ವಿನಯ ವಿಶೇಷ

ಸರ್ವಾಲಂಕಾರಭೂಷಿತೆ ಸಗರಾದ್ರಿ ನಿಸರ್ಗ ದೇವತೆ – ಡಾ.MS ಸಿರವಾಳ

🦚ಸರ್ವಾಲಂಕಾರಭೂಷಿತೆ ಸಗರಾದ್ರಿಸೊಬಗನ್ನ ಸವಿಯ ಬನ್ನಿ🦚

ಬೆಳಗು ಜಾವದ ಬರಿ Joggingಗಿಂತಲೂ ಚಾರಣ(Trecking) ದೇಹ ಮನಸ್ಸುಗಳೆರಡಕ್ಕೂ ಬಲು ಉತ್ತಮ ಹಾಗೂ ವಿಶೇಷ ಎಂಬುದನ್ನು ಸಹಾಯಕ ಖಜಾನಾಧಿಕಾರಿ ಹುದ್ದೆಯ ತರಬೇತಿಗಾಗಿ ಮೈಸೂರಿನ ATI ನಲ್ಲಿರುವಾಗ ಖ್ಯಾತ ಚಾರಣ ತಜ್ಞ Tiger ಸೋಲಂಕಿಯವರು ಮನವರಿಕೆ ಮಾಡಿಕೊಟ್ಟ ಮೇಲೆ ಈ ಮೊದಲಿನ ಗುಡ್ಡ ಹತ್ತುವ ಹವ್ಯಾಸ ಚಾರಣ ಪ್ರವೃತ್ತಿಯಾಗಿ ಮಾರ್ಪಟ್ಟಿತು.

ಈ ದಿನ ಬೆಳಿಗ್ಗೆ ನಮ್ಮ ತ್ರಿಮೂರ್ತಿಗಳೊಂದಿಗೆ ಭೌಗೋಳಿಕ ಹಾಗೂ ಪುರಾಣ ಪ್ರಸಿದ್ಧ ಸಗರಾದ್ರಿಯಲ್ಲಿನ ಅತ್ಯಂತ ಕಡಿದಾದ ಬಂಡೆಗಲ್ಲಿನ ಮೂಲಕ ಚಾರಣ ಗೈದು ಐತಿಹಾಸಿಕ ಮಹತ್ವದ ಕೋಟೆಯ ಬುರುಜಿನ ಮೇಲೆ ನಿಂತು ಸುತ್ತಲಿನ ರುದ್ರ ರಮಣೀಯ ಪ್ರಕೃತಿ ಸೌಂದರ್ಯವನ್ನು ಕಂಡು ರೋಮಾಂಚಿತರಾದೆವು.

ಒಂದು ಕಡೆ ತಾವರೆ ಕೆರೆ, ಇನ್ನೊಂದು ಕಡೆ ಚಿಕಿತ್ಸಕ ಮಹತ್ವದ ನಿಸರ್ಗ ಸಹಜ ನಿರ್ಮಿತ ಮಂದಾಕಿನಿ ಪುಷ್ಕರಣಿ, ಮತ್ತೊಂದು ಕಡೆ ಧಾರ್ಮಿಕ ಮಹತ್ವದ ಮೇಲುಗಿರಿ ಪರ್ವತ, ಮಲಗಿದ ಬುದ್ಧನ ಎಡ ಪಾರ್ಶ್ವದ ನೋಟ, ನಾಗ ಬಸ್ಸಪ್ಪ-ಗವಿ ಬಸ್ಸಪ್ಪನ ಬೆಟ್ಟ, ದೂರದಿಂದಲೇ ಕಾಣುವ ವಚನ ಕ್ರಾಂತಿ ಮಹತಿಯ ಅಮರ ಕಲ್ಯಾಣಿ, ಮಗದೊಂದು ಕಡೆ ಶಹಾಪುರ ನಗರದ ವಿಹಂಗಮ ನೋಟ.

ಹೀಗೆ ಎತ್ತ ನೋಡಿದರತ್ತ ನಮ್ಮ ಕಣ್ಣಿನ ದೃಷ್ಟಿ ಹಾಯಿಸಿದಷ್ಟೂ ಹಚ್ಚ ಹಸಿರು, ಕಾಶ್ಮೀರ ಕಣಿವೆಯಲ್ಲಿರುವೆವೇನೋ ಎಂಬಂತೆ ಮೋಡಿ ಮಾಡುವ ಮೋಡ ಮಿಶ್ರಿತ ಮಂಜು, ಬೆಳ್ಳಿಯ ತಗಡಿನ ಕುಸುರಿ ಮಾಡಿದ್ದಾರೇನೋ ಎಂಬಂತೆ ಭಾಸವಾಗುವ ಕೆರೆ-ಹಳ್ಳ-ಕಟ್ಟೆಗಳ ನೀರಿನ ಝರಿಗಳು. ಇವೆಲ್ಲಕ್ಕಿಂತ ಮಿಗಿಲಾಗಿ ಹಿತವಾಗಿ ಮೈಗೆ ಬಡಿದು ಮನಸ್ಸಿಗೆ ಆಹ್ಲಾದ ನೀಡಿದ ಪರಿಶುದ್ಧವಾದ ಸ್ವಚ್ಛ ತಂಗಾಳಿಯ(O೩) ಹಿತಾನುಭವವನ್ನು ಸ್ವತಃ ಅನುಭವಿಸಬೇಕೆ ಹೊರತು ಅಕ್ಷರಗಳಲ್ಲಿ ವರ್ಣಿಸಲು ಅಸಾಧ್ಯ.

