ಪತ್ರಕರ್ತ ರವಿ ಬೆಳಗೆರೆ ಪತ್ನಿ ಯಶೋಮತಿ ಫೇಸ್ ಬುಕ್ ನಲ್ಲಿ ಬರೆದದ್ದೇನು ನೋಡಿ!
ಮೊನ್ನೆ ತಾನೇ ನಡೆದ ಹಿಮನ ಬರ್ತ್ ಡೇಯ ಫೊಟೋಗಳನ್ನು ನೋಡುತ್ತಾ ಕುಳಿತಿದ್ದೆ. ಅದರಲ್ಲಿ ಕೆಲವನ್ನು select ಮಾಡಿ ರವಿಗೆ ಕಳಿಸಬೇಕು ಅಂದುಕೊಳ್ಳುವಷ್ಟರಲ್ಲಿ…. “ಯಶೂ ಮಾ ಎಲ್ಲಿದ್ದೀರ? ಒಂದು ಸ್ವಲ್ಪ ಟಿವಿ ನೋಡಿ” ಅಂದ ಕೂಡಲೇ ಅದನ್ನು ಅಲ್ಲೇ ಬಿಟ್ಟು ಟಿವಿ ಆನ್ ಮಾಡಿದವಳ ಕಿವಿಗೆ ಮೊದಲು ರಾಚಿದ್ದೇ ನನ್ನ ಹೆಸರು… ಏನಾಗ್ತಿದೆ? ನನ್ನ ಹೆಸರು ಯಾಕೆ ಬರ್ತಿದೆ ಅದೂ ನಂಗೇ ಗೊತ್ತಿಲ್ಲದೇ…. ಹಿಮ ಬೇರೆ ಸ್ಕೂಲಿಂದ ಬರುವ ಹೊತ್ತಾಗಿತ್ತು. ಮೊದಲು ಓಡಿ ಹೋಗಿ ಅವನನ್ನು ಕರೆದುಕೊಂಡು ಬಂದೆ. ರಾತ್ರಿಯಿಡೀ ಒಂದೇ ಸಮನೆ ಟಿವಿಗಳಲ್ಲಿ ಬಿತ್ತರವಾಗುತ್ತಿದ್ದ ಸುದ್ದಿಗಳು ಕಿವಿಗೆ ಕಾದ ಸೀಸದಂತೆ ಬೀಳುತ್ತಿದ್ದವು. ಕಚೇರಿಯಲ್ಲಿ ಫೋನುಗಳೆಲ್ಲ ಪೊಲೀಸರ ವಶದಲ್ಲಿದ್ದವು. ಹಾಗಾಗಿ ಎಲ್ಲಿಂದಲೂ ಉತ್ತರ ಸಿಗುತ್ತಿಲ್ಲ. ಸರಿ ಆದದ್ದಾಗಲಿ ನೋಡೋಣ ಭಗವಂತನೊಬ್ಬನಿದ್ದಾನೆ ಅಂದು ಧೈರ್ಯವಾಗಿ ಕುಳಿತವಳಿಗೆ ಅಮ್ಮ, ತಂಗಿ, ಅಣ್ಣನ ಮಗನ ಜೊತೆಗೆ ಗೆಳತಿಯರ ಧೈರ್ಯ ತುಂಬುವ ಮೆಸೇಜುಗಳು ಜೊತೆಯಾದವು. ಅಮ್ಮಾ ಯಾವುದಕ್ಕೂ ಹೆದರಿಕೊಳ್ಳಬೇಡ. ಏನೇ ಬಂದ್ರೂ ಧೈರ್ಯವಾಗಿ face ಮಾಡು…. ಅಂದ ಹಿಮ.
ಅನುಮಾನಗಳು, ಅವಮಾನಗಳು, ಆರೋಪಗಳು ಬೆನ್ನ ಹಿಂದೆ ನೆರಳಿನಂತೆ ನಡೆದು ಬರುತ್ತಲೇ ಇವೆ. ನಿಖರವಾದ ಮಾಹಿತಿಯಿಲ್ಲದೆ ಟಿವಿ ಮಾಧ್ಯಮಗಳು ತಮಗೆ ಬೇಕಾದ ಬಣ್ಣ ತುಂಬಿ ಒಂದು ರೀತಿಯ ರಿವೇಂಜಿಗಿಳಿದಿವೆ. ಕೆಲವರಿಗೆ ಮನರಂಜನೆ, ಕೆಲವರಿಗೆ ಆತಂಕ. ಕೆಲವರಿಗೆ ಕುತೂಹಲ. ಇನ್ನು ಕೆಲವರಿಗೆ ಅನುಮಾನ….
“ಏನೂ ಯೋಚನೆ ಮಾಡಬೇಡ ನಂಗೇನೂ ಆಗಲ್ಲ” ಅಂತ ಚೆಲ್ಲಿ ಹೋದ ರವಿಯ ನಗುವೇ ಮನೆ ಮನ ತುಂಬಿದೆ. ಅದೇ ನಿರೀಕ್ಷೆಯಲ್ಲಿದ್ದೇವೆ ನಾನು ಹಿಮ.
ನಿಮಗೇನೂ ಆಗಲ್ಲ ವೀ. ನಮ್ಮೆಲ್ಲರ ಪ್ರಾರ್ಥನೆ ಸದಾ ನಿಮ್ಮೊಂದಿಗಿದೆ. ಇದೊಂದು ಸಣ್ಣ ಪರೀಕ್ಷೆ ಅಷ್ಟೆ. ಅದರಲ್ಲಿ ಗೆದ್ದು ಬರುವಿರೆಂಬ ನಂಬಿಕೆ ನನಗಿದೆ.