ಭಾರತೀಯ ಸೇನೆ ಸೇರಿದ ಮುಧೋಳ ಬೇಟೆ ನಾಯಿ
ವೆಂಕಟೇಶ ಗುಡೆಪ್ಪನವರ
ವಿಶ್ವದ ಶ್ರೇಷ್ಠ ಸೈನ್ಯವನ್ನು ಹೊಂದಿರುವ ಭಾರತೀಯ ಸೇನೆಯಲ್ಲಿ ಜರ್ಮನ್ ಶೆಪರ್ಡ್ಸ,ಗ್ರೇಟ್ ಸ್ವಿಸ್ ಮೌಂಟನ್, ಲಾಬ್ರಡಾರ್ಸ ನಾಯಿ ತಳಿಗಳನ್ನು ಮಾತ್ರ ಸೇವೆಗೆ ಬಳಸಲಾಗುತ್ತಿತ್ತು. ಈಗ ಈ ಸಾಲಿಗೆ ಕರ್ನಾಟಕದ ಬಾಗಲಕೋಟ ಜಿಲ್ಲೆ ಮುಧೋಳ ಬೇಟೆ ನಾಯಿ ರ್ಸೆರ್ಪಡೆಗೊಂಡಿದೆ. ಭಾರತೀಯ ಸೇನೆ ಸೇರಿದ ಮೊದಲ ದೇಶಿ ತಳಿ ಎಂದರೆ ಅತೀಶಯೋಕ್ತಿಯಲ್ಲ ಈ ವಿಷಯದಲ್ಲಿ ನಾವೆಲ್ಲರೂ ಹೆಮ್ಮೆ ಪಡಲೇಬೇಕು.
2015ರ ಪೆಬ್ರವರಿ 15ರಂದು ಈ ಬೇಟೆ ನಾಯಿಯನ್ನು ಭಾರತೀಯ ಸೇನೆಗೆ ಸೇರಿಸಿಕೊಳ್ಳಲು ತಿರ್ಮಾಣಿಸಲಾಯಿತು. 2016ರಲ್ಲಿ ಬೆಂಗಳೂರಿನ ಹೆಬ್ಬಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಗೆ 6 ನಾಯಿಗಳನ್ನು ಹಸ್ತಾಂತರ ಮಾಡಲಾಗಿತ್ತು ಉತ್ತರ ಪ್ರದೇಶದ ಮೀರತ್ನಲ್ಲಿರುವ ಯುದ್ದ ಶ್ವಾನಗಳ ತರಬೇತಿ ಘಟಕ(ಆರ್.ವಿ.ಎಸ್)ದಲ್ಲಿ ಈ ಮುಧೋಳ ನಾಯಿಗಳಿಗೆ ಬಾಂಬ್ ಪತ್ತೆಹಚ್ಚುವಿಕೆ, ಅಪರಾಧಿಗಳ ಜಾಡು ಹಿಡಿಯುವದು, ತರಬೇತಿದಾರರ ಆದೇಶ ಪಾಲನೆ, ಪತ್ತೇದಾರಿ ಚಟುವಟಿಕೆ ಮತ್ತು ರಕ್ಷಣಾ ಚಟುವಟಿಕೆ ಕುರಿತು ವಿಶೇಷ ತರಬೇತಿ ನೀಡಲಾಗಿದ್ದು, ಈ ಸಂದರ್ಭದಲಿ ಮೊದಲಿಗ್ಲೆ ತರಬೇತುದಾರರು ಪ್ರಾಣಿಗಳು ನಡವಳಿಕೆ ಮತ್ತು ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು, ನಾಯಿಗಳು ಹಾಗೂ ತರಬೇತಿದಾರರ ನಡುವಿನ ಬಾಂಧವ್ಯವನ್ನು ಬೆಳೆಸಲಾಯಿತು.
ಈ ಮೂಲಕ ಸೇನೆಯ ಸೇವೆಗೆ ಈಗ ಬಳಸಿಕೊಳ್ಳಲಾಗುತ್ತಿದೆ.2017ರ ಜನೆವರಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ದಲ್ಲಿ ಹತ್ತು ಮುಧೋಳ ನಾಯಿಗಳ ತಂಡ ಆಯ್ಕೆಯಾಗಿ ಬಾಗಿಯಾಗಿರುವದು ಹೆಮ್ಮೆಯ ಸಂಗತಿ.ಇದಕ್ಕೂ ಮುಂಚೆ 2005 ಜನೆವರಿ 9ರಂದು 5ರೂ ಮುಖಬೆಲೆಯ ಅಂಚೆ ಚೀಟಿಯನ್ನು ಭಾರತ ಸರ್ಕಾರ ಬಿಡುಗಡೆ ಮಾಡಲಾಯಿತು.
