ನಾಳೆ ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ – ರಾಜ್ಯದಿಂದ ಕೇಂದ್ರ ಮಂತ್ರಿಮಂಡಲ ಸೇರುವವರಾರು?
ದೆಹಲಿ : ಎನ್‌ಡಿಎ ಶಾಸಕಾಂಗ ನಾಯಕನಾಗಿ ಅವಿರೋಧವಾಗಿ ಆಯ್ಕೆಗೊಂಡ ಸದ್ಯದ ಹಂಗಾಮಿ ಪ್ರಧಾನಿ ನರೇಂದ್ರ ಮೋದಿ, ನಾಳೆ ಸಾಯಂಕಾಲ ಮತ್ತೆ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಅದಕ್ಕಾಗಿ ದೆಹಲಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗುರುವಾರ ಎನ್‌ಡಿಎ ಸಭೆಯ ಬಳಿಕ ಶುಕ್ರವಾರ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಬಿಜೆಪಿಯ 243 ಸದಸ್ಯರು ಸೇರಿದಂತೆ ಎನ್‌ಡಿಎ ಎಲ್ಲ ಅಂಗ ಪಕ್ಷಗಳ ಬೆಂಬಲ ಪತ್ರದೊಂದಿಗೆ ಸರ್ಕಾರ ರಚನೆಗೆ ಹಕ್ಕು ಪ್ರತಿಪಾದನೆ ಮಾಡಿದ್ದರು. ಪ್ರಮಾಣ ವಚನ ಸಮಾರಂಭದ ಮುನ್ನಾ ದಿನವಾದ ಇಂದು ಶನಿವಾರ ನಿಯೋಜಿತ ಪ್ರಧಾನಿಯವರು, ತಮ್ಮ ನೂತನ ಮಂತ್ರಿ ಮಂಡಲಕ್ಕೆ ಸಚಿವರಾಗಿ ಸೇರಲಿರುವ ಸದಸ್ಯರ ಹೆಸರುಗಳನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಲಿದ್ದಾರೆಂದು ಮತ್ತು ಈ ಬಗ್ಗೆ ಟಿಡಿಪಿ, ಜೆಡಿಯು, ಎಲ್‌ಜೆಪಿ, ಸೇರಿದಂತೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ-ಎನ್‌ಡಿಎ ಎಲ್ಲ ಅಂಗ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ. ಇನ್ನು, ನಾಳಿನ ಮೋದಿ ಸಂಪುಟದಲ್ಲಿ ನಮ್ಮ ರಾಜ್ಯದಿಂದ ಸಚಿರಾಗುವ ಅವಕಾಶ ಯಾರಿಗೆ ದೊರಕಬಹುದು ಅನ್ನೋದು ಸದ್ಯದ ಮಟ್ಟಿಗೆ ಬಹು ಚರ್ಚಿತ ವಿಷಯವಾಗಿದೆ. ಲೋಕಸಭೆ ಚುನಾವಣೆ ಪೂರ್ವದಲ್ಲೇ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರ ಪ್ರತಿಫಲವೆಂಬಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಮಂಡ್ಯ ಸಂಸದ ಕುಮಾರಸ್ವಾಮಿ ಇದೀಗ ಕೇಂದ್ರದಲ್ಲಿ ಸಚಿವರಾಗೋದು ಪಕ್ಕಾ ಆಗಿದೆ. ಅಲ್ಲಿಗೆ ಒಕ್ಕಲಿಗ ಸಮುದಾಯದ ಕೋಟಾ ಮುಕ್ತಾಯವಾದಂತಾದರೆ, ಇನ್ನು ಎಸ್ಸಿ ಎಡಗೈ ಸಮುದಾಯಕ್ಕೆ ಸೇರಿದ ಈ ಬಾರಿ ಚಿತ್ರದುರ್ಗದಲ್ಲಿ ಬಿಜೆಪಿಯಿಂದ ಗೆದ್ದು ಬಂದ ಮಾಜಿ ಡಿಸಿಎಂ ಗೋವಿಂದ ಕಾರಜೋಳ್ ಹಾಗೂ ಪಿಎಂ ಮೋದಿ ಅವರಿಗೆ ಅತ್ಯಾಪ್ತರೆನ್ನಿಸಿದ ಹುಬ್ಬಳ್ಳಿ- ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ ಹೆಸರು ಜೋರಾಗಿ ಕೇಳಿ ಬಂದಿದೆ. ಇತ್ತ, ಲಿಂಗಾಯತರ ಕೋಟಾದಡಿಯಲ್ಲಿ ಹಾವೇರಿ ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬೆಳಗಾವಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೆಸರು ಕೇಳಿ ಬರುತ್ತಿದ್ದು, ಇವರಿಬ್ಬರಲ್ಲಿ ಕೆಂದ್ರ ಸಚಿವರಾಗುವ ಭಾಗ್ಯ ಕೊನೆಗೆ ಯಾರ ಪಾಲಿಗಿದೆ? ಅಂತಾ ಗೊತ್ತಿಲ್ಲ. ಅತ್ತ ಐದು ಬಾರಿ ಸಂಸದರಾಗಿರುವ ಬಾಗಲಕೋಟೆಯ ಸಂಸದ ಪಿ.ಸಿ.ಗದ್ದೀಗೌಡರ್ ಹೆಸರೂ ಕೇಳಿ ಬರುತ್ತಿದೆ. 4 ಬಾರಿ ಸಂಸದರಾದ ಬಿಎಸ್‌ವೈ ಪುತ್ರ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಸಚಿವ ಸ್ಥಾನ ಇಲ್ಲವೆಂದೇ ಹೇಳಲಾಗುತ್ತದೆ. ಅದಕ್ಕೆ ಕಾರಣ ಎಲ್ಲರಿಗೂ ತಿಳಿದಿರುವಂತೆ ಯಡಿಯೂರಪ್ಪನವರ ಒಬ್ಬ ಪುತ್ರ ವಿಜಯೇಂದ್ರ ಅವರಿಗೆ ಬಿಜೆಪಿ ಈಗಾಗಲೇ ರಾಜ್ಯಾಧ್ಯಕ್ಷ ಹುದ್ದೆಯನ್ನು ನೀಡಿದೆ. ಜೊತೆಗೆ ಯಡಿಯೂರಪ್ಪ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯರೂ ಕೂಡ. ಹೀಗಾಗಿ, ರಾಘವೇಂದ್ರ ಹೆಸರನ್ನು ಕೈ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ನಾಳಿನ ಪ್ರಮಾಣ ವಚನ ಸಮಾರಂಭ ಹಿನ್ನೆಲೆ ದೇಶ-ವಿದೇಶಗಳಿಂದ ಗಣ್ಯರನ್ನು ಆಹ್ವಾನಿಸಲಾಗಿದ್ದು, ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ, ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮ್ ಸಿಂಘೆ ಈಗಾಗಲೇ ದೆಹಲಿಗೆ ಆಗಮಿಸಿದ್ದರೆ, ಭಾರತದೊಂದಿಗೆ ಅಷ್ಟಕ್ಕಷ್ಟೆ ಎಂಬಂತಿರೋ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝ ನಾಳೆ ಆಗಮಿಸಲಿದ್ದಾರೆಂದು ದೆಹಲಿ ಮೂಲಗಳು ತಿಳಿಸಿವೆ. ಇತ್ತ ಎನ್‌ಡಿಎ ಮಿತ್ರ ಪಕ್ಷವಾಗಿರುವ ಜೆಡಿಎಸ್ ನ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡರು ಈಗಾಗಲೇ ದೆಹಲಿಯಲ್ಲೇ ಬೀಡು ಬಿಟ್ಟಿದ್ದರೆ, ಮಾಜಿ ಸಿಎಂ ಯಡಿಯೂರಪ್ಪ ಇಂದು ಸಂಜೆ ದೆಹಲಿಗೆ ಹಾರಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸೋದನ್ನು ಕಣ್ತುಂಬಿಕೊಳ್ಳಲು ಅಸಂಖ್ಯಾತ ಮೋದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಮತ್ತು ದೇಶ ವಾಸಿಗಳು ಕಾಯುವಂತಾಗಿದೆ. ನಾಳಿನ ಪ್ರಮಾಣ ವಚನ ಸಮಾರಂಭದಲ್ಲಿ ರಾಷ್ಟಪತಿ ದ್ರೌಪದಿ ಮುರ್ಮು, ಮೋದಿ ಅವರಿಗೆ ಪ್ರಮಾಣದ ಗೌಪ್ಯತೆಯನ್ನು ಬೋಧಿಸಲಿದ್ದಾರೆ.