ಕಥೆ

ಸಾಧನೆ ಮಾಡು, ಹುಡುಗಿ ಮಾತ್ರವೇನು? ಇಡೀ ಜಗತ್ತೇ, ನಿನ್ನ ಜೊತೆಗಿರಲಿದೆ

ದಿನಕ್ಕೊಂದು ಕಥೆ ಓದಿ

ದಿನಕ್ಕೊಂದು ಕಥೆ

ಸಾಧನೆ ಮಾಡು, ಹುಡುಗಿ ಮಾತ್ರವೇನು? ಇಡೀ ಜಗತ್ತೇ, ನಿನ್ನ ಜೊತೆಗಿರಲಿದೆ

ಒಬ್ಬ ಯುವಕ, ಜೀವನದಲ್ಲಿ ನೊಂದು ಹತಾಶನಾಗಿ ಆತ್ಮಹತ್ಯೆ ಮಾಡಿಕೊಳ್ಳಕೆಂದು, ನಿರ್ಧರಿಸಿ, ನದಿಯಲ್ಲಿ ಬಿದ್ದು ಸಾಯಲು, ನದಿಯ ಕಡೆಗೆ ಹೊರಡುತ್ತಾನೆ. ಅವನಿಗೆ ಈಜಲು ಬರುವುದಿಲ್ಲ, ನೀರಿನಲ್ಲಿ ಬಿದ್ದರೆ ಖಂಡಿತ ತಾನು ಸಾಯುವೆನೆಂದು ಅವನ ನಂಬಿಕೆ. ನದಿಯ ದಂಡೆಯ ಮೇಲೆ ಕ್ಷಣ ಕಾಲ ಹಾಗೇ ಸುಮ್ಮನೆ ನಿಂತುಕೊಳ್ಳುತ್ತಾನೆ

ಆ ಸಮಯದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದು, ಇಲ್ಲಿ ನಿಂತು ಏನು ಮಾಡುತ್ತಿರುವೆ ? ಎಂದು ಆ ಯುವಕನನ್ನು ಕೇಳುತ್ತಾರೆ. ಹುಡುಗ “ತಾನು ಪ್ರೀತಿಸಿದ ಹುಡುಗಿ, ತನಗೆ ಕೈ ಕೊಟ್ಟು, ಓಡಿ ಹೋದಳು, ನನಗೆ ಇನ್ನು‌ ಜೀವನವೇ ಸಾಕೆನಿಸಿದೆ, ಆತ್ಮಹತ್ಯೆ ಮಾಡಿಕೊಳ್ಳಲು ನಿರ್ದರಿಸಿದ್ದೇನೆ ಎಂದು ಯುವಕ ಕಣ್ಣೀರಿಡುತ್ತ ತನ್ನ ವೇದನೆಯನ್ನು, ಆ ವ್ಯಕ್ತಿಗೆಯೊಂದಿಗೆ‌ ತೋಡಿಕೊಂಡ.

ಇದ್ದಕ್ಕಿದ್ದಂತೆ ಆ ವ್ಯಕ್ತಿ ಎಲ್ಲಾ ದುಷ್ಟ ಕಿಡ್ನಿಯೇ, ನೀನು ಎಷ್ಟು ವಿಶ್ವಾಸದ್ರೋಹಿ ಅಲ್ಲವೇ? ಎಂದು ಬಯ್ಯತೊಡಗಿದ. ಈ ಯುವಕನಿಗೆ ಆಶ್ಚರ್ಯವಾಯಿತು, ಏನೋ ಅಸಂಬದ್ಧವಾಗಿ ಮಾತಾಡುತ್ತಾರಲ್ಲ, ಇವರು. ತಾನು ಸಾಯಲು ಹೊರಟಿದ್ದಕ್ಕೂ, ಈತ ಕಿಡ್ನಿಯನ್ನು ಬಯ್ಯುವುದಕ್ಕೂ ಏನು ಸಂಬಂಧ? ಅದೇಕೆ ನೀವು ಕಿಡ್ನಿಯನ್ನು ಬೈಯುತ್ತಿರುವಿರಿ. ನಿಮಗೆ ನಾನು ಹೇಳಿದ್ದು ಕೇಳಿಸಲಿಲ್ಲವೇ, ಎಂದು ಕೇಳಿದ.

