ಅಂಕಣಬಸವಭಕ್ತಿ

ಲಿಂಗಾಯತ ಎಂಬ ಆಲದ ಮರ‌ ಸೊರಗಲು ಕಾರಣವೇನು.? ಗೊತ್ತೆ.?

ಜಾತಿ ಸೋಂಕಿನ ಗುದಮುರಗಿಯಿಂದ ನಮಗಿಲ್ಲ ನೆಮ್ಮದಿ.!

ಜಾತಿಯ ಸೋಂಕಿನ ಈ ಗುದಮುರಗಿಯಿಂದ ನಮಗಿಲ್ಲ ನೆಮ್ಮದಿ.!

‘ಬಸವ ಧರ್ಮ’ದ ಕಾಯಕ ಪಂಗಡಗಳು ಜಿದ್ದಿಗೆ ಬಿದ್ದಂತೆ ಸಂಘಟಿತರಾಗಲು ಹವಣಿಸುತ್ತಿರುವುದು ಅರಿವಿಲ್ಲದ ಸಾಹಸ. ಬಣಜಿಗ, ಪಂಚಮಸಾಲಿ, ಗಾಣಿಗ, ಸಾದರ, ಹಡಪದ, ಹೂಗಾರ, ಕುಂಬಾರ, ಕಂಬಾರ, ಕೋಳಿ, ಡೋಹರ, ಮಾದಾರ ಅಂತ ‘ಬೇಲಿ’ಗಳನ್ನು ಹಾಕಿಕೊಳ್ಳುವ ಪರಿ ಸಾಗಿದ್ದು; ‘ಕಾಸಿ ಕಮ್ಮಾರನಾದ ಬೀಸಿ ಮಡಿವಾಳನಾದ’ ಎನ್ನುವ ಬಸವಣ್ಣರ ಮಾತು ಮರೆತು, ಕಾಯಕದಿಂದ ಬಂದ ಜಾತಿಯನ್ನೇ ಮುಂದೆ ಮಾಡಿ ‘ಲಿಂಗಾಯತ’ ಎನ್ನುವ ಆಲದ ಮರವನ್ನು ಸೊರಗಿಸಲಾಗುತ್ತಿದೆ. ಇದರಿಂದ ಆ ಮರದ ಟೊಂಗೆಗಳು ಒಂದಕ್ಕೊಂದು ಶ್ರೇಷ್ಠ ಅಂದುಕೊಳ್ಳುವ ‘ಸುಳ್ಳೇ ಚಟ’ ಹತ್ತುತ್ತಿದೆಯೇ ಹೊರತು ಬೇರೇನಲ್ಲ.

ಪ್ರತ್ಯೇಕ ಪೀಠಗಳು, ಪ್ರತ್ಯೇಕ ಸ್ವಾಮೀಜಿಗಳು, ಪ್ರತ್ಯೇಕ ವಿಚಾರಗಳು, ಪ್ರತ್ಯೇಕ ಲಾಂಛನಗಳು, ಪ್ರತ್ಯೇಕ ಮಠಗಳು ಮತ್ತು ಪಂಗಡಗಳಲ್ಲೇ ಪಂಗಡ.. ಬಣಜಿಗ, ಆದಿ ಬಣಜಿಗರೆನ್ನುವ ಬೇಗುದಿ! ಒಂದೇ ಎರಡೇ.. ಹಿಂದುಳಿದ ವರ್ಗದ ಮಠಗಳು ಕೂಡ ಇದರ ಲೆಕ್ಕಕ್ಕೇ ಸೇರುತ್ತವೆ.
ನಮ್ಮೊಳಿತಿಗೆ ಬಸವಾದಿ ಶರಣರಿದ್ದಾರೆ, ತಿಳಿವಿಗೆ ಬುದ್ಧನಿದ್ದಾನೆ ಎಂದು ನಾವೆಲ್ಲ ಮರೆತೇ ಇದ್ದೇವೆ.

