ಬಸವಭಕ್ತಿ

ಯಮಧರ್ಮರಾಯನ ಲೆಕ್ಕ ಪತ್ರ ಹೇಗಿದೆ ಗೊತ್ತಾ..? ಚಂಚಲ ಮನಸ್ಸಿಂದ ಪೂಜಿಸಿದ್ದಲ್ಲಿ ದಾರಿದ್ರ್ಯ ಪ್ರತ್ಯಕ್ಷ

ಡಾಂಭಿಕ ಭಕ್ತರಿಗೆ ದೇವನೊಲಮೆ ಸಾಧ್ಯವೇ.? ಯಮಧರ್ಮರಾಯನ ಡಿಫರೆಂಟ್ ಮ್ಯಾಥ್ಸ್

ಮಲ್ಲಿಕಾರ್ಜುನ ಮುದನೂರ

ಹೃದಯದೊಳು ವಿಷ ತುಂಬಿಕೊಂಡಿದ್ದು, ಬಾಯಿಯಲ್ಲಿ ಅಮೃತದಂತಹ ಮಾತುಗಳನ್ನಾಡಿದರೆ ದೇವನೊಲಿಯುವನೇ.? ಅಥವಾ ನಿತ್ಯ ಉಪಜೀವನಕ್ಕಾಗಿ ಕೈಗೊಂಡಿರುವ ತಮ್ಮ ತಮ್ಮ ಕಾಯಕದಲ್ಲಿ ಮೋಸ, ವಂಚನೆ ಮಾಡಿ ವ್ಯಾಪಕ ಹಣ ಗಳಿಸಿ ದೇವ ಮಂದಿರಕ್ಕೆ ಹೋಗಿ ಆಡಂಬರದ ಬೂಟಾಟಿಕೆಯ ಪೂಜೆ ಸಲ್ಲಿಸಿದ್ದಲ್ಲಿ ದೇವನೊಲಿಯುವನೇ.? ಸಾಧ್ಯವಿಲ್ಲ.

ಮನದಲ್ಲೊಂದು ಮಾಡಿ ಹೊರಗಡೆಯೊಂದು ತೋರಿದ್ದಲ್ಲಿ. ಅದು ತಾತ್ಕಾಲಿಕ ಆರಾಮವೆನಿಸಬಹುದು. ಅಂತಿಮವಾಗಿ ಅದರ ಫಲ ಏನೆಂಬುದು ತಿಳಿಯುತ್ತದೆ. ಎಲ್ಲೋ ಪುಸ್ತಕದಲ್ಲಿ ಓದಿದ ಒಂದು ಕಥೆ ನೆನಪಿಗೆ ಬರುತ್ತದೆ.

ಒಂದೂರಲ್ಲಿ ಒಬ್ಬ ರಾಜನಿದ್ದ, ಉತ್ತಮ ಆಡಳಿತಗಾರನು ಆಗಿದ್ದು, ದಾನ ಧರ್ಮ ದಾಸೋಹದಲ್ಲಿ ಹೆಸರು ವಾಸಿಯಾಗಿದ್ದ. ಒಂದು ದಿನ ಬ್ರಾಹ್ಮಣರಿಗೆ ವನಭೋಜನ ವ್ಯವಸ್ಥೆ ಮಾಡಿದ್ದ. ರಾಜನೋರ್ವ ನೀಡಿದ ಆಹ್ವಾನವನ್ನು ಮನ್ನಿಸಿ ಬ್ರಾಹ್ಮಣರೆಲ್ಲರೂ ಭೋಜನ ಸವಿಯಲು ಏರ್ಪಾಡು ಮಾಡಿದ್ದ ಸ್ಥಳಕ್ಕೆ ಆಗಮಿಸಿದ್ದರು.

ಭೋಜನ ವ್ಯವಸ್ಥೆ ಮಾಡಲಾಗಿತ್ತು. ಇನ್ನೇನು ಬ್ರಾಹ್ಮಣರಿಗೆ ಊಟಕ್ಕೆ ಬಡಿಸಬೇಕು ಎನ್ನುವಷ್ಟರಲ್ಲಿ, ಆಕಾಶದಲ್ಲಿ ಹದ್ದುವೊಂದು ಹಾವಿನ ಬೇಟೆಯಾಡಿ ಬಾಯಿಯಲ್ಲಿ (ವಿಷ ಸರ್ಪ) ಹಾವನ್ನು ಹಿಡಿದು ಮೇಲೆ ಹಾರುತ್ತಾ ಸಾಗಿತ್ತು, ಆ ಸಮಯದಲ್ಲಿ ಹಾವಿನ ವಿಷ ಅಡುಗೆ ತಯಾರಿಸಿಟ್ಟಿದ ಅನ್ನದ ಬುಟ್ಟಿಯಲ್ಲಿ ಒಂದೆರಡು ಹನಿ ಬಿತ್ತು.