ಆಗ ಆ ವ್ಯಕ್ತಿ, ಅಲ್ಲಪ್ಪಾ ನೀನು ಎಂಥಾ ಮಹಾನ್ ವ್ಯಕ್ತಿ, ಆದರೆ ಈ ಕಿಡ್ನಿ ಇದೆಯಲ್ಲ, ಅದಕ್ಕೆ ಸ್ವಲ್ಪವೂ ಪ್ರೀತಿ ಇಲ್ಲಾ, ಈಗ ಆರು ತಿಂಗಳ ಹಿಂದೆಯಷ್ಟೇ, ನನ್ನ ಆರೋಗ್ಯದಲ್ಲಿ ಏರುಪೇರಾಗಿ, ಒಂದು ಕಿಡ್ನಿಯನ್ನು ತೆಗೆದರು, ಜೊತೆಯಲ್ಲಿ ಹುಟ್ಟಿದಾಗಿನಿಂದ ಇದ್ದ ಇನ್ನೊಂದು ಕಿಡ್ನಿಗೆ, ಏನು ಅನ್ನಿಸಲೇ ಇಲ್ಲವಲ್ಲಾ? ಅದರ ಪಾಡಿಗೆ ಅದು ತನ್ನ ಕೆಲಸವನ್ನು ಮಾಡುತ್ತಲೇ ಇದೆ ಎಂದರು.

ಆಗ ಯುವಕ, ಅದು ಕೆಲಸ ಮಾಡುತ್ತಿರುವುದರಿಂದಲೇ, ನೀವು ಬದುಕಿರುವುದಲ್ಲವೇ? ಕಿಡ್ನಿಗೂ ನನ್ನ ಜೀವನಕ್ಕೂ ಏನು ಸಂಬಂಧ ಎಂದ.

ಆಗ ಆ ವ್ಯಕ್ತಿ, ಸಂಬಂಧ ಇದೆ! ಜೊತೆ ಜೊತೆಯಾಗಿ ಹುಟ್ಟಿದ ಅಂಗವನ್ನೇ ಕಳೆದುಕೊಂಡರೂ ಅದು ನಿನ್ನಷ್ಟು ದುಃಖಿಸಲಿಲ್ಲ, ತನ್ನ ಕೆಲಸವನ್ನು ತಾನು ಮಾಡುತ್ತಲೇ ಇದೆ, ಹೋದ ಕಿಡ್ನಿಯ ಕೆಲಸವನ್ನು ತಾನೇ ಮಾಡುತ್ತಿದೆ. ನೀನು ನೋಡು ಎರಡು ವರ್ಷಗಳ ಹಿಂದೆಯಷ್ಟೇ ಸಿಕ್ಕ ಹುಡುಗಿ ತಪ್ಪಿ ಹೋದಳು ಎಂದು ಆತ್ಮಹತ್ಯೆಗೆ ಹೊರಟಿರುವೆಯಲ್ಲಾ, ಒಳ್ಳೆಯದು, ನಿನ್ನ ಪ್ರೀತಿ ದೊಡ್ಡದು ಎಂದು ನಿರೂಪಿಸಿಕೊಳ್ಳಲು ನೀನು ಸಾಯುವುದು ಒಳ್ಳೆಯದೇ? ಎಂದರು.

ಈಗ ಯುವಕನಿಗೆ ಏನು ಹೇಳಬೇಕೆಂಬುದು ಗೊತ್ತಾಗದೇ, ಗಲಿಬಿಲಿಗೊಂಡಂತೆ ಇದ್ದ .ಇದನ್ನು ಗಮನಿಸುತ್ತಿದ್ದ ವ್ಯಕ್ತಿ, ಹುಟ್ಟಿದಾಗಿನಿಂದ ಜೊತೆಯಲ್ಲಿದ್ದವರೆಲ್ಲಾ, ಸತ್ತರೂ ನಾವಿರುತ್ತೇವೆ. ಹುಟ್ಟಿದಾಗಿನಿಂದ ನಮ್ಮ ಜೊತೆಯಲ್ಲೇ ಇದ್ದ ಅಂಗವೊಂದರಿಂದ ನಮ್ಮ ಜೀವಕ್ಕೆ ಅಪಾಯವಾಗುತ್ತದೆ ಎಂದು ಗೊತ್ತಾದಾಗ, ಅದನ್ನು ಕತ್ತರಿಸಲೂ ನಾವೇ ಅನುಮತಿ ನೀಡುತ್ತೇವೆ.

