ಯುಗಾದಿ ವಿಶೇಷ : ಉತ್ತರಕರ್ನಾಟಕದ ‘ಬೇವಿನ ಗಡುಗೆ’ ಹಬ್ಬ ಮತ್ತು ಬೇಸಿಗೆ!
-ವಿನಯ ಮುದನೂರ್
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ…
ಮರ ಗಿಡಗಳ ಬೀದಿಯಲ್ಲಿ ಹೂವಿನ ಹಾಸಿಗೆಯ ಸ್ವಾಗತ. ಅರೇ ಈವತ್ತು ನಗರಸಭೆಯವರು ಕಸಗುಡಿಸುವುದು ಮರೆತುಬಿಟ್ಟರಾ ಅಂದುಕೊಳ್ಳುವಷ್ಟರಲ್ಲಿ ಹೂವಿನ ಘಮ. ಮರಗಳ ಮೇಲೆ ಕಣ್ಣಾಡಿಸಿದರೆ ಹಣ್ಣುಗಳ ರಾಶಿ. ಅರೆರೆ ಹದಿನೈದು ದಿನಗಳ ಹಿಂದೆ ಈ ಮರ ಮೋಟು ಮರದಂತಿತ್ತಲ್ಲ ಎಂದೆಣಿಸುವಷ್ಟರಲ್ಲೇ ನೆನಪಾಗುವುದು ಯುಗಾದಿ ಬಂತು!
ಬೆಳಕಿನ ಹಬ್ಬ ದೀಪಾವಳಿಗೆ ದೀಪ ಹಚ್ಚಿ ಸಂಭ್ರಮಿಸುತ್ತೇವೆ. ಬಣ್ಣದ ಹಬ್ಬ ಹೋಳಿಗೆ ಬಣ್ಣ ಹಚ್ಚಿಕೊಂಡು ಬೀಗುತ್ತೇವೆ. ಹೀಗೆ ಪ್ರತಿ ಹಬ್ಬವನ್ನೂ ವಿಭಿನ್ನ ಆಚರಣೆಗಳ ಮೂಲಕ ಸ್ವಾಗತಿಸುತ್ತೇವೆ. ಆದರೆ, ಪ್ರಕೃತಿಯ ನಂಟಿನ ಯುಗಾದಿ ಮಾತ್ರ ಸದಾ ಹೊಸತನದೊಂದಿಗೆ ಆಗಮಿಸುತ್ತದೆ. ನಿಸರ್ಗ ಸೃಷ್ಠಿಯ ಜೊತೆಗೆ ಬದುಕಿನ ಪಾಠ ಹೇಳುವ ಅಪರೂಪದ ಹಬ್ಬ. ಯುಗಗಳೇ ಕಳೆದರೂ ಹೊಸರೂಪದಲ್ಲೇ ಬರುವ ಏಕೈಕ ಹಬ್ಬ ಯುಗಾದಿ.
ಪ್ರಕೃತಿಯ ಹಬ್ಬ ಯುಗಾದಿಯ ಸಂಭ್ರಮದ ಜೊತೆಗೆ ಮುಂಬರುವ ಬೇಸಿಗೆ ನೆನೆದರೆ ಮೈ ಬೆವರುವುದು ಗ್ಯಾರಂಟಿ. ಅದರಲ್ಲೂ ಉತ್ತರ ಕರ್ನಾಟಕದ ಬೇಸಿಗೆ ಬಗ್ಗೆ ಬೇರೆ ಹೇಳಬೇಕಿಲ್ಲ. ಆದರೆ, ಅಂಥ ಬೇಸಿಗೆಯಲ್ಲೂ ತಣ್ಣಗಿರುವ ಪ್ಲಾನನ್ನು ಕಾಲಾನುಕಾಲದ ಹಿಂದೆಯೇ ಪೂರ್ವಜರು ಕಂಡುಕೊಂಡಿದ್ದರು. ಅದೇ ಪ್ರತಿ ಯುಗಾದಿಗೆ ಉತ್ತರ ಕರ್ನಾಟಕದ ಜನ ಕೊಂಡುಕೊಳ್ಳುವ ಬಡವರ ಫ್ರಿಡ್ಜ್!
