ಪ್ರಮುಖ ಸುದ್ದಿ
ಚಂದ್ರ ಗ್ರಹಣ : ವೆಂಕಟರಮಣ ದೇಗುಲಕ್ಕೆ ಕಳ್ಳರ ಕನ್ನ!
ಹುಬ್ಬಳ್ಳಿ: ರಕ್ತ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಇಲ್ಲಿನ ನೃಪತುಂಗ ಬೆಟ್ಟದಲ್ಲಿರುವ ಪ್ರಖ್ಯಾತ ವೆಂಕಟರಮಣ ದೇಗುಲಕ್ಕಿಂದು ಭಕ್ತರ ಪ್ರವೇಶ ಸ್ಥಗಿತಗೊಳಿಸಲಾಗಿತ್ತು. ಸಂಜೆವರೆಗೆ ದೇಗುಲಕ್ಕೆ ಬೀಗ ಹಾಕಿ ಬಳಿಕ ವಿಶೇಷ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಕಳ್ಳರು ಮಾತ್ರ ಚಂದ್ರ ಗ್ರಹಣದ ದಿನವನ್ನೇ ಬಳಸಿಕೊಂಡು ದೇಗುಲದ ಬೀಗ ಮುರಿದು ಕಳ್ಳತನ ನಡೆಸಿದ ಘಟನೆ ನಡೆದಿದೆ.
ದೇವಸ್ಥಾನದಲ್ಲಿನ ದೇಣಿಗೆ ಹುಂಡಿಗೆ ಕನ್ನ ಹಾಕಿದ ಕಳ್ಳರು ಹುಂಡಿಯ ಜೊತೆಗೆ ಸಿಸಿಟಿವಿ ಹಾಗೂ ಸಂಭಂಧಿತ ಉಪಕರಣಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ. ದೇಗುಲದಿಂದ ಸುಮಾರು ಅರ್ಧ ಕಿ.ಮೀಟರ್ ದೂರದಲ್ಲಿ ಖಾಲಿ ಹುಂಡಿಯನ್ನು ಎಸೆದು ಕಳ್ಳರು ನಾಪತ್ತೆಯಾಗಿದ್ದಾರೆ. ಅಶೋಕ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.