ಇತಿಹಾಸ:
ಕವಿ ಚಕ್ರವರ್ತಿ ರನ್ನನಿಗೆ ಜನ್ಮ ನೀಡಿದ ಮುಧೋಳ ಜನತೆಯ ಮನಸೂ ಮಹಾಲಿಂಗಪೂರದ ಬೆಲ್ಲದಂತೆ ವಿವಿದ ರಂಗದಲ್ಲಿ ತನ್ನದೇಯಾದ ಹೆಜ್ಜೆ ಗುರುತನ್ನು ಮೂಡಿಸಿದೆ. ವಿಶ್ವದ ಗಮನ ಸೆಳೆದ ಮುಧೋಳ ನಾಯಿ ಕರ್ನಾಟಕ, ಮಹಾರಾಷ್ಟ,ಆಂದ್ರ ಪ್ರದೇಶದಲ್ಲಿ ಅಲ್ಲಲ್ಲಿ ಕಾಣಸಿಗುವ ಈ ಬೇಟೆ ನಾಯಿ ಹೆಚ್ಚಿನ ಪ್ರಮಾಣದಲ್ಲಿ ಮುಧೋಳದಲ್ಲಿ ಸಿಗುವ ಕಾರಣ ಈ ನಾಯಿಯನ್ನು ಮುಧೋಳ ಬೇಟೆ ನಾಯಿ, ಮುಧೋಳ ಹೌಂಡ್ ಎಂದು ಕರೆಯುತ್ತಾರೆ. ಸುಮಾರು ಕ್ರೀ.ಪೂ 500ರಲ್ಲಿ ಈ ನಾಯಿ ಕರ್ನಾಟಕದವರೆಗೆ ಪರಿಚಯವಾಗಿತ್ತು, ಮದ್ಯ ಏಷ್ಯಾ ಹಾಗೂ ಅರೇಬಿಯದಿಂದ ಭಾರತಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೊಂದೆಡೆ ಈ ನಾಯಿ ಪರ್ಷಿಯಾ (ಇಂದಿನ ಇರಾಕ್ ಮತ್ತು ಇರಾನ್)ದೇಶದಿಂಧ ಬಂದಿದೆ ಎಂದೂ ಸಹ ಹೇಳಲಾಗುತ್ತಿದೆ.
ಈ ಸಂದರ್ಭದಲ್ಲಿ ವಿಜಯಪೂರದ ಆದಿಲ್ಶಾಹಿಗಳ ಕಾಲದಲ್ಲಿ ಮುಧೋಳದ ಸೇನಾಧಿಪತಿಯಾದ ಬಾಜಿರಾವ್ ಘೋರ್ಪಡೆಯವರು 500 ಕುದರೆಗಳೊಂದಿಗೆ ಮುಧೋಳಕ್ಕೆ ಬಂದ ಸಂದರ್ಭದಲ್ಲಿ ಈ ನಾಯಿಯ ತಳಿಯೂ ಬಂದಿತು ಎಂದು ಹೇಳುತ್ತದೆ. ಇತಿಹಾಸ ಹೀಗೆ ಹೇಳಿದರೆ ಮತ್ತೊಂದು ಇತಿಹಾಸದಲ್ಲಿ ಮೊಗಲರ ಚರ್ಕವರ್ತಿ ಔರಂಗಜೇಬನ ಕಾಲದಲ್ಲಿ ಬಂದಿತು ಎಂದು ತಿಳಿದುಬರುತ್ತದೆ.
ಇಂದು ವಿಶ್ವದ ಗಮನ ಸೆಳೆದ ಭಾರತೀಯ ಸೇನೆಯ ನೆಚ್ಚಿನ ಈ ತಳಿಯನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ಮಾತ್ರ ಮುಧೋಳದ ರಾಜಾ ಮಾಲೋಜಿರಾವ್ ಘೋರ್ಪಡೆಯವರಿಗೆ ಸಲ್ಲುತ್ತದೆ. ರಾಜಾ ಮಾಲೋಜಿರಾವ್ ಘೋರ್ಫಡೆಯವರು ಒಂದು ಸಲ ಲಂಡನ್ಗೆ ಹೋದ ಸಂದರ್ಭದಲ್ಲಿ ಪಂಚಮ ಜಾರ್ಜನಿಗೆ ಈ ನಾಯಿಯನ್ನು ಕಾಣಿಕೆಯಾಗಿ ಕೊಟ್ಟಬಗ್ಗೆ ಇತಿಹಾಸದಲ್ಲಿ ತಿಳಿದುಬರುತ್ತದೆ.
