ಬಿಗಿಪಟ್ಟು ಸಡಿಲಿಸಿದರೆ ಎಷ್ಟೇ ಜಾಣ್ಮೆಯಿದ್ದರೂ ವ್ಯರ್ಥ
ಜಯಶ್ರೀ.ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142
ಮಾಡುವ ಕೆಲಸಗಳೆಲ್ಲವೂ ಅರ್ಧಂಬರ್ಧ ಯಾವುದನ್ನೂ ಪೂರ್ಣಗೊಳಿಸಲಾಗುತ್ತಿಲ್ಲ ಎನ್ನುವ ನೋವು ನಮ್ಮನ್ನು ಹಲವು ಬಾರಿ ಹಿಂಡಿ ಹಿಪ್ಪಿ ಮಾಡುತ್ತದೆ. ಸಾಗುವ ದಾರಿಯಲ್ಲಿ ಒಂದು ಶಿಸ್ತನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎಂಬ ಗೋಳು ದಿನವೂ ಕಾಡುತ್ತದೆ. ಎಲ್ಲಿಯವರೆಗೆ ನಾವು ಹಿಡಿದ ಕೆಲಸಗಳನ್ನು ಚೆನ್ನಾಗಿ ಮಾಡಿ ಮುಗಿಸಲು ಸಮರ್ಥರಾಗುವುದಿಲ್ಲವೋ ಅಲ್ಲಿಯವರೆಗೆ ನಮಗೆ ನಮ್ಮ ಸಾಮಥ್ರ್ಯಗಳ ಬಗೆಗೆ ಹೊಸ ವಿಷಯವನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ.
ಹಿಡಿದ ಕೆಲಸವನ್ನು ಬಿಡಬಾರದು ನಿಜ, ಆದರೆ ಅದು ನಮ್ಮ ವ್ಯಕ್ತಿತ್ವಕ್ಕೆ ಚ್ಯುತಿ ತರುವ ಕೆಲಸವಾಗಿದ್ದರೆ ಅದನ್ನು ಮುಂದುವರೆಸಿಕೊಂಡು ಹೋಗುವುದು ಸಮಂಜಸವಲ್ಲ. ಅನಿವಾರ್ಯುವಾಗಿ ಯಾವುದೇ ಕೆಲಸವನ್ನು ಮಾಡಲೇಬೇಕಾದಾಗ ಮನಸ್ಸು ವಿಲವಿಲ ಒದ್ದಾಡುತ್ತದೆ. ಯಾರದೋ ಒತ್ತಾಯಕ್ಕೆ ಮಾಡುವ ಕೆಲಸಗಳು ಸರಿಯಾಗಿ ಆಗುವುದಿಲ್ಲ. ಏಕೆಂದರೆ ನಮ್ಮ ಮನಸ್ಸು ನೆಲೆ ನಿಂತಿಲ್ಲ. ಯಾವುದರಲ್ಲಿ ಮನಸ್ಸು ನೆಲೆ ನಿಲ್ಲುತ್ತದೆಯೋ ಆ ಕೆಲಸ ಅಂದುಕೊಂಡಂತೆ ಫಲದ ಘಮ ಬೀರಬಲ್ಲದು.
ವ್ಯಕ್ತಿತ್ವವನ್ನು ಉನ್ನತಿಗೇರಿಸುವ ಕೆಲಸಗಳ ಮೇಲಿನ ಬಿಗಿ ಹಿಡಿತವನ್ನು ಎಂದೂ ಸಡಿಲಿಸಬಾರದು. ಇದು ನಾನು ಮಾಡಲೇಬೇಕಾದ ಕೆಲಸ ಎಂದು ಒಮ್ಮೆ ದೃಢ ನಿರ್ಧಾರವಾದ ಮೇಲೆ ಬಲವಾಗಿರಲಿ ಬಿಗಿ ಹಿಡಿತ. ಬಿಗಿಪಟ್ಟು ಹಿಡಿಯುವ ಮುನ್ನ ಸಾವಿರ ಬಾರಿ ಯೋಚಿಸಿ ಅದರೆ ಬಿಗಿ ಪಟ್ಟು ಹಿಡಿದ ಮೇಲೆ ಎಂದೆಂದೂ ಸಡಿಲಿಸಬಾರದು. ಉಡ ಎಂಬ ಪ್ರಾಣಿಯ ವಿಶಿಷ್ಟ ಗುಣವೆಂದರೆ ಅದು ಯಾವುದನ್ನು ಹಿಡಿಯಿತೆಂದರೆ ಗಟ್ಟಿಯಾಗಿ ಹಿಡಿದುಕೊಂಡು ಬಿಡುತ್ತದೆ.
