ವಚನ ಪಿತಾಮಹಾ ಫ.ಗು.ಹಳಕಟ್ಟಿ ಕುರಿತು ಹಿರೇಮಠ ಬರಹ
ವಚನ ಪಿತಾಮಹ:ಡಾ.ಫ.ಗು.ಹಳಕಟ್ಟಿ ಕೊಡುಗೆ ಅಪಾರ
(ಜನ್ಮದಿನದ ಸ್ಮರಣೆಗಾಗಿ ಲೇಖನ)
………………………………………
ವಚನ ಸಾಹಿತ್ಯ ಸಂಗ್ರಹಕಾರ, ಶರಣಸಾಹಿತ್ಯವನ್ನು ಜನಸಾಮಾನ್ಯರಿಗೆ ಪರಿಚಯಿಸಿ, ಶರಣ ಸಂಸ್ಕ್ರತಿಯನ್ನು, ಶಿವಶರಣರ ವಿಚಾರದಾರೆ, ಚಿಂತನೆ, ಸಮಾಜಮುಖಿ ಕಾಳಜಿಗಳನ್ನು, ಶ್ರದ್ಧೆಯಿಂದ, ಪರಿಶ್ರಮದಿಂದ ಕನ್ನಡ ನಾಡಿನಲ್ಲಿ ಜೀವಂತವಾಗಿಸಿದವರು..
ಡಾ.ಫ.ಗು.ಹಳಕಟ್ಟಿಯವರು. ವಚನಗಳ ಹಸ್ತ ಪ್ರತಿಗಳನ್ನು ಸಂಗ್ರಹಿಸಿ, ಪ್ರಕಟಿಸಿ, ಶರಣಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ.
ಸರಳ, ಸಜ್ಜನಿಕೆ,ಕ್ರಿಯಾಶೀಲತೆ, ವಿಶೇಷ ಆಸಕ್ತಿ, ಪರಿಶ್ರಮ ಮತ್ತು ಕನ್ನಡನಾಡು,ನುಡಿ, ಹಾಗೂ ಸಾಹಿತ್ಯದ ಬಗ್ಗೆ ಅವರಿಗೆ ವಿಶೇಷ ಕಾಳಜಿ, ಪ್ರೀತಿ ಇದ್ದದ್ದನ್ನು ಗಮನಿಸಬಹುದು.ಅವರಲ್ಲಿಯ ಶಿಸ್ತು, ಶ್ರದ್ದೆ,ಮಾಡುವ ಕೆಲಸದಲ್ಲಿನ ನಿಷ್ಠೆಯಿಂದಾಗಿ ವಚನ ಸಾಹಿತ್ಯ ಸಂಗ್ರಹಕ್ಕೆ ಅವರು ಮಾಡಿದ ಸಾಹಸಪೂರ್ಣ ಕಾರ್ಯ ಶ್ಲಾಘನೀಯ ಹಾಗೂ ಸ್ಮರಣೀಯ.
ಜನನ.
………………………………………
ಫ.ಗು.ಹಳಕಟ್ಟಿಯವರು (ಫಕೀರಪ್ಪ, ಗುರುಬಸಪ್ಪ ಹಳಕಟ್ಟಿ) ಜುಲೈ 2–1880ರಂದು ಧಾರವಾಡದಲ್ಲಿ ಜನಿಸಿದರು.ತಂದೆ, ಗುರುಬಸಪ್ಪ.ತಾಯಿ,ದಾನಮ್ಮ ದೇವಿ.ಹಳಕಟ್ಟಿ ಎಂಬುದು ಇವರ ಮನೆತನದ ಹೆಸರು.ತಂದೆ,ವೃತ್ತಿಯಲ್ಲಿ ಶಿಕ್ಷಕರಾಗಿ,ಪ್ರವೃತ್ತಿಯಲ್ಲಿ ಸಾಹಿತಿಗಳಾಗಿ ಅನೇಕ ಮಹತ್ವಪೂರ್ಣ ಗ್ರಂಥಗಳನ್ನು,ಲೇಖನಗಳನ್ನು ಬರೆದು ನಾಡಿನ ಜನರ ಗಮನ ಸೆಳೆದಿದ್ದರು.