ಹಾವಿನ ವಿಷದ ಹನಿ ಬಿದ್ದಿರುವುದು ಯಾರಿಗೂ ತಿಳಿಯಲಿಲ್ಲ. ಹಾಗೇ ಆಗಮಿಸಿದ್ದ ಬ್ರಾಹ್ಮಣರೆಲ್ಲರಿಗೂ ಊಟವನ್ನು ಬಡಿಸಲಾಯಿತು. ಊಟ ಮಾಡಿದ ಬ್ರಾಹ್ಮಣರು ವಿಷದ ಅನ್ನ ಸೇವಿಸಿದ ಕಾರಣ ಸ್ಥಳದಲ್ಲಿಯೇ ವಾಂತಿಬೇಧಿಯಾಗಿ ಸಾಲು ಸಾಲಾಗಿ ಮೃತಪಟ್ಟರು.

ಗಾಬರಿಗೊಂಡ ರಾಜ ಏನಾಯಿತು. ಎಂದು ತಿಳಿಯದೆ ಅತ್ತಿಂದಿತ್ತ ಇತ್ತಿಂದ ಅತ್ತ ಓಡಾಡ ತೊಡಗಿದ. ಸೈನಿಕರೆಲ್ಲರಿಗೂ ಏನಾಯಿತು ವೈದ್ಯರನ್ನು ಕರೆಯಿಸಿ ಎನ್ನುವಷ್ಟರಲ್ಲಿ ಭೋಜನ ಸವಿದ ಬ್ರಾಹ್ಮಣರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಈ ಸಂಗತಿಯಲ್ಲಿ ರಾಜನ ತಪ್ಪೇನಿದೆ ಹೇಳಿ.? ಪಾಪಾ ರಾಜ ತನ್ನ ಆಸ್ಥಾನ ಬ್ರಾಹ್ಮಣರೆಲ್ಲರಿಗೂ ಊಟ ಮಾಡಿಸಿದ್ದು ತಪ್ಪಾ.? ಇಲ್ಲ..! ಹಾಗಾದರೆ.. ಮೇಲೆ ಹಾದು ಹೋಗುತ್ತಿದ್ದ ಪಕ್ಷಿ ಹದ್ದು ಅದರ ತಪ್ಪೇನಾದ್ರೂ ಇದೆಯೇ..ಇಲ್ಲ. ಪಾಪ ಹದ್ದು ತನ್ನ ಆಹಾರವನ್ನು ಅದು ತೆಗೆದುಕೊಂಡು ಹೊರಟಿದೆ.
ಹಾವಿನದು ಏನಾದರೂ ತಪ್ಪಿದೆಯೋ ಇಲ್ಲ. ಹದ್ದು ಹಾವನ್ನು ಕೊಂದು ಒಯ್ಯುತ್ತಿದೆ. ಪ್ರಾಣ ಕಳೆದುಕೊಂಡ ಹಾವಿನದು ಏನು ತಪ್ಪಲ್ಲ. ಹಾಗಾದರೆ ಇಲ್ಲಿ ಯಾರ ತಪ್ಪಿದೆ..?

