ಹುಡುಗಾಟಕ್ಕೆ ಜೀವದೆತ್ತರು ಅಜ್ಜಿ-ಮೊಮ್ಮಗ!
ಅಜ್ಜಿ-ಮೊಮ್ಮಗನ ಬಾಂಧವ್ಯ ನೆನೆದು ಊರೇ ಕಣ್ಣೀರು…
ಬಳ್ಳಾರಿ : ಸಿರಗುಪ್ಪ ತಾಲೂಕಿನ ಅಗಸನೂರು ಗ್ರಾಮದಲ್ಲಿ ಕಳೆದ 9ನೇ ತಾರೀಖು ಆಟವಾಡುತ್ತಿದ್ದ ಮಕ್ಕಳು ಜಗಳವಾಡಿಕೊಂಡಿದ್ದರು. ಪರಿಣಾಮ ಎಂಟು ವರ್ಷದ ಬಾಲಕ ಹುಲಿಗೆಪ್ಪ ಗಾಯಗೊಂಡಿದ್ದ. ಬಾಯಿ, ಪಕ್ಕೆಲುಬಿಗೆ ಬಲವಾದ ಹೊಡೆತ ಬಿದ್ದ ಕಾರಣ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಬಾಲಕ ಹುಲಿಗೆಪ್ಪ ಅಸುನೀಗಿದ್ದಾನೆ.
ಮೊಮ್ಮಗ ಹುಲಿಗೆಪ್ಪ ಸಾವಿಗೀಡಾದ ಸುದ್ದಿ ತಿಳಿಯುತ್ತಿದ್ದಂತೆ ಇತ್ತ ಮನೆಯಲ್ಲಿದ್ದ ಅಜ್ಜಿ ಅಂಬಮ್ಮ(55) ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಅಜ್ಜಿಯೂ ಕೊನೆಯುಸಿರೆಳೆದಿದ್ದಾರೆ.
ಮೊಮ್ಮಗ ಹುಲಿಗೆಪ್ಪನನ್ನು ಅಜ್ಜಿ ಅಂಬಮ್ಮ ತುಂಬಾ ಪ್ರೀತಿಯಿಂದ ಕಾಣುತ್ತಿದ್ದರು. ಅತಿಯಾಗಿ ಹಚ್ಚಿಕೊಂಡಿದ್ದರು. ಹೀಗಾಗಿ, ಪುಟ್ಟ ಮೊಮ್ಮಗನ ಸಾವಿನ ಸುದ್ದಿ ಬರಸಿಡಿಲಿನಂತೆ ಬಡಿದು ಅಜ್ಜಿ ಅಂಬಮ್ಮ ಅವರೂ ಕೊನೆಯುಸಿರೆಳೆದಿದ್ದಾರೆ.
ಒಂದೇ ದಿನ ಅಜ್ಜಿ , ಮೊಮ್ಮಗ ಸಾವಿಗೀಡಾದ ಸುದ್ದಿ ಇಡೀ ಗ್ರಾಮವನ್ನು ದುಖದಲ್ಲಿ ಮುಳುಗಿಸಿದೆ. ಬಂಧು ಬಾಂಧವರು, ಸ್ಥಳೀಯರು ಅಜ್ಜಿ, ಮೊಮ್ಮಗನ ಪ್ರೀತಿ, ವಾತ್ಸಲ್ಯದ ಬಗ್ಗೆ ನೆನೆದು ಕಣ್ಣೀರಿಡುತ್ತಿದ್ದಾರೆ.