ಕೈ ಚಾಚಿ ನಿಂತಿದೆ ಸುಂದರ ಬದುಕು.!
ಕೈ ಚಾಚಿ ನಿಂತಿದೆ ಸುಂದರ ಬದುಕು.!
ನಾವಂದುಕೊಂಡಂತೆ ಬದುಕಿನಲ್ಲಿ ಏನೂ ನಡೆಯುವುದಿಲ್ಲ. ಬದುಕು ತುಂಬಾ ಕ್ರೂರಿ. ತನಗೆ ಹೇಗೆ ಬೇಕೋ ಹಾಗೇ ನಡೆದುಕೊಳ್ಳುತ್ತದೆ. ವಿವಿಧ ರೀತಿಯ ಕಷ್ಟ ಸವಾಲು ತಾಪತ್ರಯಗಳು ತುಂಬಿದ ಪಾತ್ರೆಯನ್ನು ನಮ್ಮ ಮುಂದಿಟ್ಟು ಗಹ ಗಹಿಸಿ ನಗುತ್ತದೆ. ಎಷ್ಟು ದಯನೀಯವಾಗಿ ಬೇಡಿಕೊಂಡರೂ ಅದು ನಮ್ಮ ಮಾತು ಕೇಳುವುದಿಲ್ಲ. ಪರ್ವತದಷ್ಟು ಎತ್ತರದಲ್ಲಿ ನಿಂತು ನಮ್ಮನ್ನು ಗೌಣವಾಗಿಸಿ ಅಹಂಕಾರ ಮೆರೆಯುತ್ತದೆ. ಇದಕ್ಕೆ ಮೂಗುದಾರ ಹಾಕುವುದು ಹೇಗೆ ಎಂದು ಎಷ್ಟೋ ಸಲ ಅಂದುಕೊಳ್ಳುತ್ತೇವೆ. ಕೆಲವು ಬಾಹ್ಯ ಚಟುವಟಿಕೆಗಳಿಂದ, ಹೊರಗಿನ ಬದಲಾವಣೆಯಿಂದ ಅದರ ಕೈ ಕಾಲು ಕಟ್ಟಿ ಹಾಕಲು ನೋಡುತ್ತೇವೆ. ಆ ತಂತ್ರ ಹಲವು ಸಲ ಫಲ ನೀಡುತ್ತದೆ.
ಆದರೆ ಬಹಳ ಕಾಲ ನಡೆಯುವುದಿಲ್ಲ. ನಾಯಿ ಬಾಲದಂತೆ ಮತ್ತೆ ಯಥಾಸ್ಥಿತಿಗೆ ಬಂದು ನಿಲ್ಲುತ್ತದೆ. ನಮ್ಮ ಪ್ರಯತ್ನವೆಲ್ಲವೂ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆ. ಮತ್ತೆ ಅದೇ ಗೊಳಾಟ ಮುಂದುವರೆಯುತ್ತದೆ. ಬದುಕಿನ ಮುಗಿಯದ ಜಂಜಡಗಳಿಗೆ ಬೇಸತ್ತು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುತ್ತೇವೆ. ನಮ್ಮ ಅಂತ್ಯವೇ ಸಮೀಪಿಸಿದೆ ಎಂದು ಹೆದರಿ ಗೊಳೋ ಎಂದು ಕಣ್ಣೀರಿಡುತ್ತವೆ. ಇದಕ್ಕೆಲ್ಲ ಬದುಕು ಕ್ಯಾರೆ ಎನ್ನುವುದಿಲ್ಲ. ‘ಬದುಕು ಸುಂದರ ಎನ್ನುವುದು ಕಾಲ್ಪನಿಕ. ಅದನ್ನು ಸುಂದರಗೊಳಿಸುವುದು ನಮ್ಮ ಕಾಯಕ.’ ಇದು ಅನುಭಾವಿಗಳ ಮಾತು.