ಉತ್ತರ ಕರ್ನಾಟಕದಲ್ಲಿ ಮಣ್ಣಿನ ಮಡಿಕೆ (ಬೇವಿನ ಗಡಿಗೆ) ಖರೀಧಿಸುವ ಮೂಲಕವೇ ಪ್ರತಿ ಯುಗಾದಿ ಆರಂಭ ಆಗುತ್ತದೆ. ಹೀಗಾಗಿ, ಇಂದಿಗೂ ಬೇವಿನ ಗಡುಗೆಗೆ ಈ ಭಾಗದಲ್ಲಿ ಭಾರೀ ಬೇಡಿಕೆ ಇದೆ. ಮಣ್ಣಿನ ಮಡಿಕೆಗಳಿಗೂ ನಲ್ಲಿ ಅಳವಡಿಸಿ ಕೊಂಚ ಮೊಡಿಫೈ ಮಾಡಲಾಗಿದೆ. ಹಬ್ಬದ ಸಂದರ್ಭದಲ್ಲಿ ಮಡಿಕೆ ಮಾರುವವರು ಗಲ್ಲಿಗಲ್ಲಿಗೆ ಬಂದು ಹಬ್ಬದ ವ್ಯಾಪಾರದಲ್ಲಿ ತೊಡಗಿರುತ್ತಾರೆ. ಹಬ್ಬದ ದಿನ ಮಹಿಳೆಯರು ಮೊದಲು ಹೂವು ಹಾಕಿ ಪೂಜೆ ಸಲ್ಲಿಸುವುದೇ ಆ ಬೇವಿನ ಗಡಿಗೆಗೆ. ಅಡ್ಡಣಗಿಯ ಮೇಲೆ ಬೇವಿನ ಗಡುಗೆ ಇರಿಸಿ ಮಾವು, ಬೇವು, ಬೆಲ್ಲ ಸೇರಿದಂತೆ ಕಲ್ಲಂಗಡಿ, ಬಾಳೇಹಣ್ಣು, ಸಪೋಟ, ಕರ್ಬೂಜ, ದ್ರಾಕ್ಷಿ ಹೀಗೆ ಎಲ್ಲಾ ಬಗೆಯ ಹಣ್ಣುಗಳನ್ನೂ ಸೇರಿಸಲಾಗುತ್ತದೆ. ಹಾಲು, ತುಪ್ಪ ಮತ್ತು ಮೀಸಲು ನೀರನ್ನು ಸೇರಿಸಿ ಬೇವು ತಯಾರಿಸಲಾಗುತ್ತದೆ.
ದೇವರಿಗೆ ಬೇವು ಮತ್ತು ಹೋಳಿಗೆಯ ನೈವೇದ್ಯ ಸಲ್ಲಿಸಿ ಪೂಜಿಸಲಾಗುತ್ತದೆ. ಬಳಿಕ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಬೇವು ಸವಿಯುವುದು. ಹೋಳಿಗೆ, ಹಪ್ಪಳ, ಸೆಂಡಿಗೆ, ತರೇಹವಾರಿ ಕಾಳು ಪಲ್ಯ ತಿಂದು ಅನ್ನ ಮತ್ತು ಹೋಳಿಗೆಸಾರು ಬಾಯಿ ಚಪ್ಪರಿಸುವುದು ಸಾಂಪ್ರಾದಾಯಿಕ ಪದ್ಧತಿ. ಮನೆ ಮಂದಿಯ ಹಬ್ಬದೂಟ ಮುಗಿಯುತ್ತಿದ್ದಂತೆ ಅಕ್ಕಪಕ್ಕದ ಮನೆಯವರನ್ನು ಆಹ್ವಾನಿಸಿ ಬೇವು ಹಂಚಲಾಗುತ್ತದೆ. ಪರಧರ್ಮಿಯರಿಗೆ ಬೇವು ಮತ್ತು ಹಬ್ಬದೂಟ ಹಂಚಿ ಹಬ್ಬದ ಶುಭಾಶಯಗಳನ್ನು ವಿನಿಮಯಿಸಿಕೊಳ್ಳುವ ಭಾವೈಕ್ಯತೆಯ ಹಬ್ಬ ಯುಗಾದಿ.