ತಾಯಿ,ದಾನಮ್ಮನವರು ಫಕೀರಪ್ಪ ಹುಟ್ಟಿದ ಮೂರು ವರ್ಷದಲ್ಲಿಯೇ ನಿಧನರಾದರು.ಮಾತೃ ವಾತ್ಸಲ್ಯ ರಿಂದ ವಂಚಿತರಾದ ಫಕೀರಪ್ಪ ತಂದೆಯವರು ಪ್ರೀತಿಯ ಆರೈಕೆಯಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಂಡರು.
ಶಿಕ್ಷಣ:
…………………………………..
ಫಕೀರಪ್ಪ ನವರು ತಮ್ಮ ಜನ್ಮಸ್ಥಳವಾದ ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಿ,1896 ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣ ರಾದರು. ಉನ್ನತ ಶಿಕ್ಷಣ ಕ್ಕಾಗಿ ಮುಂಬಯಿಗೆ ತೆರಳಿ ಸೇಂಟ್ ಝೇವಿರ್ ಕಾಲೇಜು ಸೇರಿ ಕನ್ನಡವನ್ನು ಐಚ್ಚಿಕವಾಗಿ ಅಧ್ಯಯನ ಮಾಡಿದರು. ಅಲ್ಲಿ ಆಲೂರು ವೆಂಕಟರಾಯರು ಸಹಪಾಠಿಯಾದರು. ಕಾನೂನು ಶಾಸ್ತ್ರವನ್ನು ಅಧ್ಯಯನ ಮಾಡಿ 1904 ರಲ್ಲಿ ಕಾನೂನು ಪದವಿ ಪಡೆದರು.
ಮುಂಬಯಿ ಜನರಿಗಿದ್ದ ಮರಾಠಿ ಭಾಷಾಭಿಮಾನ ಇವರ ಮೇಲೆ ಪರಿಣಾಮ ಬೀರಿತು. ಕನ್ನಡಿಗರು ಎಚ್ಚರಗೊಳ್ಳದಿದ್ದರೆ ಕನ್ನಡಭಾಷೆ, ಸಾಹಿತ್ಯ ಉದ್ಧಾರವಾಗುವುದಿಲ್ಲ ವೆಂದು ತಿಳಿದು, ಆ ಕ್ಷಣವೇ ಕನ್ನಡನಾಡು, ನುಡಿ, ನೆಲ, ಜಲ, ಸಾಹಿತ್ಯ, ಸಂಸ್ತ್ರುತಿಗಾಗಿ ದುಡಿಯಬೇಕೆಂಬ ಸಂಕಲ್ಪ ವಿದ್ಯಾರ್ಥಿ ದಿಶೆಯಿಂದಲೇ ನಿರ್ಧರಿಸಿದರು.ಕರ್ನಾಟಕ ಏಕೀಕರಣದ ಹೋರಾಟದಲ್ಲಿ ನಿರತರಾಗಿದ್ದ ಆಲೂರು ವೆಂಕಟರಾಯರಿಗೆ ಬೆಂಬಲವಾದರು, ಸ್ಪೂರ್ತಿ ಯಾದರು.
ವಕೀಲ ವೃತ್ತಿ ಆರಂಭ:
………………………………………
ಬಿ.ಎ.ಪದವಿ 1901, ಕಾನೂನು ಪದವಿ1904 ರಲ್ಲಿ ಮುಂಬಯಿಯಲ್ಲಿ ಪಡೆದು ಬೆಳಗಾವಿಯಲ್ಲಿ ವಕೀಲ ವೃತ್ತಿ ಆರಂಭಿಸಿ, ಕೆಲವು ತಿಂಗಳುಗಳಲ್ಲಿಯೇ ಬೆಳಗಾವಿಯಿಂದ ವಿಜಾಪುರಕ್ಕೆ ವಾಸ್ತವ್ಯ ಬದಲಿಸಿದರು.