ಸುಂದರ ಬದುಕು ಕೈ ಚಾಚಿ ನಿಂತಿದೆ ಪ್ರಯತ್ನಿಸಬೇಕಷ್ಟೆ ಸುಖಾನುಭವ ದುಃಖಾನುಭಾವ ನಮ್ಮ ಆಯ್ಕೆ. ಬದುಕಿನ ಸುಂದರ ಗಾಳಿಪಟವನ್ನು ಮೇಲಕ್ಕೆ ಹಾರಿಸಿ ಖುಷಿ ಪಡುವುದು ಹೇಗೆ ಎಂಬ ಸವಾಲಿಗೆ ಉತ್ತರ ಬೇಕಲ್ಲವೇ? ಹಾಗಾದರೆ ಮುಂದಕ್ಕೆ ಓದಿ.
ಸಮ್ಮಿಶ್ರ ಪಾಕ
ಜೀವನವೆನ್ನುವುದು ಬರೀ ಸುಖ ತುಂಬಿದ ಕ್ಷಣಗಳಿಂದ ತುಂಬಿಲ್ಲ. ಅದು ಸುಖ ದುಃಖಗಳ ಸಮ್ಮಿಶ್ರ ಪಾಕ. ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಳ್ಳಬೇಕು. ಜಗದಲ್ಲಿ ಸುಖವಷ್ಟೇ ಯಾರಿಗೂ ದೊರೆತಿಲ್ಲ. ಜೀವನವೆಂಬ ಕಡಲನ್ನು ಕೆನ್ನೆ ತೋಯಿಸಿಕೊಳ್ಳದೇ ಈಸಿದವರು ಯಾರೂ ಇಲ್ಲ. ಅಡೆತೆಡೆಗಳು ಅತಿಯೆನಿಸಿದಾಗ ದಾರಿ ಬದಲಿಸಬೇಕೇ ವಿನಃ ಗುರಿಯನ್ನಲ್ಲ.
ಕಠಿಣ ಸವಾಲುಗಳನ್ನು ಎದೆಗಾರಿಕೆಯಿಂದ ಎದುರಿಸಿದವರೇ ಮಹಾನ ಪುರುಷರೆನಿಸಿಕೊಂಡರು. ನಿಜಾರ್ಥದಲ್ಲಿ ಸವಾಲುಗಳು ನಮ್ಮ ಸಾಮಥ್ರ್ಯವನ್ನು ಒರೆಗೆ ಹಚ್ಚಿ ಉಜ್ಜುತ್ತವೆ. ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ.ಆದರೆ ನಮಗೆ ಅವುಗಳ ಸಹವಾಸವೇ ಬೇಡವಾಗಿದೆ. ಮನಸ್ಸು ಸ್ಥಿರವಾಗಿದ್ದರೆ ಜಟಿಲವೆನಿಸುವ ಸವಾಲುಗಳಿಗೂ ಪರಿಹಾರ ಸಾಧ್ಯ. ಅಪಾರ ಶ್ರಮವಿಲ್ಲದೇ, ಜ್ಞಾನ ಗಳಿಸದೇ, ಬುದ್ಧಿವಂತಿಕೆ ಬಳಸದೇ ಸುಂದರ ವಿಲಾಸಿ ಜೀವನ ಕಾಲಡಿ ಬಂದು ಬೀಳಬೇಕೆಂಬ ನಮ್ಮ ಹುಚ್ಚುತನಕ್ಕೆ ಬ್ರೇಕ್ ಹಾಕಬೇಕಿದೆ.
ಸಣ್ಣ ಪುಟ್ಟ ತೊಂದರೆಗಳನ್ನು ನಿಭಯಿಸಲಾಗದೇ ಬಲಹೀನರಾದರೆ ಗತಿಯೇನು? ‘ಬೃಹದಾಕಾರವಾಗಿ ಬೆಳೆದು ನಿಂತ ಹೆಮ್ಮರಗಳನ್ನು ಸಹ ಅನೇಕ ಹೊಡೆತಗಳಿಂದ ಹೊಡೆದು ಉರಳಿಸಬಹುದು.’ ಅಂಥದ್ದರಲ್ಲಿ ಇನ್ನೂ ಬೇರಿಳಿಯದ ಸವಾಲುಗಳನ್ನು ಕಿತ್ತೊಗೆಯುವುದು ಯಾವ ಲೆಕ್ಕ ಅಲ್ಲವೇ? ಯಾವ ಮುನ್ಸೂಚನೆ ಕೊಡದೇ ಹಟಾತ್ತನೆ ಮುಖ ತೋರಿಸುವ ಸಂಕಷ್ಟಗಳಿಗೆ ಬೆನ್ನು ತೋರಿಸದೆ, ಮುಖ ಕೊಡಬೇಕು. ಅನುಭವಗಳ ಗುರುವಾಗಬೇಕು. ಬದುಕಿನ ಪ್ರತಿ ಕ್ಷಣವನ್ನು ವಿವೇಕಯುತವಾಗಿ ವ್ಯಯಿಸಿದರೆ ಮುಂಬರುವ ಸಂಕಷ್ಟಗಳನ್ನು ತಡೆದು ನಿಲ್ಲಿಸಬಹುದು.