ಸೂಕ್ಷ್ಮವಾಗಿ ಗಮನಿಸಿದರೆ ಕಾಣಸಿಗುವ ಹಲವಾರು ರೀತಿಯ ಮರ-ಗಿಡ-ಬಳ್ಳಿ-ಜೀವ-ಜಂತುಗಳ ಪೈಪೋಟಿಯ ಬದುಕಿನ ವೈಚಿತ್ರ್ಯ. ಒಟ್ಟಿನಲ್ಲಿ ಸಗರಾದ್ರಿ ಈಗ ನವ ಜವ್ವನದ ಕನ್ಯೆಯಂತೆ ಸರ್ವಾಲಂಕಾರಭೂಷಿತೆಯಾಗಿ ಮೈದುಂಬಿ ನಿಂತಿದ್ದಾಳೆ ಅವಳ ರೂಪು-ಲಾವಣ್ಯ-ಹಾವ-ಭಾವ-ವಿಭ್ರಮ-ವಿಭಾವಗಳನ್ನು ಸಾಧ್ಯವಾದರೆ ನೀವೂ ಒಮ್ಮೆ ಸವಿಯಿರಿ.

ಚಾರಣ ಕೈಗೊಂಡಾಗ ಸೆಲ್ಫಿಯ ಸಾಹಸಕ್ಕಿಳಿಯದೆ ಸಾವಧಾನ ಹಾಗೂ ಜಾಗ್ರತೆಗೆ ಮೊದಲ ಆಧ್ಯತೆ ಇರಲಿ. ಮಳೆ ಹೆಚ್ಚಾಗಿರುವುದರಿಂದ ಕಲ್ಲು-ಗುಂಡು-ಕೋಟೆ-ಬುರುಜು-ಗೋಡೆ ಸಡಿಲವಾಗಿದ್ದು ಜರಿದು ಬೀಳುವ ಅಪಾಯವಿರುತ್ತದೆ. ಒಬ್ಬರಿಬ್ಬರೇ ಹೋಗದೆ ಗುಂಪಾಗಿ ಹಾಗೂ “ನೀರು” ಮತ್ತು ಅಲ್ಪೋಪಹಾರವನ್ನು ತೆಗೆದುಕೊಂಡು ಹೋಗಿ.

ನಿಸರ್ಗ ನೀ ಎನಗೆ ಸ್ವರ್ಗ

🦅ಡಾ.ಎಂ.ಎಸ್.ಸಿರವಾಳ
ಸಹಾಯಕ ಖಜಾನೆ ಅಧಿಕಾರಿ

Related Articles

3 Comments

  1. ನಿಮ್ಮ ಲೇಖನ ಉತ್ತಮವಾಗಿ ಮೂಡಿಬಂದಿದೆ ಸರ್.
    ನೀವು ಖಜಾನೆ ಅಧಿಕಾರ . ನಿಮಗೆ ಸಮಯವೇ ಸಿಗೋದಿಲ್ಲ
    ಅವುಗಳ ಮಧ್ಯೆಯೇ ತಾವು ಈ ರೀತಿಯ ಹವ್ಯಾಸ ನೋಡಿ
    ನಮಗೆ ಪ್ರೇರಣೆ ಸರ್..

    1. ಸುಪರ್ ಅಣ್ಣ. ಸಗರಾದ್ರಿಯ ರಮಣೀಯತೆಯಲ್ಲಿ ಮೈ ಮರೆಯುವ ಆಸೆ. ಆದರೆ ನಾನು ಅಂಗವಿಕಲನಾದ್ದರಿಂದ ನಿಮ್ಮ ಬರಹದಲ್ಲಿಯೇ ಸಗರಾದ್ರಿಯ ಸೌಂದರ್ಯ ಕಾಣಬೇಕೆಂದು ಬಯಸಿದ್ದೇನೆ. ನೀವು ಚಾರಣಗೈದ ಸಗರಾದ್ರಿಯ ಪಯಣವನ್ನು ವರ್ಣಿಸಿ ಬರೆಯಿರಿ. ಲೇಖನಕ್ಕಾಗಿ ಕಾಯುತ್ತ ಕುಳಿತಿರುವೆ.

      ನಿಮ್ಮ
      ರಾಜ್ ಎ ಕೆಲ್ಲೂರ (ಅಲಿ)
      ಶಿರವಾಳ
      wtsp : ೯೮೪೪೯೧೯೩೬೫

Leave a Reply

Your email address will not be published. Required fields are marked *

Back to top button