ಹಬ್ಬ ಮುಗಿದ ಬಳಿಕ ಬೇವಿನ ಗಡಿಗೆಯನ್ನು ಸ್ವಚ್ಛವಾಗಿ ತೊಳೆದು ಮಾಳಿಗೆ ಮೇಲೆ ಬಿಸಿಲಿಗೆ ಇಡಲಾಗುತ್ತದೆ. ತದನಂತರೆ ಒಂದೆರಡು ದಿನ ನೀರನ್ನು ತುಂಬಿಟ್ಟು ಚೆಲ್ಲಲಾಗುತ್ತದೆ. ಗಡಿಗೆ ಸಂಪೂರ್ಣ ಸಿಹಿಕಳೆದು ಸ್ವಚ್ಛವಾಗಿದ್ದು ಖಚಿತವಾದ ಬಳಿಕ ಅಡುಗೆ ಮನೆಗೆ ಶಿಫ್ಟ್ ಆಗುತ್ತದೆ. ಕುಡಿಯುವ ನೀರನ್ನು ಗಡಿಗೆಯಲ್ಲಿ ತುಂಬಿಸಿ ಸುತ್ತಲೂ ಬಟ್ಟೆಯೊಂದನ್ನು ಕಟ್ಟಲಾಗುತ್ತದೆ. ಆ ಗಡಿಗೆಯಲ್ಲಿನ ನೀರು ಸವಿಯುವುದೇ ಚಂದ. ಫ್ರಿಡ್ಜಿನಲ್ಲಿಟ್ಟ ನೀರಿಗಿಂತಲೂ ತಂಪು ಮತ್ತು ಅಷ್ಟೇ ಮಧುರ.
ಇಂದಿಗೂ ಸಹ ಅನೇಕರು ಮನೆಯಲ್ಲಿ ಫ್ರಿಡ್ಜ್ ಇದ್ದರೂ ಸಹ ಬೇಸಿಗೆ ಕಳೆಯುವವರೆಗೂ ಬೇವಿನ ಗಡುಗೆಯ ನೀರನ್ನೇ ಬಳಸುತ್ತಾರೆ. ಮಣ್ಣಿನ ಮಡಿಕೆಯಲ್ಲಿನ ನೀರು ಸೇವನೆ ಹೊಟ್ಟೆಗೆ ತಂಪು, ದೇಹಕ್ಕೂ ಆರೋಗ್ಯ. ವೈಗ್ನಾನಿಕವಾಗಿಯೂ ಫ್ರಿಡ್ಜ್ ನೀರಿಗಿಂತ ಮಡಿಕೆಯಲ್ಲಿನ ನೀರು ಸೇವನೆ ಆರೋಗ್ಯಕ್ಕೆ ಉತ್ತಮವಾಗಿದೆ. ಬೇವಿನ ಗಡುಗೆಯ ಯುಗಾದಿ ಆಚರಣೆಯ ಜೊತೆಗೆ ವೈಗ್ನಾನಿಕ ಸತ್ಯವನ್ನು ಅರಿತಿದ್ದ ಪುರಾತನರು ನಿಜಕ್ಕೂ ಗ್ರೇಟ್ ಅಲ್ಲವೇ…
ಯುಗಾದಿ ಶುಭಾಶಯಗಳು…