ಪ್ರಾಣ ಕಳೆದುಕೊಂಡವರ ಲೆಕ್ಕ ಬರೆದುಕೊಂಡು ಬರಲು ಸ್ಥಳಕ್ಕೆ ಆಗಮಿಸಿದ ಚಂದ್ರಗುಪ್ತನಿಗೆ ಯಾರ ತಪ್ಪೆಂದು ನಮೂದಿಸಲು ಆಗದೆ, ವಾಪಸ್ ಯಮಧರ್ಮರಾಯನ ಹತ್ತಿರ ಹೋಗಿ ಕೇಳುತ್ತಾನೆ, ಯಮಧರ್ಮರಾಯರೇ ಬ್ರಾಹ್ಮರಿಗೆ ಊಟ ಮಾಡಿಸಿದ್ದು ಓರ್ವ ರಾಜ, ಚನ್ನಾಗಿ ಭೋಜನದ ವ್ಯವಸ್ಥೆ ಮಾಡಿಸಿದ್ದಾನೆ, ಆದರೆ ಮೇಲಿಂದ ಹದ್ದು, ಹಾವಿನ ಭೇಟೆಯಾಡಿ ತನ್ನ ಆಹಾರವನ್ನು ಅದು ಸಂಪಾದಿಸಿಕೊಂಡು ಹೊರಟಿದೆ.

ಆ ವೇಳೆ ಹಾವಿನ ವಿಷ ಒಂದೆರಡು ಹನಿ ಬ್ರಾಹ್ಮಣರ ಊಟಕ್ಕೆ ಬಡಿಸಬೇಕಿದ್ದ ಅನ್ನದ ಬುಟ್ಟಿಯಲ್ಲಿ ಬಿದ್ದಿದೆ. ರಾಜನಿಗೆ ಹೇಗೆ ತಿಳಿಯಲು ಸಾಧ್ಯ. ಹೀಗಾಗಿ ಬ್ರಾಹ್ಮಣರು ಸಾವನ್ನಪ್ಪಿದ್ದಾರೆ.

ಈ ಸಾವಿನ ಪಾಪದ ಲೆಕ್ಕ ಯಾರ ತಲೆಗೆ ಕಟ್ಟಬೇಕು ಎಂಬುದು ಗೋಚರಿಸುತ್ತಿಲ್ಲ ಹೇಗೆ ಮಾಡಲಿ ಎಂದು ಚಂದ್ರಗುಪ್ತ ಕೇಳುತ್ತಾನೆ.
ಆಗ ಯಮಧರ್ಮರಾಯ ಯೋಚಿಸಿ ಸ್ವಲ್ಪ ತಡೆಯಿರಿ ಚಂದ್ರಗುಪ್ತರೇ.. ಎಲ್ಲಾ ಲೆಕ್ಕ ಚುಕ್ತವಾಗುತ್ತದೆ. ಈ ಬ್ರಾಹ್ಮಣರ ಸಾವಿಗೆ ಕಾರಣರಾರು ಅವರ ಹೆಸರು ನಮೂದಿಸಬೇಕಾಗಿದೆ ಹೌದಲ್ಲವೇ..ಸ್ವಲ್ಪ ದಿವಸ ತಡೆಯಿರಿ ಹೇಳುತ್ತೇನೆ ಎಂದು ತಿಳಿಸುತ್ತಾರೆ.

ಈ ಘಟನೆ ನಂತರ ಅದೇ ರಾಜನ ಊರಿಗೆ ಪರಸ್ಥಳದಿಂದ 8 ಜನ ಬ್ರಾಹ್ಮಣರು ಬರುತ್ತಾರೆ. ಬಂದವರೇ ರಾಜನ ಆಸ್ಥಾನದ ವಿಳಾಸ ಗೊತ್ತಿರದೆ ರಸ್ತೆ ಬದಿ ನಿಲ್ಲುತ್ತಾರೆ. ರಾಜನ ಆಸ್ಥಾನದ ಕಡೆ ಹೇಗೆ ಹೋಗಬೇಕು ಎಂಬುದನ್ನು ತಿಳಿಯದೆ ನಿಂತಿದ್ದು, ಕೊನೆಗೂ ರಸ್ತೆ ಬದಿ ಹೂಗಳನ್ನು ಮಾರಾಟ ಮಾಡುತ್ತಿದ್ದ ಓರ್ವ ಹೆಂಗಸಿನ ಹತ್ತಿರ ಹೋಗಿ ಇಲ್ಲಿನ ರಾಜನ (ಮನೆ) ಆಸ್ಥಾನವೆಲ್ಲಿದೆ ಹೇಗೆ ಹೋಗಬೇಕು ಎಂದು ಆ ಪರಸ್ಥಳದಿಂದ ಬಂದ ಬ್ರಾಹ್ಮಣರು ಕೇಳುತ್ತಾರೆ.

