ಯೋಗದಿಂದ ದೈಹಿಕ, ಮಾನಸಿಕ ಸದೃಢತೆ-ನ್ಯಾ.ಸಿದ್ರಾಮ
ವಕೀಲರ ಸಂಘದಿಂದ ಯೋಗ ದಿನಾಚರಣೆ
yadgiri, ಶಹಾಪುರಃ ದಿನನಿತ್ಯ ಯೋಗ ಅಭ್ಯಾಸದಿಂದ ಮನುಷ್ಯ ದೈಹಿಕ ಮತ್ತು ಮಾನಸಿಕವಾಗಿ ಸದೃಢತೆಯನ್ನು ಹೊಂದಲಿದ್ದಾನೆ. ಯೋಗ ಬಲ್ಲವನಿಗೆ ರೋಗವಿಲ್ಲ ಎಂಬಂತೆ ಉತ್ತಮ ಆರೋಗ್ಯಕರ ಬದುಕು ಕಟ್ಟಿಕೊಳ್ಳಲು ಯೋಗ ಸಹಕರಿಸಲಿದೆ ಎಂದು ಹಿರಿಯ ಶ್ರೇಣಿ ನ್ಯಾಯಧೀಶ ಸಿದ್ರಾಮ ಟಿ.ಪಿ. ತಿಳಿಸಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯೋಗವು ದೇಹ, ಮನಸ್ಸು ಮತ್ತು ಆತ್ಮವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಯೋಗದಿಂದ ಮನುಷ್ಯ ಏಕಾಗ್ರತೆ, ಸಂಯಮ ಸದೃಢ ಆರೋಗ್ಯವಲ್ಲದೆ ಸಾತ್ವಿಕ ವಿಚಾರ ಸದ್ವಿನಯ ಸತ್ಯಾರ್ಯದ ಮೂಲಕ ಆಧ್ಯಾತ್ಮಿಕತೆ ಒಲವು ತೋರಲಿದ್ದು ಸಾಮಾಜಿಕವಾಗಿ ಉತ್ತಮ ಮನುಷ್ಯನಿಗಾಗಿ ಬಾಳಲು ಅನುಕೂಲವಾಗಲಿದೆ ಎಂದರು.
ನಿತ್ಯ ಜೀವನದಲ್ಲಿ ಯೋಗಾಭ್ಯಾಸ ಮಾಡುವುದರಿಂದ ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಸೇರಿದಂತೆ ಹಲವಾರು ಸಮಸ್ಯೆಗಳನ್ನು ನಿವಾರಿಸಿಕೊಂಡು ಸಮತೋಲನತೆ ಕಾಪಾಡಿಕೊಳ್ಳುವ ಮೂಲಕ ಆರೋಗ್ಯಕರ ಜೀವನ ನಡೆಸಬಹುದು ಎಂದರು.
ಇದೇ ವೇಳೆ ಮಾತನಾಡಿದ ಹೆಚ್ಚುವರಿ ನ್ಯಾಯಾಧೀಶ ಬಸವರಾಜ, ಯೋಗದಿಂದ ಆತ್ಮಶಕ್ತಿ ವೃದ್ಧಿಯಾಗಲಿದೆ. ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ತೂಕ ನಷ್ಟ, ಒತ್ತಡ ನಿವಾರಣೆ, ರೋಗನಿರೋಧಕ ಶಕ್ತಿಯನ್ನು ಸುಧಾರಿಸುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಯೋಗವು ಜೀವಿತಾವಧಿಯನ್ನು ಹೆಚ್ಚಿಸುವದರೊಂದಿಗೆ ದೇಹಕ್ಕೆ ಮತ್ತು ಮನಸ್ಸಿಗೆ ಚಿರ ಯೌವ್ವನ ತುಂಬುವದರೊಂದಿಗೆ ಸೌಂದರ್ಯವನ್ನು ವೃದ್ಧಿಸಬಹುದಾಗಿದೆ ಎಂದರು.
ಹಿರಿಯ ವಕೀಲ ಹಾಗೂ ಯೋಗ ಪಟು ಆರ್.ಎಂ.ಹೊನ್ನಾರೆಡ್ಡಿ ಬೆಳಗಿನಜಾವ ಎಲ್ಲಾ ವಕೀಲರಿಗೆ ಯೋಗ ಅಭ್ಯಾಸ ಮಾಡಿಸುತ್ತಾ ಮಾತನಾಡಿದ ಅವರು, ಪ್ರಾಣಾಯಾಮ ಮತ್ತು ಧ್ಯಾನವು ಸವಾರ್ಂಗೀಣ ಸುಸ್ಥಿತಿಯನ್ನುಂಟುಮಾಡಿ, ಮಾನಸಿಕ ಬಲವರ್ದನೆ ಮತ್ತು ದೈಹಿಕ ಬಲ ಹೆಚ್ಚಳಕ್ಕೆ ಕಾರಣವಾಗುತ್ತದೆ. ಮತ್ತು ನೀವು ಹೊಂದಿರುವ ಪ್ರೀತಿ ಪಾತ್ರರೊಡನೆ ಸಂಬಂಧ ಸುಧಾರಿಸುತ್ತದೆ ಎಂದರು. ಹಲವಾರು ಯೋಗದ ಆಸನಗಳನ್ನು ಹೇಳಿ ಕೊಟ್ಟರು.
ಈ ಸಂದರ್ಭದಲ್ಲಿ ಕಿರಿಯ ಶ್ರೇಣಿಯ ನ್ಯಾಯಾಧೀಶೆ, ಕು. ಶೋಬಾ, ಮತ್ತು ಹಿರಿಯ, ಕಿರಿಯ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದು, ಯೋಗಾಬ್ಯಾಸ ಮಾಡಿದರು.