ಸ್ಪರ್ಧಾತ್ಮಕ ಯುಗದಲ್ಲಿ ಸವಾಲ್ ಸ್ವೀಕರಿಸಲು ಸಿದ್ಧರಾಗಿ
ಗುರಿ ಇದ್ದಡೆ ಬಾಳಿಗೊಂದು ಗರಿ-ಪ್ರಾಚಾರ್ಯ ಸಾಹು
ಶಹಾಪುರಃ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿ ಜೀವನವು ಅಧಿಕ ಸವಾಲಿನಿಂದಕೂಡಿದ್ದು, ಅದನ್ನು ಸಮರ್ಪಕವಾಗಿ ಎದುರಿಸಲು ಸಕರಾತ್ಮಕ ಧೋರಣೆ ಬೆಳೆಸಿಕೊಳ್ಳಬೇಕು ಎಂದು ಶ್ರೀಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಶಿವಲಿಂಗಣ್ಣ ಆರ್.ಸಾಹು ಅಭಿಪ್ರಾಯಪಟ್ಟರು.
ನಗರದ ಸಂಗಮ್ಮ ಬಾಪುಗೌಡ ದರ್ಶನಾಪುರ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ನಿರಂತರ ಅಧ್ಯಯನ ಮಾಡುವುದು ಸೂಕ್ತ. ಗುರಿ ಇದ್ದಡೆ ಬಾಳಿಗೊಂದು ಗರಿ. ಅಷ್ಟೇ ಅಲ್ಲದೆ ಭವಿಷ್ಯದ ಬದುಕು ಉಜ್ವಲವಾಗುತ್ತದೆ. ಸಾಧನೆಯ ಹಾದಿಯಲ್ಲಿ ಪ್ರಯತ್ನವನ್ನು ಮುಂದೂಡುವ ಪ್ರವೃತ್ತಿ ತೊರೆದು ಕಾರ್ಯಶೀಲತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬಾಪುಗೌಡ ದರ್ಶನಾಪುರ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಪಿ.ಸಾಸನೂರ ಮಾತನಾಡಿ, ವಿದ್ಯಾರ್ಥಿಗಳು ಪಿ.ಯು.ಸಿ ಹಂತದಲ್ಲಿ ಕಾಲೇಜು ಮೆಟ್ಟಿಲು ಹತ್ತುವ ಮೂಲಕ ಎಷ್ಟು ಖುಷಿ ಪಡುತ್ತಾರೋ, ಅಷ್ಟೇ ಖುಷಿ-ಆಸಕ್ತಿಯಿಂದ ಓದಿನಲ್ಲಿಯೂ ತೊಡಗಿಸಿಕೊಂಡಲ್ಲಿ ಭವಿಷ್ಯದ ಹಾದಿ ಸುಗಮವಾಗುತ್ತದೆ.
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವರ್ಷದ ಪಠ್ಯಕ್ರಮಗಳನ್ನು ಮನನ ಮಾಡಿಕೊಳ್ಳಲು ನಿಗದಿತ ವೇಳಾಪಟ್ಟಿ ಹಾಕಿಕೊಂಡು ಸ್ವಸಾಮಥ್ರ್ಯದ ಮೇಲೆ ದೃಢವಾದ ನಂಬಿಕೆಯೊಂದಿಗೆ ಅಭ್ಯಾಸ ಮಾಡಬೇಕು.
ಪ್ರತಿದಿನ ಅಭ್ಯಾಸ ಮಾಡುವುದರಿಂದ ವಿಷಯ ನೆನಪಿನಲ್ಲಿಟ್ಟುಕೊಳ್ಳಲು ಸುಲಭವಾಗುತ್ತದೆ ನಿತ್ಯ ಪಠಣದಿಂದ ಮನವರಿಕೆಯಾಗಿ ಪರೀಕ್ಷೆ ಎದುರಿಸಲು ಉಚಿತವಾಗಿ ಧೈರ್ಯ ಬರಲು ಸಾಧ್ಯವಿದೆ. ನಿರಂತರ ಮನನ ಮಾಡಿ ನೋಡಿದಾಗ ಇದನ್ನು ಅರಿಯಬಹುದು ಎಂದು ತಿಳಿಸಿದರು.
ಅಧ್ಯಕ್ಷ ಸ್ಥಾನವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಗರ್ಜಪ್ಪ ಪೂಜಾರಿ ಮಾತನಾಡಿ, ಪಿಯುಸಿ ಹಂತ ವಿದ್ಯಾರ್ಥಿಗಳ ಜೀವನದಲ್ಲಿ ಅತೀ ಮಹತ್ವದ ತಿರುವು ಎಂಬುವುದರಲ್ಲಿ ಬೇರೆ ಮಾತಿಲ್ಲ. ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮವಾಗಲಿ, ವಿದ್ಯಾರ್ಥಿಗಳಲ್ಲಿ ಓದಬೇಕೆಂಬ ಛಲವಿರವಿರಬೇಕು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ವಿಜ್ಞಾನ ಅಧ್ಯಯನ ಆರಂಭದಲ್ಲಿ ಕಷ್ಟವೆನಿಸಿದರೂ ಸ್ವಪ್ರಯತ್ನದಿಂದ ಅವರು ಹೆಚ್ಚಿನ ಸಾಧನೆ ಮಾಡಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀಸಾಯಿ ವಿದ್ಯಾನಿಕೇತನ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ್ವರಲು, ಸಂಸ್ಥೆಯ ವ್ಯವಸ್ಥಾಪ ಮೋತಿರಾಜ್ ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಈಶ್ವರಿ ನಿರೂಪಿಸಿದರೆ, ಭಾಗ್ಯಶ್ರೀ ಸ್ವಾಗತಿಸಿದರು. ಅಬೀಬ್ ಮುಂಡರಗಿ ವಂದಿಸಿದರು. ಶಾಲಾ ಕಾಲೇಜು ಶಿಕ್ಷಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.