ಅವರ ವಕೀಲ ವೃತ್ತಿ, ಪ್ರಾವಿಣ್ಯತೆ ಸಾಧಿಸಿದ್ದನ್ನು ಗಮನಿಸಿದ ಸರ್ಕಾರ ಅವರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಎಂದು ನೇಮಿಸಿತು. ಈ ಅವಕಾಶ ದೊರೆತಾಗ ಸಮಾಜಕ್ಕೆ ತಮ್ಮಿಂದಾಗುವ ಸೇವೆಯನ್ನು ಪ್ರಾಮಾಣಿಕತೆ ಯಿಂದ ಮಾಡಿದರು. ಆ ಭಾಗದ ಪ್ರಸಿದ್ಧ ವಕೀಲರಾಗಿ ರೂಪುಗೊಂಡು ಜನಮನ್ನಣೆ ಪಡೆದರು.
ರಾಜಕೀಯ ಪ್ರವೇಶ:
………………………………………
ಜನರ ಪ್ರೀತಿಯ ಒತ್ತಾಯದ ಮೇರೆಗೆ ವಿಜಾಪುರ ಜಿಲ್ಲಾ ಕಾಂಗ್ರೆಸ್ ಕಮಿಟಿಯ ಕಾರ್ಯದರ್ಶಿ ಯಾಗಿ,1920ರಲ್ಲಿ ಮುಂಬೈ ವಿಧಾನ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. ಬಿಜಾಪುರದ ಅಂದಿನ ನೀರಿನ ಸಮಸ್ಯೆಯನ್ನು ಬ್ಯಾತನಾಳ್ ಕೆರೆಯ ನೀರನ್ನು ಒದಗಿಸುವ ಮೂಲಕ ಸಮಸ್ಯೆ ಬಗೆಹರಿಸಿದರು.
ಹೀಗೆ ಹತ್ತಾರು ಮಹತ್ವದ ಕಾರ್ಯಗಳನ್ನು ಮಾಡಿ ಜನಮನ್ನಣೆ ಪಡೆದರು.1924 ರಲ್ಲಿ ಪುನಃ ವಿಧಾನ ಪರಿಷತ್ ಸದಸ್ಯತ್ವಕ್ಕೆ ಮತ್ತೇ ನಿಲ್ಲಬೇಕೆಂಬ ಅವಕಾಶ ಮತ್ತು ಒತ್ತಾಯ ಬಂದರೂ ಯಾರು ಚುನಾವಣೆ ಗೆ ಸ್ಪರ್ಧಿಸದೇ ರಾಜಕೀಯದಿಂದ ದೂರ ಉಳಿದರು.
ವಚನ ಸಾಹಿತ್ಯ ಸಂಗ್ರಹ:
………………………………………
ಫ.ಗು.ಹಳಕಟ್ಟಿಯವರು ಶರಣಸಾಹಿತ್ಯಕ್ಕೆ ಸಂಬಂಧಿಸಿದ ಅಧ್ಯಯನವನ್ನು ತಪಸ್ಸಿನಂತೆ ಕೈಗೊಂಡರು.ತಾಳೆಗರಿಗಳಲ್ಲಿ ಅಡಕವಾಗಿದ್ದ ವಚನ ಸಾಹಿತ್ಯ ಸಂಗ್ರಹಕ್ಕಾಗಿ ಅವರು ಮಾಡಿದ ಸಾಹಸಪೂರ್ಣ ಕಾರ್ಯ ಶ್ಲಾಘನೀಯ.ತಾಳೆಗರಿಗಳು ಸಿಕ್ಕಲ್ಲೆಲ್ಲ ಅವುಗಳನ್ನು ಸಂಗ್ರಹಿಸಿ ತಂದರು. ಬೆಲೆಕೊಟ್ಟು ತಂದರು. ತಮ್ಮ ಬದುಕನ್ನು ವಚನಸಾಹಿತ್ಯ ಸಂಗ್ರಹ, ಅಧ್ಯಯನ, ಪ್ರಕಟಣೆಗೆ ಮೀಸಲಾಗಿಟ್ಟರು.
