‘ರಾಜ್ಯಕ್ಕೆ 5 ರಿಂದ 6 ಸಚಿವ ಸ್ಥಾನಗಳು ಸಿಗುವ ನಿರೀಕ್ಷೆಯಲ್ಲಿದ್ದೇವೆ’- ಬಿ.ವೈ ವಿಜಯೇಂದ್ರ
ನವದೆಹಲಿ: ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಇಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ರಾಜ್ಯಕ್ಕೆ 5 ರಿಂದ 6 ಸಚಿವ ಸ್ಥಾನಗಳು ಸಿಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲಾ ಬೂತ್ ಮಟ್ಟದಲ್ಲೂ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಕರ್ನಾಟಕದ ಬಗ್ಗೆ ನರೇಂದ್ರ ಮೋದಿ ವಿಶೇಷ ಕಾಳಜಿ ವಹಿಸುತ್ತಾರೆ. ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಬೇಕೆಂದು ಜನರು ನಿರ್ಧರಿಸಿದ್ದರು. ನರೇಂದ್ರ ಮೋದಿ ನಾಯಕತ್ವಕ್ಕೆ ಜನಮನ್ನಣೆ ಸಿಕ್ಕಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜನ ಮತ ನೀಡಿದ್ದಾರೆ. ರಾಜ್ಯದ ಮೈತ್ರಿ ಸಂಸದರಿಗೆ ಯಾರಿಗೇ ಸಚಿವ ಸ್ಥಾನ ಸಿಕ್ಕರೂ ಸಂತಸ. ಹೆಚ್ ಡಿಕೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗುವ ವಿಶ್ವಾಸ ಇದೆ. ರಾಘವೇಂದ್ರ ಕೂಡ ಸಚಿವ ಸ್ಥಾನಕ್ಕೆ ಅರ್ಹ ನಾಯಕರಾಗಿದ್ದಾರೆ. ಸಚಿವ ಸ್ಥಾನದ ಬಗ್ಗೆ ಅಂತಿಮವಾಗಿ ಪಕ್ಷ ನಿರ್ಧಾರ ಕೈಗೊಳ್ಳುತ್ತೆ. ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.