ಪ್ರತಿಯೊಬ್ಬರಲ್ಲೂ ತಮ್ಮ ಜಾತಿಯ ಸೆಳೆತ ‘ಒಂಜರ’ವಾದರೂ ಒಳಗೆ ಇದ್ದೇ ಇರುತ್ತದೆ. ಅದು ನಾವು ಬೆಳೆದು ಬಂದ ಪರಿಸರ, ವಂಶವಾಹಿನಿಯಿಂದ ಬಂದಿರುತ್ತದೆ. ಅದನ್ನು ಮೀರಿ ನಾವು ಮನುಷ್ಯರಾಗಲು ಹುಟ್ಟಿದ್ದೇ ಬಸವ ಮತ್ತು ಬೌದ್ಧ ಧರ್ಮಗಳಂತಹವು. ಬಸವಣ್ಣ, ಬುದ್ಧರು ಧರ್ಮ ಆಗಲಿ ಅಂತ ಯಾವುದೂ ಮಾಡಲಿಲ್ಲ. ಆದರೆ ಅವರು ಮಾಡಿದ್ದು ಅರಿವು ತಂದ ‘ಒಳಿತಿನ ಧರ್ಮ’ವಾಯಿತು ಅಷ್ಟೆ. ಆದರೆ, ಅವರಾಶಯದ ಅರಿವು ನಮ್ಮಲ್ಲಿ ಉಳಿದು, ಬೆಳೆಯಲಿಲ್ಲ.

ಬಣಜಿಗರು ಮಠಗಳನ್ನು ಕಟ್ಟಿದ್ದಾರೆ ಅವರ ವಟುಗಳೇ ಸ್ವಾಮಿಗಳಾಗಬೇಕು ಎನ್ನುವುದು, ಮತ್ತುಳಿದವರು ‘ಕಿತ್ತೂರು ಚನ್ನಮ್ಮ ನಮ್ಮವಳು’ ಎನ್ನೋದು, ಅಕ್ಕ ಮಹಾದೇವಿ ನಮ್ಮ ವಂಶದವಳು ಅಂತ ಮಾತಾಡೋದು, ಸಂಗೊಳ್ಳಿ ರಾಯಣ್ಣ, ಅಂಬಿಗರ ಚೌಡಯ್ಯ ನಮ್ಮಾತ ಅಂತ ಹೇಳಿಕೊಳ್ಳುವುದು ಸರಿಯೇ ? ಆಯಾ ಸಮುದಾಯದ ಮಹಾತ್ಮ/ತ್ಮೆಯ ಫೋಟೊ ಹಾಕಿಕೊಂಡು ಇವರು ‘ಈ’ ಜಾತಿಯವರು ಅಂತ ಜಗಜ್ಜಾಹೀರು ಗೊಳಿಸಿ ಅಲ್ಲಿಯ ವರೆಗೆ ಪೂಜ್ಯನೀಯರಾಗಿದ್ದವರನ್ನು ಸಂಕುಚಿತವಾಗಿ ನೋಡುವಂತೆ ಮಾಡುತ್ತಿದ್ದೇವೆ ಅಂತ ನಮಗೆ ಅನ್ನಿಸುತ್ತಲೇ ಇಲ್ಲ. ಅಷ್ಟೊಂದು ಅಸೂಕ್ಷ್ಮ ಮನುಷ್ಯರಾಗಿದ್ದೇವೆ ನಾವು.
..
ಬಣಜಿಗರು ಮಠಗಳಿಗೆ ಸಹಾಯ ಮಾಡಿದ್ದು ಎಲ್ಲರಿಗೂ ಅನುಕೂಲವಾಗಲಿ ಎಂದು. ಚನ್ನಮ್ಮ ತಾಯಿ, ರಾಯಣ್ಣ ಹೋರಾಡಿದ್ದು ಸ್ವಾತಂತ್ರ್ಯಕ್ಕಾಗಿ. ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಡೋಹಾರ ಕಕ್ಕಯ್ಯ, ಕುಂಬಾರ ಗುಂಡಯ್ಯ, ಶರಣ ಕುರುಬ ಗೊಲ್ಲಾಳ, ಮಾದಾರ ಚನ್ನಯ್ಯರು ಜೀವ ತೇಯ್ದದ್ದು ನಮ್ಮಲ್ಲಿನ ಹೊಲಸು ತೊಳೆಯಲು! ಶರಣರು ತಮ್ಮ ಪೂರ್ವಾಪರ ಮರೆತು ಮನುಕುಲದ ಒಳಿತಿಗಾಗಿ ಶರಣ ಧರ್ಮದಲ್ಲಿ ಲೀನರಾದರು.