ಇರಲಿ ಉತ್ತಮ ಉದ್ದೇಶ
ಕೇವಲ ಬದುಕಿದರೆ ಸಾಲದು. ಉತ್ತಮ ಉದ್ದೇಶಗಳ ಸಾಫಲ್ಯಕ್ಕಾಗಿ ಬದುಕಬೇಕು. ಕೆಟ್ಟದ್ದಕ್ಕೆ ಅಂಟಿಕೊಳ್ಳುವುದು ಸುಲಭ. ಕೆಟ್ಟ ಚಟಗಳು ಬಹಳಷ್ಟು ಆಕರ್ಷಿಸುತ್ತವೆ. ಮೊದಮೊದಲು ಮೋಜೆನಿಸುವ ಅವು ನಂತರ ಜೀವನವನ್ನೇ ನುಂಗಿ ಹಾಕಿ ಬಿಡುವ ದುಸ್ಥಿತಿಗೆ ತಳ್ಳುತ್ತವೆ ಎಂಬುದನ್ನು ಮರೆಯಬಾರದು. ಒಳ್ಳೆಯದರತ್ತ ಚಿತ್ತಗೊಡಬೇಕು.ಒಳ್ಳೆಯದನ್ನು ಮಾಡಬೇಕು. ಉತ್ತಮವಾದುದು ಎಲ್ಲಿಂದಲೇ ಬರಲಿ ಅದನ್ನು ಸ್ವಾಗತಿಸಬೇಕು.
ಶ್ರೇಷ್ಠ ಅನುಭವದ ನುಡಿಗಳನ್ನು ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು. ಮೌಲ್ಯಗಳಿಗೆ ನೆಲೆ ನೀಡಿದಷ್ಟು ಜೀವನದ ಬೆಲೆ ಹೆಚ್ಚುವುದು. ವ್ಯಕ್ತಿಗಿಂತ ದೊಡ್ಡವು ಆದರ್ಶಗಳು. ಹೀಗಾಗಿ ಅತ್ಯುನ್ನತ ಆದರ್ಶಗಳನ್ನು ಕಣ್ಮುಂದೆ ಇಟ್ಟುಕೊಂಡು ದಿನ ನಿತ್ಯ ಅವುಗಳಿಗೆ ಎಣ್ಣೆ ಸುರಿಯಬೇಕು. ಜೀವನ ಸೌಂದರ್ಯದ ರಹಸ್ಯವು ಉತ್ತಮ ಉದ್ದೇಶಗಳಿಗೆ ಅಂಟಿಕೊಳ್ಳುವುದರಲ್ಲಿದೆ. ಉತ್ತಮ ಉದ್ದೇಶಗಳು ಅವಕಾಶಗಳಲ್ಲ. ಅವು ಆಯ್ಕೆಯ ವಿಷಯಗಳು. ಹೀಗಾಗಿ ಆಯ್ಕೆಗಳು ಜಾಣ್ಮೆಯಿಂದ ಕೂಡಿರಲಿ.ಬರೀ ಆಯ್ಕೆ ಮಾಡಿದರೂ ಸಾಲದು ಹೋದಲೆಲ್ಲ ಅವುಗಳನ್ನು ಹೊತ್ತೊಯ್ಯುವ ಕೆಲಸವಾಗಬೇಕು. ಆಗ ಸುಖದ ತೊರೆ ಹರಿಯುವುದು.