ಶ್ರೀಶೈಲ,ಮುದನೂರು,ಮಂಗಳವಾಡ,ಮುದುಗಲ್ಲು, ಪೊಟ್ಟಲಕೆರೆ,ಕೊಲ್ಲಿಪಾಕಿ,ಮುರಗೋಡ ಹೀಗೆ ಅನೇಕ ಕ್ಷೇತ್ರಗಳನ್ನು ಸುತ್ತಿ ಹಸ್ತ ಪ್ರತಿಗಳನ್ನು ಸಂಗ್ರಹಿಸಿ ದರು. ಈ ಕಾರ್ಯದಲ್ಲಿ ಅವರು ಸಾಹಸ,ಅಧ್ಯಯನಶೀಲತೆ,ಶಿಸ್ತು, ಶ್ರಮ ಮತ್ತು ವ್ಯವಸ್ಥಾ ಕ್ರಮಗಳನ್ನು ಬಳಸಿ,ವಚನಗಳನ್ನೆಲ್ಲ ಒಂದು ಗೂಡಿಸಿ ಅದನ್ನು ‘ವಚನಶಾಸ್ತ್ರ’ಎಂದು ಕರೆದರು.ಈ ದಿಶೆಯಲ್ಲಿ ಅವರು ವ್ಯಕ್ತಿಯಾಗಿ ಕೆಲಸ ಮಾಡದೇ ಒಂದು ಸಂಸ್ಥೆಯಾಗಿ ಕಾರ್ಯ ನಿರ್ವಹಿಸಿದರು.
ವಚನ ಸಾಹಿತ್ಯ ಪ್ರಕಟಣೆ.
………………………………………
ವಚನ ಸಾಹಿತ್ಯ ಪ್ರಕಟಣೆಯ ಕಾಯಕ ಸ್ಮರಣೀಯವಾದುದು.1920 ರೇ ಹೊತ್ತಿಗೆ ಒಂದು ಸಾವಿರ ಕೊಟ್ಟು ತಾಳೆಗರಿ ಗಳು ಸಂಗ್ರಹವೋದವು.1923 ದಿಲ್ಲಿ ವಚನಶಾಸ್ತ್ರಸಾರ ಭಾಗ..1 ಪ್ರಕಟವಾಯಿತು.250 ವಚನಕಾರರ ಸಾಹಿತ್ಯ ನನ್ನು ಬೆಳಕಿಗೆ ತಂದರು.ಜೊತೆಗೆ ಹರಿಹರನ 42 ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದರು.1925 ದಿಲ್ಲಿ ತಮ್ಮ ಸ್ಪಂತ ಮನೆಯನ್ನು ಮಾರಾಟ ಮಾಡಿ ‘ಹಿತಚಿಂತಕ’ ಎಂಬ ಮುದ್ರಣಾಲಯವನ್ನು ಸ್ಥಾಪಿಸಿದರು.
ಹಸ್ತಪ್ರತಿಗಳು ಪ್ರಕಟಣೆಗೆಂದೇ ‘ಶಿವಾನುಭವ’ ಪತ್ರಿಕೆಯನ್ನು1926 ರಲ್ಲಿ ಪ್ರಾರಂಭಿಸಿದರು. ಈ ಮಾಸ ಪತ್ರಿಕೆ 35 ವರ್ಷಗಳ ಕಾಲ ನಿರಂತರ ನಡೆಸಿದ ಕನ್ನಡ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 1927 ರಲ್ಲಿ ‘ನವಕರ್ನಾಟಕ’ ವಾರ ಪತ್ರಿಕೆ ಆರಂಭಿಸಿದರು. ಈ ಎರಡು ಪತ್ರಿಕೆ ಸಂಪಾದಕ,ಮುದ್ರಿಕೆ ಫ.ಗು.ಹಳಕಟ್ಟಿಯವರೇ ಆಗಿದ್ದರು.
