ವೆರೈಟಿಯಾಗಿ ಟೊಮೆಟೋ ದೋಸೆ ಮಾಡಿ..! 5 ನಿಮಿಷದಲ್ಲಿ ಹಿಟ್ಟು ರೆಡಿ
ಟೊಮೆಟೋ ದೋಸೆ ಮಾಡಲು ಬೇಕಾಗುವ ವಸ್ತುಗಳು
ಟೊಮೆಟೋ – 3
ಖಾರದ ಪುಡಿ
ಸೋಡಾ
ಶುಂಠಿ
ರವೆ (ಬಾಂಬೆ ರವೆ)
ಉಪ್ಪು
ಎಣ್ಣೆ
ಟೊಮೆಟೋ ದೋಸೆ ಮಾಡುವ ವಿಧಾನ
ಮೊದಲು ಒಂದು ಸಣ್ಣ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಮೂರು ಟೊಮೆಟೋ, ಖಾರದ ಪುಡಿ, ಇಲ್ಲವೆ ಒಣ ಮೆಣಸು ಸಹ ಹಾಕಿಕೊಳ್ಳಬಹುದು, ಜೊತೆಗೆ ಶುಂಠಿ ಹಾಕಿಕೊಂಡು ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ.
ರುಬ್ಬಿಕೊಂಡಿರುವುದು ನುಣ್ಣಗೆ ಆಗಿದ್ಯಾ ನೋಡಿಕೊಂಡು ಮತ್ತೆ ಅದೇ ಮಿಕ್ಸಿ ಜಾರ್‌ಗೆ ರವೆ ಹಾಕಿ, ನೀರು ಸಹ ಹಾಕಿ ಮತ್ತೆ ರುಬ್ಬಿಕೊಳ್ಳಿ. ಬಳಿಕ ಈ ರುಬ್ಬಿಕೊಂಡ ಹಿಟ್ಟನ್ನು ಪಾತ್ರೆಯೊಂದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಈ ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಈ ಹಿಟ್ಟನ್ನು ಮುಚ್ಚಳ ಮುಚ್ಚಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. 10 ನಿಮಿಷ ಬಿಟ್ಟರೆ ಸಾಕು.
ಬಳಿಕ ಇದಕ್ಕೆ ಸೋಡಾ ಪುಡಿ ಹಾಗೂ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನೀವು ಸಾಮಾನ್ಯವಾಗಿ ದೋಸೆ ಮಾಡುವಾಗ ರೆಡಿ ಮಾಡಿಕೊಳ್ಳುವ ಹಿಟ್ಟಿನಂತೆಯೇ ಈ ಹಿಟ್ಟನ್ನೂ ಸಹ ರೆಡಿ ಮಾಡಿಕೊಳ್ಳಿ.
ಇಷ್ಟಾದ ಬಳಿಕ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಚ್ಚಿ ಬಳಿಕ ಕಲಸಿಕೊಂಡಿರುವ ಹಿಟ್ಟನ್ನು ಹಾಕಿಕೊಳ್ಳಿ. ಉಳಿದಂತೆ ಸಾಮಾನ್ಯ ದೋಸೆ ಮಾಡಿದಂತೆಯೇ ಎರಡೂ ಬದಿಯೂ ಚೆನ್ನಾಗಿ ಕಾಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಟೊಮೆಟೋ ದೋಸೆ ರೆಡಿಯಾಗಿರುತ್ತದೆ.
ಈ ದೋಸೆಗೆ ಕಾಯಿ, ಕಡಲೆ ಬೀಜದ ಚಟ್ನಿ ಮಾಡಿದರೆ ರುಚಿ ದುಪ್ಪಟ್ಟಾಗುತ್ತದೆ. ನಿಮಗೆ ಎಷ್ಟು ಪ್ರಮಾಣದಲ್ಲಿ ಹಿಟ್ಟು ಬೇಕೋ ಅಷ್ಟು ಮಾಡಿಕೊಳ್ಳಿ. ಒಂದು ವೇಳೆ ದೋಸೆ ಹರಿಯುತ್ತಿದ್ದರೆ ಹಿಟ್ಟಿಗೆ ಸ್ವಲ್ಪ ನೀರು ಹಾಕಿಕೊಳ್ಳಿ. ಇಲ್ಲವೆ ಅಕ್ಕಿ ಹಿಟ್ಟು ಇದ್ದರೆ ಮಿಕ್ಸ್ ಮಾಡಿಕೊಳ್ಳಿ.