ಎಂಥ ಕಷ್ಟದ ಸ್ಥಿತಿಯಲ್ಲೂ ಬಿಡಲೊಲ್ಲದು. ಸಾಮಾನ್ಯರಿಗೆ ಮತ್ತು ಅಸಾಮಾನ್ಯರಿಗೆ ಇರುವ ವ್ಯತ್ಯಾಸವೆಂದರೆ ಹಿಡಿದ ಕೆಲಸ ಸಂಪೂರ್ಣವಾಗಿ ಸರಿಯಾಗಿ ಆಗುವವರೆಗೂ ಬಿಡದೇ ಮಾಡುವದು. ಮಾಡುವ ಕೆಲಸಗಳು ಅಡೆತಡೆಗಳು ಸಾಮಾನ್ಯ. ಅಡೆತಡೆಗಳಿಗೆ ಅಂಜಿ ಹಿಂದೆ ಸರಿದರೆ ಸಿಗುವ ಗೆಲುವಿನ ಹಣ್ಣಿನಿಂದ ದೂರ ದೂರ ಸರಿದಂತೆಯೇ ಸರಿ. ಬಂದ ಎಲ್ಲ ಅಡಚಣೆಗಳನ್ನು ಅತಿಕ್ರಮಿಸಿ ಗುರಿಯನ್ನು ಒಮ್ಮೆ ತಲುಪಿದರೆ ಸಾಕು ನಮ್ಮ ಕಣ್ಣಿಗೆ ಕವಿದಿದ್ದ ಅಸಂಭವವೆಂಬ ಮಂಜು ತಿಳಿಯಾಗಿಬಿಡುತ್ತದೆ.
ಮಾಡುವ ಕೆಲಸದ ಮೇಲೆ ಬಿಗಿ ಹಿಡಿತ ಸಾಧಿಸಬೇಕೆಂದರೆ ಶಕ್ತಿ ದೌರ್ಬಲ್ಯಗಳನ್ನು ತಿಳಿದುಕೊಳ್ಳಲೇ ಬೇಕು. ನಮಗೆ ತಿಳಿಯದೇ ಇರುವ ದೌರ್ಬಲ್ಯವನ್ನು ನಾವೆಂದೂ ತೊಡೆದು ಹಾಕಲಾರೆವು. ದೌರ್ಬಲ್ಯವನ್ನು ತೊಡೆದು ಹಾಕುವ ಮೊದಲ ಹೆಜ್ಜೆಯೆಂದರೆ ಅದರ ಬಗ್ಗೆ ತಿಳಿಯುವುದು. ಸೇಬು ಹಣ್ಣಿನ ಉಪಯುಕ್ತತೆಯ ಕುರಿತು ನೂರು ಪುಸ್ತಕ ಓದುವುದಕ್ಕಿಂತ ಒಂದು ಸೇಬು ತಿನ್ನುವುದು ಹೆಚ್ಚು ಉಪಯುಕ್ತ. ಯಾವುದನ್ನೇ ಬದಲಾಯಿಸಬೇಕೆಂದರೆ ಅದರ ಬಗ್ಗೆ ತಿಳುವಳಿಕೆ ಮೊದಲನೆಯ ಹೆಜ್ಜೆ ನಿಜ.
