ಶಹಾಪುರಃ ಡಿಗ್ರಿ ಕಾಲೇಜು ಪ್ರಭಾರಿ ಪ್ರಾಂಶುಪಾಲರಾಗಿ ತಂಗಡಿಗಿ ನೇಮಕ
ಡಿಗ್ರಿ ಕಾಲೇಜು ಪ್ರಭಾರಿ ಪ್ರಾಂಶುಪಾಲರಾಗಿ ತಂಗಡಿಗಿ ನೇಮಕ
ಶಹಾಪುರಃ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರೋ.ವೀರಯ್ಯ ಹಿರೇಮಠ ವಯೋ ನಿವೃತ್ತಿ ಹೊಂದಿರುವ ಹಿನ್ನೆಲೆ ಶನಿವಾರ ಪ್ರಸ್ತುತ ಕಾಲೇಜಿನ ಪ್ರೋ.ಚನ್ನಾರಡ್ಡಿ ಎಂ.ತಂಗಡಿಗಿ ಅವರು ಪ್ರಭಾರಿ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದರು.
ಪ್ರಭಾರಿ ಪ್ರಾಂಶುಪಾಲ ಹುದ್ದೆಯ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಇದೇ ಕಾಲೇಜಿನ ಪ್ರಥಮ ಬ್ಯಾಚ್ ವಿದ್ಯಾರ್ಥಿಯಾದ ನಾನು ಪ್ರಸ್ತುತ ಇದೇ ಕಾಲೇಜಿನ ಪ್ರಾಂಶುಪಾಲರಾಗಿ ಪ್ರಭಾರಿ ಜವಬ್ದಾರಿವಹಿಸಿಕೊಂಡಿರುವದು ತುಂಬಾ ಹೆಮ್ಮೆ ಎನಿಸುತ್ತಿದೆ.
ನಾಡಿನ ಅತಿ ದೊಡ್ಡ ಕಾಲೇಜು ಆಗಿರುವ ಈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ. ಅಲ್ಲದೆ ಉತ್ತಮ ಕಲಿಕಾ ವಾತಾವರಣ ನಿರ್ಮಿಸಲು ಶ್ರದ್ಧೆಯಿಂದ ಕೆಲಸ ಮಾಡುವೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಪ್ರಾಂಶುಪಾಲ ಪ್ರೋ.ವೀರಯ್ಯ ಹಿರೇಮಠ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿಯಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಅವಧಿಯಲ್ಲಿ ಶಕ್ತಿ ಮೀರಿ ಕೆಲಸ ಮಾಡಿರುವೆ. ಇಲ್ಲಿವರೆಗೂ ಸಲ್ಲಿಸಿದ ಸೇವೆ ಸಂತೃಪ್ತಿ ತಂದಿದೆ. ನನ್ನ ಅವಧಿಯಲ್ಲಿ ಸಹಕಾರ ನೀಡಿ ಪ್ರೋತ್ಸಾಹಿಸಿದ ಮತ್ತು ಸಲಹೆಗಳನ್ನು ನೀಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸೂರ್ಯಕಾಂತ ಉಮ್ಮಾಪುರೆ, ಡಾ.ಹಯ್ಯಾಳಪ್ಪ ಸುರಪುರಕರ್, ಆನಂದಕುಮಾರ ಸಾಸನೂರ, ಡಾ.ಸಂತೋಷ ಹುಗ್ಗಿ, ಡಾ.ವಿಜಯಾನಂದ, ಡಾ.ರಾಜು ಶ್ಯಾಮರಾವ್, ಮಹೇಶ ಜಮಾದಾರ, ಅರುಣಕುಮಾರ ಬಣಗಾರ, ಮೀನಾಕ್ಷಿ ರಾಠೋಡ, ಶಂಕ್ರಮ್ಮ ಪಾಟೀಲ್ ಇತರರು ಉಪಸ್ಥಿತರಿದ್ದರು.