ಹೂ ಮಾರುತ್ತಿದ್ದ ಆಕೆ ಒಂದೇ ಉಸಿರಲ್ಲಿ ಏಕೆ..ಅಲ್ಲಿಗೆ ಹೊರಟಿದ್ದೀರಿ ನೀವೂ ಬ್ರಾಹ್ಮಣರಲ್ಲವೋ ಅಲ್ಲಿಗೆ ಹೋಗಬೇಡಿ ಹೋದರೂ ಊಟ ಮಾಡಬೇಡಿ. ಆ ರಾಜ ಬ್ರಾಹ್ಮಣರಿಗೆ ಊಟದಲ್ಲಿ ವಿಷ ಬಡಿಸಿ ಕೊಲ್ಲುತ್ತಾನೆ. ಮೊನ್ನೆ ಮೊನ್ನೆ ನೂರಾರು ಜನ ಬ್ರಾಹ್ಮಣರಿಗೆ ಊಟದಲ್ಲಿ ವಿಷ ಬಡಿಸಿ ಕೊಂದಿದ್ದಾನೆ ಎನ್ನುತ್ತಾಳೆ.
ಆಗ ಯಮಧರ್ಮರಾಯ ಹೇಳುತ್ತಾನೆ ಚಂದ್ರಗುಪ್ತನಿಗೆ ಆ ಬ್ರಾಹ್ಮಣರ ಸಾವಿಗೆ ಯಾರು ಹೆಸರು ಬರಿಬೇಕು ತಿಳಿಯುತ್ತಿಲ್ಲವೆಂದಿರಲ್ಲ ಗುಪ್ತರೇ ತಗ್ಗೊಳ್ಳಿ ಇಲ್ಲಿದ್ದಾಳೆ ನೋಡಿ ಈ ಹೂ ಮಾರಾಟ ಮಾಡುವವಳ ಹೆಸರು ಬರೀರಿ ಎನ್ನುತ್ತಾರೆ.

ಈ ಕಥೆಯ ತಾತ್ಪರ್ಯ ಅರ್ಥವಾಗಿರಬಹುದು ಎಂದು ತಿಳಿದುಕೊಳ್ಳುತ್ತೇನೆ. ಈಗ ಭಕ್ತಿ ವಿಷಯಕ್ಕೆ ಬರುತ್ತೇನೆ.
ಮನುಷ್ಯ ಡಾಂಭಿಕವಾಗಿ ದೇವನ ಭಕ್ತನಾದರೆ ದೇವರು ಒಲಿಯುವದಿಲ್ಲ. ದೇವರ ಗುಡಿಯಲ್ಲಿದ್ದು, ಮೈತುಂಬ ವಜ್ರವೈಡೂರ್ಯ ಧರಿಸಿ, ದೇವರಿಗೆ ಮೈತುಂಬ ಬಂಗಾರ, ವಜ್ರದಿಂದ ಅಲಂಕರಿಸಿ, ಅಹಂಕಾರದಿಂದ ಬೂಟಾಟಿಕೆ ಪೂಜೆ ಸಲ್ಲಿಸಿದ್ದಲ್ಲಿ ಅದು ಯೋಗ್ಯ ಫಲ ನೀಡುವದಿಲ್ಲ.

ಮನುಷ್ಯನಲ್ಲಿ ಮಾನವೀಯತೆ, ಪ್ರಾಮಾಣಿಕತೆ, ಸಾತ್ವಿಕ, ತ್ಯಾಗ, ಧರ್ಮ ಸತ್ಯ ನ್ಯಾಯ ಒಳಿತು ಮಾಡುವ ಗುಣವಿದ್ದು ಶ್ರದ್ಧಾ ಭಕ್ತಿಯಿಂದ ದೇವನನ್ನು ಪೂಜಿಸಿದ್ದಲ್ಲಿ ಆತನ ಅನುಗೃಹ ದೊರೆಯಲು ಸಾಧ್ಯವಿದೆ.