ಬೆವರಿನ ಘಮ
ರಾತ್ರೋ ರಾತ್ರಿ ಶ್ರೀಮಂತರಾಗಬೇಕು. ಪ್ರಪಂಚದ ಶ್ರೀಮಂತಿಕೆ ಎಲ್ಲ ನಮ್ಮದಾಗಬೇಕೆಂದು ಹಂಬಲಿಸುತ್ತೇವೆ. ಆ ಮೂಲಕ ಜೀವನದ ಸುಂದರತೆಯನ್ನು ಆದ್ಯಂತವಾಗಿ ಆಸ್ವಾದಿಸಬೇಕೆಂದು ಹಗಲುಗನಸು ಕಾಣುತ್ತೇವೆ. ಆದರೆ ಅದಕ್ಕೆ ನಾವು ಸುರಿಸುವ ಬೆವರು ಹನಿಗಳ ಸಂಖ್ಯೆ ಅತೀ ಕಮ್ಮಿ. ಬೆವರಿನ ಸಾಲುಗಳು ಬ¯ಶಾಲಿಯಾದವುಗಳು.ಬೆವರಿನ ಘಮಕ್ಕೆ ಜಗತ್ತಿನ ಎಲ್ಲ ಅಂದರೆ ಎಲ್ಲವನ್ನೂ ತಂದು ಕೊಡುವ ತಾಕತ್ತಿದೆ.
ಬಾಡಿದ ಗಿಡಗಳಿಗೆ ನೀರುಣಿಸಿದರೆ ಕೆಲವೊಮ್ಮೆ ಚಿಗುರೊಡೆದು ಫಲ ಪುಷ್ಪ ನೀಡುವಂತೆ, ಅಸಾಧ್ಯವೆನಿಸುವ ಕೆಲಸ ಕಾರ್ಯಗಳು ಅವಿರತ ಪ್ರಯತ್ನದಿಂದ ಸಾಧ್ಯವಾಗುವವು. ಶ್ರಮದಲ್ಲಿ ಆಸ್ಥೆ ಹೊಂದಿದವನನ್ನು ಯಾರೂ ಕೆಳಕ್ಕೆ ತಳ್ಳಲಾಗುವುದಿಲ್ಲ. ಶ್ರಮಿಕ ಪ್ರಜ್ಞೆಗೆ ಒತ್ತು ಕೊಟ್ಟರೆ ಬಾಳು ಸುಂದರ ಮಂದಿರವಾಗಿ ಗೋಚರಿಸುವುದು.
ಸಿಹಿಯಾಗಿ ನಗುವ ಸಮಯ
ಶ್ವಾನ ತಿಪ್ಪೆಯ ಮೇಲೆ ಮಲಗಿರಲು ಪೂರ್ವಿಕ
ಜ್ಞಾನ ಪಶ್ಚಾತ್ತಾಪ ಶುಭ ಚಿಂತೆಯಂತೆ
ಏನೋ ವಾಸನೆ ಬೀಸಲದು ಹಾರಿ ಧುಮುಕುವುದು
ಮಾನವನ ಮನಸ್ಸಂತು-ಮಂಕುತಿಮ್ಮ
ಎನ್ನುವ ಡಿವಿಜಿ ಕಗ್ಗದಂತೆ ಸಂತಸದ ಹೊನಲಿನಲ್ಲಿರುವಾಗಲೂ ಅದು ಇದು ಅಂತ ಹಿಂದೆ ನಡೆದ ದುಃಖದ ಸನ್ನಿವೇಶಗಳನ್ನು ತೆಗೆದು ಕಣ್ಣೀರು ಕೊಡುವುದು ತರವಲ್ಲ. ಬದುಕಿನ ಸಾರ್ಥಕತೆಗೆ ನಗು ತೀರ ಅವಶ್ಯ. ಬಂದ ಭಾಗ್ಯವನು ಚೆಂದದಿ ನಗುತ ಅನುಭವಿಸುವುದು ಒಂದು ಕಲೆ. ಸಿಹಿಯಾಗಿ ನಗುವ ಸಮಯದಲ್ಲಿ ಇಲ್ಲ ಸಲ್ಲದ ಅತಿಯಾದ ಆಲೋಚನೆಯಲ್ಲಿ ಮುಳುಗಿ ಬಿಡಬಾರದು.