ಅವರು ಸಂಶೋಧಿಸಿ, ಸಂಪಾದಿಸಿ ಪ್ರಕಟಿಸಿದ ಗ್ರಂಥಗಳೆಂದರೆ ವಚನಶಾಸ್ತ್ರ ಸಾರ, ಶೂನ್ಯ ಸಂಪಾದನೆ, ಶಿವಾನುಭವ, ಕೃಷಿ ವಿಜ್ಞಾನ, ಪ್ರಭುದೇವರ ವಚನಗಳು, ಹರಿಹರನ ರಗಳೆ, ಆದಿಶೆಟ್ಟಿ ಪುರಾಣ, ಪ್ರದೀಪಿಕೆ,ಶಬ್ದಕೋಶ.ಹೀಗೆ ಹಲವಾರು ಗ್ರಂಥಗಳನ್ನು ಪ್ರಕಟಿಸುವ ಮೂಲಕ ಹನ್ನೇರಡನೆಯ ಶತಮಾನದ ಶರಣ ಸಾಹಿತ್ಯವನ್ನು ಪುನಃ ಸೃಷ್ಟಿ ಸುವ ಸಾಹಸ ಮಾಡಿದರು.
ಅವರು ವೈಯಕ್ತಿಕ ಬದುಕಿನ ಕಡೆ ಗಮನ ಕೊಡದೆ ವಚನಸಾಹಿತ್ಯ ಗ್ರಂಥಗಳ ಪ್ರಕಟಣೆಗೆ ಹೆಚ್ಚು ಆಸಕ್ತಿ ತೋರಿದರು.ಬಸವಣ್ಣನವರ ವಚನಗಳು ಸೊಗಸನ್ನು ಅನ್ಯಭಾಷಿಕರಿಗೆ ಪರಿಚಯ ಮಾಡಿಕೊಡುವ ದೃಷ್ಟಿಯಿಂದ’Indian Antiquity’ಯಲ್ಲಿ ಇಂಗ್ಲೀಷ್ ಅನುವಾದದ ವಚನಗಳನ್ನು 1922 ರಲ್ಲಿ ಪ್ರಕಟಿಸಿದರು.
ಸಂಘ-ಸಂಸ್ಥೆಗಳು ಸ್ಥಾಪನೆ.
………………………………………
ವಚನ ಸಾಹಿತ್ಯ ಮತ್ತು ಪತ್ರಿಕೋದ್ಯಮ ದ ಜೊತೆಗೆ ಸಂಘಟನೆ, ಬ್ಯಾಂಕಿಂಗ್, ಕೃಷಿ,ನೇಕಾರಿಕೆ,ಸಹಕಾರಿ ಹೀಗೆ ಎಲ್ಲದರಲ್ಲಿಯೂ ತಮ್ಮ ನ್ನು ತೊಡಗಿಸಿಕೊಂಡರು. 1910 ದಿಲ್ಲಿ ಬಿಜಾಪುರ ಜಿಲ್ಲಾ ಲಿಂಗಾಯತ ವಿದ್ಯಾವರ್ಧಕ ಸಂಘ (ಬಿ.ಎಲ್.ಡಿ.ಇ.).1912 ರಲ್ಲಿ ಶ್ರೀ ಸಿದ್ದೇಶ್ವರ ಅರ್ಬನ್ ಕೋ..ಆಪರೇಟಿವ್ ಬ್ಯಾಂಕು,ಗ್ರಾಮೀಣ ಅಭಿವೃದ್ಧಿ ಸಂಘ, ಒಕ್ಕಲುತನ ಸಹಕಾರಿ ಸಂಘ, ನೇಕಾರರ ಸಂಘ,ಹತ್ತಿ ಮಾರಾಟಗಾರರು ಸಂಘ, ಸಹಕಾರ ಸಂಘಗಳನ್ನು ಸ್ಥಾಪಿಸಿ ಇವುಗಳ ಬೆಳವಣಿಗೆಗೆ ದುಡಿದರು.ಅಲ್ಲದೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿಯೂ ಇವರು ವಹಿಸಿದ ಪಾತ್ರ ಮಹತ್ವದ್ದಾಗಿದೆ.