ಯಾಕೆಂದರೆ ಎಲ್ಲಕ್ಕಿಂತ ಜೀವ ದೊಡ್ಡದು. ಹೀಗಿರುವಾಗ ನಿನ್ನೆ ಮೊನ್ನೆ ಪ್ರೀತಿಸಿದ ಹುಡುಗಿ ಕೈ ಕೊಟ್ಟಳು ಎಂದು ನಿನ್ನ ಜೀವವನ್ನೇ ಕಳೆದುಕೊಳ್ಳಲು ಹೊರಟಿರುವೆಯಲ್ಲಾ,ಎಂಥಾ ಮೂರ್ಖ ನೀನು.ಇದು ನ್ಯಾಯವೇ ? ನಿನ್ನ ಬುದ್ಧಿಗೆ ಏನು ಹೇಳಲಿ? ಎಂದು ಕೇಳಿದರು.

ಯುವಕ ಈಗಲೂ ಗೊಂದಲದಿಂದ ಹೊರಬರಲಿಲ್ಲ. ಇದನ್ನು ಗಮನಿಸಿದ ಆ ವ್ಯಕ್ತಿ, ನೀನಷ್ಟೇ ಮುಖ್ಯ, ನೀನು ಮಾತ್ರವೇ ಮುಖ್ಯ ಎಂದುಕೋ, ಆಗ ಎಲ್ಲವೂ ಸರಿ ಹೋಗುತ್ತದೆ. ಯಾರಿಂದಲೂ ನೀನು ಬದುಕು ನಡೆಸುತ್ತಿಲ್ಲ, ಎರಡು ವರ್ಷಗಳ ಹಿಂದೆಯೂ ನೀನು ಇದ್ದೆ, ಈಗಲೂ ಇದ್ದೀಯ. ಆ ಹುಡುಗಿ ಬಂದಳು ಹೋದಳು. ಎಲ್ಲರೂ ಚೆನ್ನಾಗಿರಲೆಂದೇ ದೇವರು ಜೀವ ಕೊಡುತ್ತಾನೆ. ಆದರೆ ಜೀವನ ಮಾತ್ರ ನೀನೇ ನಡೆಸಬೇಕು.

ನಿನ್ನ ಸಾಯುವ ಎಲ್ಲಾ ಯೋಚನೆಯನ್ನೂ, ಬದುಕಿ ಬಾಳುವ ಕಡೆಗೆ ತಿರುಗಿಸು, ಆಗ ನೀನು ಸಾಧಿಸಬೇಕಾಗಿರುವ ಅದ್ಭುತ ದಾರಿಗಳು ತಾವಾಗೇ ತೆರೆದುಕೊಳ್ಳುತ್ತವೆ. ಸಾಧನೆ ಮಾಡು, ಹುಡುಗಿ ಮಾತ್ರವೇನು? ಇಡೀ ಜಗತ್ತೇ, ನಿನ್ನ ಜೊತೆಗೆ ಇರುತ್ತದೆ, ಎಂದು ಹೇಳಿದರು.

ಯುವಕನಿಗೆ ತನ್ನ ತಪ್ಪಿನ ಅರಿವಾಗಿ, ತನಗೆ ‌ದಾರಿತೋರಿದ ಹಿರಿಯರಿಗೆ, ಧನ್ಯವಾದಗಳನ್ನು ತಿಳಿಸುತ್ತ, ಇನ್ನೆಂದಿಗೂ ಆತ್ಮಹತ್ಯೆಯ ಯೋಚನೆಯನ್ನು ಮಾಡದೆ, ಮುಂದಿನ ಬದುಕಿನ ಕಡೆಗೆ ಮುಖ ಮಾಡಿದ.

ನೀತಿ :– ಎಲ್ಲರನ್ನೂ ಭಗವಂತ, ಚೆನ್ನಾಗಿ ಬದುಕಿ ಬಾಳಲಿ, ಎಂದೇ ಸೃಷ್ಟಿಸಿರುತ್ತಾನೆ. ಚೆನ್ನಾಗಿ ಬದುಕಿ ಬಾಳುವುದೂ, ಬದುಕನ್ನು ನರಕ ಮಾಡಿಕೊಳ್ಳುವುದೂ , ಎರಡೂ ‌ನಮ್ಮ ಕೈಯಲ್ಲೇ ಇದೆ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button