ಅದು ಮತ್ತಷ್ಟು ಸಂಕಷ್ಟಗಳನ್ನು ಕೈ ಬೀಸಿ ಕರೆದು ತಂದು ನಮ್ಮ ಜೀವನದಲ್ಲಿ ಸುರುವಿ ಹೋಗುತ್ತದೆ. ಅವು ಎಲ್ಲಿಗೆಲ್ಲಿಗೋ ಎಳೆದಾಡಿ ನಮ್ಮನ್ನು ಅಪಾಯದಂಚಿಗೆ ತಂದು ನಿಲ್ಲಿಸುತ್ತವೆ. ಸಂಪತ್ತಿಲ್ಲ. ಸಮಯವಿಲ್ಲ ಬೇಕಾದ ಸಂಪನ್ಮೂಲಗಳಿಲ್ಲ. ಹೆತ್ತವರ ಬೆಂಬಲವಿಲ್ಲ. ಸಾಧನೆಗೆ ಸೂಕ್ತ ಪರಿಸರವಿಲ್ಲ‘ಅಂದುಕೊಳ್ಳುವುದು ಜೀವನವಲ್ಲ. ಹೊಂದಿಕೊಳ್ಳುವುದು ಜೀವನ.ಸಮಾಧಾನಕ್ಕೆ ನಮಗಿಂತ ಕೆಳಗಿನವರನ್ನು ನೋಡಬೇಕು. ಸಾಧನೆಗೆ ನಮಗಿಂತ ದೊಡ್ಡವರನ್ನು ನೋಡಬೇಕು. ಆಗ ಬದುಕು ಸುಂದರ.
ಇತರರತ್ತ ಚಿತ್ತ
‘ದೊಡ್ಡವರು ಇತರರ ತಪ್ಪುಗಳನ್ನು ಮರೆಯುತ್ತಾರೆ. ಆದರೆ ಸಣ್ಣವರು ಇತರರ ತಪ್ಪುಗಳನ್ನು ಜಾಗಟೆ ಹೊಡೆದು ಹೇಳುತ್ತಾರೆ.’ ಎಂದೊಮ್ಮೆ ತಿರುವಳ್ಳವರ್ ನುಡಿದ ನುಡಿ ನಿಜಕ್ಕೂ ಅರ್ಥಗರ್ಭಿತವೆನಿಸುತ್ತದೆ.ಇತರರ ತಪ್ಪು ಹುಡುಕುವುದಕ್ಕಿಂತ ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದು ಲೇಸು. ತಪ್ಪು ಮಾಡುವುದಕ್ಕಿಂತ ನಿಧಾನಿಸುವುದು ಒಳ್ಳೆಯದು.
ನಾನೇ ಜಾಣ ಎಂಬುದನ್ನು ತಲೆಯಲ್ಲಿ ತುಂಬಿಕೊಂಡು ಇತರರತ್ತ ಚಿತ್ತ ಹರಿಸದೇ ಉಳಿದುಬಿಡುತ್ತೇವೆ. ಸ್ವಯಂ ಕೇಂದ್ರೀಕೃತವಾಗಿ ಸಾಗಿಸುವ ಬದುಕು ಚಪಲತೆಯಿಂದ ಕೂಡಿರುತ್ತದೆ. ಸ್ವಾರ್ಥ ಸಂಕುಚಿತ ಭಾವನೆಗಳು ಅಳಿಯಬೇಕು. ಲೋಕದ ಹಿತ ವೈಯಕ್ತಿಕ ಹಿತ ಎರಡೂ ಪರಸ್ಪರ ಹೆಣೆದುಕೊಳ್ಳಬೇಕು.