ಕಿತ್ತೂರು ಚನ್ನಮ್ಮ ಇಂತಹ ಧರ್ಮವನ್ನು ಆರಾಧಿಸಿದವರು. ಆದರೆ, ಮತ್ತೆ ಅವರನ್ನು ಅವರವರ ಜಾತಿಗೇ ಕರೆದುಕೊಂಡು ಹೋಗಿ ಬಿಡುತ್ತಿರುವ ನಾವು ನಿಜಕ್ಕೂ ಎಷ್ಟು ಸಣ್ಣವರು ಅಲ್ಲವೇ!?
..
ನೆನಪಿರಲಿ; ಜಾತಿಗಳ ಮೀರಿ ಎಲ್ಲವನ್ನ, ಎಲ್ಲರನ್ನ ಒಳಗೊಂಡಿದ್ದೇ ಲಿಂಗಾಯತ. ಬಸವಾದಿ ಶರಣರ ಆಶಯವೇ ಅದಾಗಿತ್ತು ಅಂತ ಯಾರಿಗೂ ಗೊತ್ತಿಲ್ಲದ್ದೇನಲ್ಲ. ಲಿಂಗಾಯತ ಎನ್ನುವ ಸಮುದ್ರವನ್ನು ಎಲ್ಲ ಒಳ ಪಂಗಡಗಳವರು ಇನ್ನೂ ಸೇರುವ ಹಂತದಲ್ಲೇ ಇದ್ದೀವಿ ಅನ್ನೋದೇ ಈ ಹೊತ್ತಿನ ತಹತಹಿಕೆ.

ಅದರಲ್ಲೇ ಇನ್ನೂ ಗೊಂದಲ ನಮಗೆ.
ಹೀಗೆ ಅವರವರೇ ಅವರದ್ದು ಮಾತ್ರ ಸರಿ ಅಂತ ಸಾಗುತ್ತಿರುವುದರಿಂದ ಹಳ್ಳ, ನದಿಗಳು ನಾನೆಷ್ಟು ಶ್ರೇಷ್ಠ ಅಂತ ಯೋಚಿಸುತ್ತಲೇ ಸಮುದ್ರದ ಹಾದಿ ಮರೆತಂತಾಗುತ್ತದೆ.

ಈ ‘ಶ್ರೇಷ್ಠತೆ ವ್ಯಸನ’ ಬಸವಣ್ಣನವರ ಮೂಲಾಶಯಕ್ಕೆ ಧಕ್ಕೆ ತರುತ್ತಿದೆ ಎನ್ನುವ ಆತಂಕವೂ ನಮ್ಮ ಬಳಿ ಸುಳಿಯುತ್ತಿಲ್ಲದಿರುವುದು ಹಳಹಳಿಯದು. ಆದರೆ, ಇದೆಲ್ಲದಕ್ಕೆ ಮದ್ದು ಲಿಂಗಾಯತ ಧರ್ಮ ಆಗುವುದೊಂದೇ. ಇಲ್ಲದಿದ್ದರೆ ೨ಎ, ೩ಎ ಅನಕೋಂತ ಹಿಂಗೇ ಇರಬೇಕಾಗುತ್ತದೆ.. ಮುಂದೆಯೂ.

ಅರಿವೇ ‘ಗುರು’ ಆಗೋದು ಯಾವಾಗ?
..
ಬುದ್ಧ ಬೆಳಗಿದ್ದಾನೆ. ಬಸವಣ್ಣರೂ ವಿಶ್ವದೆಲ್ಲೆಡೆ ಹರಡಬೇಕಿದೆ. ಶರಣರ ಕಾಯಕ, ಮನುಷ್ಯತ್ವದ ಧರ್ಮ ಮಾನ್ಯವಾಗಬೇಕಿದೆ, ‘ಮನನ’ವಾಗಬೇಕಿದೆ. ಅದಾಗುವುದು ಅಷ್ಟು ಸುಲಭವೇ? ಗೊತ್ತಿಲ್ಲ. ಕಿಟಕಿಯಷ್ಟೇ ಅಲ್ಲ, ಮನದ ಬಾಗಿಲು ತೆರೆಯಬೇಕಿದೆ.

-ಶಿವಕುಮಾರ್ ಉಪ್ಪಿನ, ಪತ್ರಕರ್ತ-ಬರಹಗಾರ

Related Articles

Leave a Reply

Your email address will not be published. Required fields are marked *

Back to top button