Homeಜನಮನಪ್ರಮುಖ ಸುದ್ದಿ

ನಾಗಮಂಗಲ ಗಲಭೆ ಘಟನೆ ಎನ್‍ಐಎ ತನಿಖೆಗೆ ವಿಜಯೇಂದ್ರ ಆಗ್ರಹ

ಬೆಂಗಳೂರು: ದೇಶದ್ರೋಹಿಗಳ ವಿರುದ್ಧ ರಾಜ್ಯ ಕಾಂಗ್ರೆಸ್ ಸರಕಾರದ ಮೃದು ಧೋರಣೆಯಿಂದ ಶಾಂತಿ- ಸುವ್ಯವಸ್ಥೆ ಕದಡುವ ಕೆಲಸ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮಂಗಲ, ದಾವಣಗೆರೆ ಮತ್ತಿತರ ಕಡೆ ನಡೆದ ಗಲಭೆಗಳ ಕುರಿತು ನಿಮ್ಮ ನೇತೃತ್ವದಲ್ಲಿ ಸಮರ್ಪಕ ತನಿಖೆ ನಡೆಯಲು ಸಾಧ್ಯವಿಲ್ಲ. ಈ ಘಟನೆಗಳ ಬಗ್ಗೆ ಎನ್‍ಐಎ ಯಿಂದ ತನಿಖೆ ಆಗಬೇಕೆಂದು ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣ ಬದಿಗಿಡಿ. ಎಲ್ಲ ಸಮಾಜದ ಜನರು ನೆಮ್ಮದಿಯಿಂದ ಬದುಕುವಂತಾಗಲು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಬದಿಗಿಟ್ಟು, ಎಲ್ಲ ಘಟನೆಗಳ ತನಿಖೆಯನ್ನು ಎನ್‍ಐಎಗೆ ಕೊಡಿ ಎಂದು ಒತ್ತಾಯಿಸಿದರು.
ಹಿಂದೂಗಳ ಮೇಲೆ ಬಲಾತ್ಕಾರ ಆಗುತ್ತಿದೆ. ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಪೊಲೀಸರ ಕಣ್ಮುಂದೆ ಇದೆಲ್ಲ ನಡೆದರೂ ಅವರು ಕಣ್ಮುಚ್ಚಿ ಕೂತಿದ್ದಾರೆ. ಅವರಿಗೆ ಯಾವುದೇ ಅಧಿಕಾರ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಟೀಕಿಸಿದರು.

ರಾಜ್ಯದ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರಿಂದಲೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬ ಭ್ರಮೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಇದ್ದಾರೆ. ಇದೇ ಕಾರಣಕ್ಕೆ ಅಲ್ಪಸಂಖ್ಯಾತರು ರಾಜ್ಯದಲ್ಲಿ ಮೆರೆಯುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವಿಪಕ್ಷವಾದ ಬಿಜೆಪಿ ಈ ಎಲ್ಲ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದನ್ನು ಹೇಗೆ ಮುಂದೆ ತೆಗೆದುಕೊಂಡು ಹೋಗಬೇಕೆಂದು ಚರ್ಚಿಸಲಿದ್ದೇವೆ ಎಂದ ಅವರು, ರಾಜ್ಯದ ಅರಾಜಕತೆ ದಿನೇದಿನೇ ಹೆಚ್ಚಾಗಿದೆ. ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಆತಂಕ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button