ಅದು ಬಿಟ್ಟು ಉಂಡು ಮನೆಯ ಜಂತಿ ಎಣಿಸಿ, ಪರಸ್ಪರರಲ್ಲಿ ಜಗಳ ಹಚ್ಚಿ, ಮನೆ ಮುರಿದು ಮತ್ತೊಬ್ಬರ ಅನ್ನ ಕಸಿದುಕೊಂಡು, ನಿತ್ಯ ದುಡಿದವರ ದುಡ್ಡು ಹೊಡೆದು ಸ್ವತಹ ತಾ ಮೈಮುರಿದು ದುಡಿಯದೇ ಮತ್ತೊಬ್ಬರ ಆಸ್ತಿ, ಹಣ ಅಂತಸ್ತಿಗೆ ಆಸೆ ಬಿದ್ದು, ಸುಳ್ಳು, ಸೊಗಡು ಹೇಳಿ ಚಂದನವನದ ಸಂಸಾರವ ಹಾಳು ಮಾಡಿ ನಿತ್ಯ ಬೆಳಗ್ಗೆ ಎದ್ದು ದೇವರ ಮನೆಯೊಳು ಒಂದು ತಾಸು ನಿಂತು ಪೂಜೆ ಮಾಡಿದರೆ ದೇವರೊಲಿಯುವನೇ..?

ಅದರ ಅಂತಿಮ ಶಿಕ್ಷೆ ಘೋರ ಘನಘೋರವಾಗಿರುತ್ತದೆ ಎಂಬುದು ಎಲ್ಲರೂ ನೆನಪಿಡಬೇಕು. ಇದು ಕಲಿಯುಗ, ದೇವರ ಪಡೆಯಲು ಅಗಾಧ ತಪ್ಪಸ್ಸು ಬೇಕಿಲ್ಲವಂತೆ, ನಾವು ಸಾತ್ವಿಕ ಗುಣ ಹೊಂದಿದ್ದು, ಶ್ರದ್ಧಾ ಭಕ್ತಿಯಿಂದ ಪೂಜಿಸಿದ್ದಲ್ಲಿ ದೇವರು ಸುಲಭವಾಗಿ ಅನುಗೃಹಿಸುತ್ತಾನಂತೆ.

ದೇವರ ಗುಡಿಗೆ ಹೋಗಿ ಪೂಜೆ ಸಲ್ಲಿಸಬೇಕೆಂಬ ನಿಯಮವಿಲ್ಲ. ದೇವರು ಸರ್ವ ವ್ಯಾಪ್ತಿ, ದೇವಾಲಯದಲ್ಲಿರುವ ಮೂರ್ತಿಗಳು ದೇವತ್ವವನ್ನು ಪಡೆದಿರುವತ್ತವೆ. ದೇವಸ್ಥಾನಕ್ಕೆ ಹೋಗಿ ಶ್ರದ್ಧೆ ಭಕ್ತಿಪೂರ್ವಕ ನಮಿಸಿದ್ದಲ್ಲಿ ನಿರ್ಮಲ ಮನಸ್ಸಿನಿಂದ ಧ್ಯಾನಿಸಿದಲ್ಲಿ ದೇವರ ದರ್ಶನವಾಗುತ್ತದೆ.
ಆದರೆ ಚಂಚಲ ಮನಸ್ಸಿಂದ ಮನದಲ್ಲಿ ಯಾವುದೋ ಕೆಟ್ಟ ಭಾವನೆ ನಮ್ಮ ಶತ್ರು ನಾಶವಾಗಲಿ ಎಂದು ಅಂದ್ಕೊಂಡ್ರೆ ಅದೇಗೆ ಹಾಗುತ್ತದೆ.. ತಪ್ಪು ಯಾರ ತಲೆಗೆ ಕಟ್ಟಬೇಕೋ ಅದು ಯಮಧರ್ಮರಾಯ ಮತ್ತು ಚಂದ್ರಗುಪ್ತರೇ ಡಿಸೈಡ್ ಮಾಡುತ್ತಾರೆ ಅಲ್ವಾ..

ಕೊನೆಯದಾಗಿ ಇನ್ನಾದರೂ ಸಾತ್ವಿಕ ಗುಣ ಅಳವಡಿಸಿಕೊಂಡು ದೇವರ ಧ್ಯಾನಿಸಿ. ಸ್ವಚ್ಛ ಮನಸ್ಸಿನಿಂದ ನಿರ್ಮಲವಾಗಿ ಪ್ರಾಮಾಣಿಕವಾಗಿ ಬದುಕುವದನ್ನು ರೂಢಿಸಿಕೊಳ್ಳಿ ಎಂಬುದೇ ಈ ಲೇಖನದ ಆಶಯ.

Related Articles

3 Comments

Leave a Reply

Your email address will not be published. Required fields are marked *

Back to top button