ಕೆಲಸ ಮಾಡುವ ಸ್ಥಿತಿ ಗತಿ ಬದಲಾಗಬೇಕೆಂದರೆ ತಿಳುವಳಿಕೆ ಮಾತ್ರ ಸಾಲದು. ತಿಳುವಳಿಕೆಯನ್ನು ಕಾರ್ಯರೂಪದಲ್ಲಿಳಿಸಬೇಕು. ಆಗ ಜ್ಞಾನ ಬಲವಾಗುತ್ತದೆ. ಮಾಡುತ್ತಿರುವ ಕೆಲಸದ ಬಗ್ಗೆ ಹೆಚ್ಚು ತಿಳುವಳಿಕೆ ಹೊಂದಿದ್ದರೆ ಹೆಚ್ಚು ಚೆನ್ನಾಗಿ ಮಾಡಬಲ್ಲೆವು ಎಂಬುದು ಸಾಮಾನ್ಯವಾದ ತಿಳುವಳಿಕೆಯ ಸಂಗತಿ.
ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಲು ಮಾಡುವ ಕೆಲಸದಲ್ಲಿ ದಿನ ನಿತ್ಯ ಆಗುವ ಹೊಸ ಹೊಸ ಆವಿಷ್ಕಾರಗಳನ್ನು ನೀತಿ ನಿಯಮಗಳನ್ನು ತಿಳಿದುಕೊಳ್ಳಲೇಬೇಕು. ಇಲ್ಲದಿದ್ದರೆ ಕೆಲಸದಲ್ಲಿ ಕೌಶಲ್ಯತೆಯನ್ನು ಕಾಣಲಾಗದು. ಗುರಿಯನ್ನು ತಲುಪಲಾಗದು. ಕೆಲಸದ ಗುರಿಯನ್ನು ತಲುಪುವಲ್ಲಿ ನಮ್ಮ ವ್ಯಕ್ತಿತ್ವದ ನಿಜವಾದ ಮೌಲ್ಯವಿದೆ. ‘ಚೆನ್ನಾಗಿ ಮಾಡುವುದಕ್ಕೆ ಅದರ ಪ್ರತಿಫಲವು ಅದನ್ನು ಮಾಡುವುದರಲ್ಲಿದೆ.’ಎಂದಿದ್ದಾನೆ ತತ್ವಜ್ಞಾನಿ ರಾಲ್ಫ ವಾಲ್ಡೋ ಎಮರ್‍ಸನ್.
ಪ್ರಪಂಚದಲ್ಲಿ ಧನ ಕನಕ ಕೀರ್ತಿ ವಾರ್ತೆ ಗಳಿಸಲು ಸಾಕಷ್ಟು ಅವಕಾಶಗಳಿವೆ. ಆದರೆ ಅದರಲ್ಲಿ ನಮ್ಮಲ್ಲಿರುವ ಶಕ್ತಿಗೆ ಸೂಕ್ತವಾದುದು ಎಂಬುದನ್ನು ತಿಳಿಯುವುದು ಮುಖ್ಯ ಪಾತ್ರ ವಹಿಸುತ್ತದೆ. ಒಂದೆರಡು ಬಾರಿ ಸೋತ ಮಾತ್ರಕ್ಕೆ ಹಿಡಿದ ಕೆಲಸವನ್ನು ಬಿಡಬಾರದು. ಎಡಿಸನ್ ಹೇಳಿದಂತೆ ‘ಎಷ್ಟೇ ಬುದ್ಧಿವಂತನಾದರೂ ಹಿಡಿದ ಕೆಲಸ ಸಾಧಿಸಬೇಕಾದರೆ ಶೇ 99 ರಷ್ಟು ಭಾಗ ಕಷ್ಟ ಪಡಲೇಬೇಕು. ಕಠೋರ ಪರಿಶ್ರಮ, ದೃಢ ನಿರ್ಧಾರ ಬಿಗಿ ಪಟ್ಟು ಇಲ್ಲದಿದ್ದರೆ ಎಷ್ಟೇ ಜಾಣ್ಮೆ ಬುದ್ಧಿವಂತಿಕೆಯಿದ್ದರೂ ವ್ಯರ್ಥ.”