ಗೌರವ–ಪುರಸ್ಕಾರಗಳು:
………………………………………
* 1920ರಲ್ಲಿ ಮುಂಬಯಿಯ ವಿಧಾನ ಪರಿಷತ್ ಸದಸ್ಯತ್ವ.
* 1928.ರಲ್ಲಿ ಜರುಗಿದ 3ನೇ ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷತೆ.
* 1931.ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಸಿನೆಟ್ ಸದಸ್ಯತ್ವ.
* 1933.ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷತೆ.
*1926 ರಲ್ಲಿ ಬಳ್ಳಾರಿಯಲ್ಲಿ ನಡೆದ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷತೆ.
* 1956ರಲ್ಲಿ ಕರ್ನಾಟಕ ವಿ.ವಿ ಯಿಂದ ಗೌರವ ಡಾಕ್ಟರೇಟ್ ಪುರಸ್ಕಾರ.
* ಭಾರತ ಸರ್ಕಾರ ರಾವ್ ಬಹದ್ದೂರ್ ಪದವಿ ನೀಡಿ ಗೌರವಿಸಿದೆ.
* ಬಿ.ಎಂ.ಶ್ರೀ ಯವರು ಇವರ ಸಾಧನೆ ಗಮನಿಸಿ ವಚನ ಪಿತಾಮಹ ಎಂದು ಪುರಸ್ಕರಿಸಿದರು.
ಫ.ಗು.ಹಳಕಟ್ಟಿ ಸ್ಮರಣೆ:
…………………………………….
ವಿಜಯಪುರ ಬಿ.ಎಲ್.ಡಿ.ಇ ಸಂಸ್ಥೆಯು ಡಾ.ಎಂ.ಬಿ.ಪಾಟೀಲರ ಆಸಕ್ತಿಯಿಂದ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಸಂಸ್ಥೆ,ಸ್ಮಾರಕಭವನ, ನಿರ್ಮಿಸಿದೆ.ಅಲ್ಲದೆ 30ಲಕ್ಷ ರೂಪಾಯಿ ವೆಚ್ಚದಲ್ಲಿ 12 ಸಾವಿರ ಪುಟಗಳಷ್ಟು ಫ.ಗು.ಹಳಕಟ್ಟಿ ಸಮಗ್ರ ಸಾಹಿತ್ಯ ಪ್ರಕಟಣೆಯ ಯೋಜನೆಯಡಿಯಲ್ಲಿ 15 ಸಂಪುಟಗಳನ್ನು ಪ್ರಕಟಿಸಿದ್ದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ.
ದಿನಾಂಕ 29-6-1964ರಂದು ಶಿವಾಧೀನರಾದರು.ಇವರು ಮಾಡಿದೆ ಸೇವೆ,ಸಾಧನೆ,ತ್ಯಾಗ,ಕಟ್ಟಿಬೆಳೆಸಿದ ಸಂಘ.ಸಂಸ್ಥೆಗಳು ಎಲ್ಲದಕ್ಕಿಂತಲೂ ಮಿಗಿಲಾಗಿ ವಚನಸಾಹಿತ್ಯವು ಇವರ ಹೆಸರನ್ನು ಅಜರಾಮರಗೊಳಿಸಿದೆ…
–ಡಾ.ಗಂಗಾಧರಯ್ಯ ಹಿರೇಮಠ
ಪ್ರಾಧ್ಯಾಪಕರು.ಸ.ಪ್ರ.ದ.ಮಹಿಳಾ ಕಾಲೇಜು, ದಾವಣಗೆರೆ.