದ್ಗುರು ತ್ರಯರ ಅಡ್ಡಪಲ್ಲಕ್ಕಿ ಹಾಗೂ ಜಾಲಹಳ್ಳಿ ಜಯಶಾಂತಲಿಂಗ ಶ್ರೀಗಳವರ 62ನೇ ಜನ್ಮ ದಿನೋತ್ಸವ ಅಂಗವಾಗಿ ಆಯೋಜಿಸಿದ ಜನಜಾಗೃತಿ ಧರ್ಮ ಸಮಾವೇಶದ ಸಾನ್ನಿಧ್ಯವಹಿಸಿ ಮಾತನಾಡಿದರು.
ಧರ್ಮ ಮತ್ತು ಜಾತಿಗಳ ಮಧ್ಯೆ ವ್ಯಾಪಕ ಸಂಘರ್ಷ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಧರ್ಮದಲ್ಲಿರುವ ದೂರದೃಷ್ಟಿ ಮತ್ತು ಸಮಷ್ಠಿ ಪ್ರಜ್ಞೆ ಜಾತಿಯಲ್ಲಿ ಕಾಣಲಾಗದು. ಜಾತಿಗಿಂತ ಧರ್ಮ ದೊಡ್ಡದು. ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆ ಹೊಂದಿ ಮುನ್ನಡೆದಾಗ ಸಮಾಜದಲ್ಲಿ ಸಾಮರಸ್ಯ ನೆಲೆಗೊಳ್ಳಲು ಸಾಧ್ಯವಾಗುತ್ತದೆ.
ಮಾನವ ಧರ್ಮಕ್ಕೆ ಜಯವಾಗಲಿ ಎಂಬ ರಂಭಾಪುರಿ ಪೀಠದ ಧ್ಯೇಯ ವಾಕ್ಯ ಭಾವೈಕ್ಯತೆಯನ್ನು ಸಾರುತ್ತದೆ. ಜಾಲಹಳ್ಳಿ ಜಯಶಾಂತಲಿಂಗ ಶ್ರೀಗಳು ವಿದ್ಯಾ ವಿನಯ ಸಂಪನ್ನರಾಗಿದ್ದು ಧರ್ಮದ ಆದರ್ಶ ಚಿಂತನಗಳನ್ನು ಭಕ್ತ ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀಶೈಲ ಜಗದ್ಗುರು ಡಾ|| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಅರಿತು ನುರಿತು ಆಚರಿಸಿ ನಡೆವಾತನೇ ನಿಜವಾದ ಗುರು. ಸಮಾಜದಲ್ಲಿ ಗುರುವಿನ ಪಾತ್ರ ಅತ್ಯಂತ ಹಿರಿಯದು. ಜಾಲಹಳ್ಳಿ ಜಯಶಾಂತಲಿಂಗ ಶಿವಾಚಾರ್ಯರು ಹೆಸರಿಗೆ ತಕ್ಕಂತೆ ಶಾಂತಿ ಪ್ರಿಯರೆಂದರು.
ಕಾಶಿ ಜಗದ್ಗುರು ಡಾ|| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ವೀರಶೈವ ಧರ್ಮ ತತ್ವತ್ರಯಗಳಿಂದ ಕೂಡಿದೆ. ಅಷ್ಟಾವರಣದಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ. ಗುರುವಿಲ್ಲದೇ ಅರಿವು ಆಚಾರ ಸಿಗದು. ಶಿವಪಥವನರಿವೊಡೆ ಶಿವಪಥವೇ ಮೊದಲು ಎಂದು ಬಸವಣ್ಣನವರು ಹೇಳಿದ್ದಾರೆ.
ಜಾಲಹಳ್ಳಿ ಜಯಶಾಂತಲಿಂಗ ಶಿವಾಚಾರ್ಯರು ತಮ್ಮ ಕಾರ್ಯಗಳ ಮೂಲಕ ಭಕ್ತ ಸಂಕುಲಕ್ಕೆ ಚಿರಪರಿಚಿತರಾಗಿದ್ದಾರೆ ಎಂದರು.
ಗದುಗಿನ ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಮತ್ತು ಮಳಖೇಡದ ಹಜರತ್ ಸೈಯದ್ ಶಾಹ್ ಮುಸ್ತಫಾ ಖಾದ್ರಿ ಮಾತನಾಡಿದರು.
ಮಾಗಣಗೇರಿ ಬೃಹನ್ಮಠದ ಡಾ|| ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು.
ಭೀಮರಾಯನಗುಡಿ ಶಿವ ದೇವಾಲಯದಿಂದ ದಿಗ್ಗಿ ಸಂಗಮೇಶ್ವರ ಕ್ಷೇತ್ರದ ವರೆಗೆ ಶ್ರೀ ರಂಭಾಪುರಿ, ಶ್ರೀ ಶ್ರೀಶೈಲ ಮತ್ತು ಶ್ರೀ ಕಾಶೀ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಸಂಭ್ರಮದಿಂದ ಜರುಗಿತು. ಶ್ರೀಮಠದ ದೇವಯ್ಯ ಸ್ವಾಮಿಗಳು, ಗುಂಬಳಾಪುರ ಮಠದ ಸಿದ್ಧೇಶ್ವರ ಶಿವಾಚಾರ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುಮಾರು ಎರಡು ಸಾವಿರ ಮಹಿಳೆಯರು ಕುಂಭ ಹೊತ್ತು ಉತ್ಸವದಲ್ಲಿ ಸಾಗಿದ ದೃಶ್ಯ ಅಪೂರ್ವವಾಗಿತ್ತು. ಸಕಲ ವಾದ್ಯ ವೈಭವಗಳೊಂದಿಗೆ ಜರುಗಿದ ಸಮಾರಂಭದಲ್ಲಿ ಸ್ಥಳೀಯ ಹಲವಾರು ಮಠಾಧೀಶರು ಮತ್ತು ಅಪಾರ ಭಕ್ತಸ್ತೋಮ ಭಾಗವಹಿಸಿತ್ತು.