ಎರಡು ಬಾರಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ದಿವ್ಯಾ ತನ್ವರ್
ಹರಿಯಾಣ: ಭಾರತದ ಅತ್ಯಂತ ಕಷ್ಟಕರವಾದ ಯುಪಿಎಸ್ ಸಿ ಪರೀಕ್ಷೆಯಲ್ಲಿ ಒಂದು ಬಾರಿ ಉತ್ತೀರ್ಣವಾಗುವುದೇ ಬಹಳ ಕಷ್ಟಕರವಾಗಿದೆ. ಆದರೆ ಎರೆಡೆರಡು ಬಾರಿ ಈ ಪರೀಕ್ಷೆಯನ್ನು ತರಬೇತಿ ಪಡೆಯದೇ ಉತ್ತೀರ್ಣರಾದ ದಿವ್ಯಾ ತನ್ವರ್ ಅವರ ಸ್ಪೂರ್ತಿದಾಯಕ ಕತೆ ಇದು.
ದಿವ್ಯಾ ತನ್ವರ್ ಅವರು ಮೂಲತಃ ಹರಿಯಾಣದ ಮಹೇಂದ್ರಗಢದವರು. ಮಹೇಂದ್ರಗಢದಲ್ಲೇ ತನ್ನ ಆರಂಭಿಕ ಶಾಲಾ ಶಿಕ್ಷಣವನ್ನು ದಿವ್ಯಾ ಅವರು ಪೂರ್ಣಗೊಳಿಸುತ್ತಾರೆ. ಬಳಿಕ ಅವರು ಇಲ್ಲಿನ ನವೋದಯ ವಿದ್ಯಾಲಯಕ್ಕೆ ಸೇರುತ್ತಾರೆ.
ತಮ್ಮ ಶಿಕ್ಷಣದ ಬಳಿಕ ದಿವ್ಯಾ ಅವರು ಯುಪಿಎಸ್ ಸಿ ಪರೀಕ್ಷೆಯನ್ನು ಬರೆಯಲು ನಿರ್ಧಾರ ಮಾಡುತ್ತಾರೆ. ಆದರೆ ಅವರಿಗೆ ಯುಪಿಎಸ್ ಸಿ ಪರೀಕ್ಷೆ ಬರೆಯಲು ತರಬೇತಿ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಸ್ವಯಂ ಅಧ್ಯಯನದ ಮೂಲಕ 2021 ರಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಾರೆ. ಈ ಪರೀಕ್ಷೆಯಲ್ಲಿ 438 ನೇ ರ‍್ಯಾಂಕ್ ಪಡೆಯುವ ಮೂಲಕ ಯುಪಿಎಸ್ ಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪಾಸ್ ಮಾಡುತ್ತಾರೆ. ಈ ಮೂಲಕ 21ನೇ ವಯಸ್ಸಿಗೆ ಐಪಿಎಸ್ ಸದಸ್ಯರಾಗುವಲ್ಲಿ ಯಶಸ್ವಿಯಾಗುತ್ತಾರೆ.
ಬಳಿಕ 2022 ರಲ್ಲಿ ಮತ್ತೆ ಯುಪಿಎಸ್ ಸಿ ಪರೀಕ್ಷೆಯನ್ನು ದಿವ್ಯಾ ಅವರು ಬರೆಯುತ್ತಾರೆ. ಈ ಬಾರಿ ಅವರು 105ನೇ ರ‍್ಯಾಂಕ್ ಪಡೆಯುವ ಮೂಲಕ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ದಿವ್ಯಾ ಅವರು ಸ್ವಯಂ ಅಧ್ಯಯನದ ಮೂಲಕ 22ನೇ ಐಎಎಸ್ ಅಧಿಕಾರಿಯಾಗುತ್ತಾರೆ.
ದಿವ್ಯಾ ಅವರು ಇನ್‌ಸ್ಟಾಗ್ರಾಂ ನಲ್ಲಿ 1,58,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಇದರಲ್ಲಿ ಅವರು ಯುಪಿಎಸ್ ಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಪ್ರೇರಣೆ ನೀಡುತ್ತಾರೆ.