’ಇತರರಲ್ಲಿ ನೀವು ಹೆಚ್ಚು ಮೆಚ್ಚುವ ಗುಣಗಳನ್ನು ಬೆಳಸಿಕೊಳ್ಳಿ.’ ಅಭಿನಂದನೆಗೆ ಆಳಾಗು ಎನ್ನುತ್ತಾರೆ ಹಿರಿಯರು. ಇತರರೊಂದಿಗೆ ಹೊಂದಿಕೊಂಡು ಬದುಕುವುದರಲ್ಲಿ ಇರುವ ಖುಷಿ ಇನ್ನಾವುದರಲ್ಲೂ ಸಿಗುವುದಿಲ್ಲ.ಪ್ರೀತಿ ವಾತ್ಸಲ್ಯ ಹಂಚಿಕೊಳ್ಳುವುದೇ ಜೀವನದ ಪರಮೋಚ್ಛ ಗುರಿ. ಮಾನವೀಯತೆಗಿಂತ ದೊಡ್ಡ ಧರ್ಮ ಯಾವುದೂ ಇಲ್ಲ.ಹೊಗಳಿಕೆಗೆ ಹಿರಿಹಿರಿ ಹಿಗ್ಗಿ ಹಿರೇಕಾಯಿ ಆಗುವುದು. ತೆಗಳಿಕೆಗೆ ಬತ್ತಿದ ತರಕಾರಿಯಂತಾಗುವುದು ತರವಲ್ಲ. ಹೊಗಳಿಕೆ ಮತ್ತು ತೆಗಳಿಕೆ ಎರಡನ್ನೂ ಸಮಾನವಾಗಿ ಸ್ವೀಕರಿಸಿ. ಹೂವು ಅರಳಲು ಮಳೆ ಹನಿಗಳೂ ಬೇಕು. ಪ್ರಖರವಾದ ರವಿ ಕಿರಣಗಳೂ ಬೇಕು.
ಕೊನೆ ತುತ್ತು
ವೈಯಕ್ತಿಕ ಹಿತಾಸಕ್ತಿಗಾಗಿ ಸಮಷ್ಠಿ ಪ್ರಜೆಯನ್ನು ನಿರ್ಲಕ್ಷಿಸುವುದು. ಜ್ಞಾನದ ಸಿರಿ ಹೊಂದಿದ್ದರೂ ಅಜ್ಞಾನದ ಕೊಳದಲ್ಲಿ ಬಿದ್ದು ಒದ್ದಾಡುವುದು ಎಷ್ಟು ಸರಿ? ತನ್ನ ತಾನರಿವ ನಿಲುವು ಎಲ್ಲಕ್ಕಿಂತ ಮುಖ್ಯ. ಸಿಕ್ಕ ಸ್ಥಾನಮಾನ, ಸಂಪತ್ತು, ಸಮಯಗಳನ್ನು ಜೀವನ ಧ್ಯೇಯಗಳನ್ನು ತಲುಪಲು ಸರಳ ವಿಧಾನಗಳಾಗಿ ಬಳಸಿಕೊಳ್ಳಬೇಕು. ಬದುಕು ಕಲಿಸುವ ಪಾಠಗಳನ್ನು ಯಾವ ವಿಶ್ವವಿದ್ಯಾಲಯವೂ ಕಲಿಸಲಾರದು.
ಪ್ರತಿ ದಿನ ಪ್ರತಿ ಕ್ಷಣ ಜೀವನ ಚೈತನ್ಯ ಪುಟಿದೇಳುತ್ತಿದ್ದರೆ ಮನಸ್ಸು ಸಂಭ್ರಮಿಸುತ್ತದೆ.. ಅನಾಮಿಕ ಹೇಳಿದಂತೆ ‘ಯಾರು ಸ್ಮರಿಸುವಂಥ ಕಾರ್ಯ ಮಾಡಿರುತ್ತಾರೋ ಅಂಥವರಿಗೆ ಸ್ಮಾರಕಗಳನ್ನು ನಿರ್ಮಿಸವ ಅಗತ್ಯವಿಲ್ಲ.’ ಮಹಾತ್ಕಾರ್ಯದಲ್ಲಿ ತೊಡಗಿದವರ ಕಡೆ ಸಂಯಮದ ನಡೆ ಇದ್ದ ಕಡೆ ಕೈ ಚಾಚಿ ನಿಂತಿದೆ ಸುಂದರ ಬದುಕು. ನಾವು ತುಟಿಯರಳಿಸಿ ಅಪ್ಪಿಕೊಳ್ಳಬೇಕಷ್ಟೆ!!