ಮತ್ತು 1900ರಲ್ಲಿ ರಾಜಾ ಮಾಲೋಜಿರಾವ್ ಘೋರ್ಪಡೆ ಅವರು ತಮ್ಮ ಆಸ್ತಿಯನ್ನು ಕಾಯಲು ನೇಮಿಸಿಕೊಂಡಿದ್ದು ಮತ್ತು ಈ ನಾಯಿಯ ತಳಿ ಅಭಿವೃದ್ಧಿಗಾಗಿ ಚಂದನಶಿವ ಕುಟುಂಬಕ್ಕೆ ಕೆಲವಷ್ಟು ಭೂಮಿಯನ್ನು ಕೊಟ್ಟಬಗ್ಗೆ ಇತಿಹಾಸಕಾರರ ಹೇಳುತ್ತಾರೆ. ಒಟ್ಟಾರೆಯಾಗಿ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿಯೂ ಈ ನಾಯಿ ಇತ್ತು ಅಂದು ಈ ನಾಯಿಯನ್ನು ಸಮರವೀರ ನಾಯಿಎಂದು ಕರೆಯಲಾಗುತಿತ್ತು.ಈ ನಾಯಿಗೆ ಕ್ಯಾರವಾನ್ ಎಂದು ಹೆಸರಿದ್ದರೂ ಹೆಚ್ಚಾಗಿ ಮುಧೋಳದಲ್ಲಿ ಕಾಣಸಿಗುವದು ಮತ್ತು ಅಭಿವೃದ್ಧಿ ಹೊಂದುತ್ತಿದೆ ಈ ನಾಯಿಗೆ ಮುಧೋಳ ನಾಯಿ ಎಂದೇ ಕರೆಯುವುದು ರೂಢಿಯಲ್ಲಿದೆ.
ನಿಯತ್ತು:
ನಾಯಿಯ ನಿಯತ್ತು ಎಂದು ಹೇಳುವ ಸಂದರ್ಭದಲ್ಲಿ ಬಹುಷ್ಯ ಈ ನಾಯಿಯನ್ನು ನೋಡಿಯೇ ಅಂದಿರಬೇಕು ಎಂದು ಅನ್ನಿಸುವಷ್ಟು ನಿಯತ್ತು ಈ ನಾಯಿಗಿದೆ.ಈ ನಾಯಿಯ ಮಾಲಿಕನ ಆಜ್ಞೆಯನ್ನು ಎಷ್ಟು ಪಾಲಿಸುತ್ತದೆ ಎಂದರೆ ಒಂದು ತುತ್ತು ಅನ್ನವನ್ನು ಮಾಲಿಕ ತಿನ್ನು ಎನ್ನುವವರೆಗೆ ಅದು ತಿನ್ನುವದಿಲ್ಲ.
ಇಂತಹ ಅಪರೂಪದ ನಾಯಿ ಭಾರತದ ಯಾವೂದೇ ಮೂಲೆಯ ಹವಾಮಾನಕ್ಕೆ ಹೊಂದಿಕೊಳ್ಳುವದು,ಇದರ ಕಣ್ಣುಗಳು ಬಹು ಚುರುಕಾಗಿದ್ದು ಒಂದು ಚಿಕ್ಕ ಪ್ರಾಣಿಯೂ ಸಹ ಇದರಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗುವದಿಲ್ಲ ತನ್ನ ಹಿಂದಿರುವ ಪ್ರಾಣಿಗಳನ್ನು ಸಹ ಗ್ರಹಿಸುವ ಶಕ್ತಿ ಇದಕ್ಕಿದ್ದು 270 ಡಿಗ್ರಿ ದೃಷ್ಠಿ ಇದೆ ಎಂದು ಶ್ವಾನ ಪ್ರಿಯರು ಹೇಳುತ್ತಾರೆ.
ಹೇಗಿರುತ್ತದೆ ಮುಧೋಳ ಹೌಂಡ್:
ವಿಶ್ವದ 332 ಶ್ವಾನ ತಳಿಗಳು ಇದ್ದು ಇವುಗಳಲ್ಲಿ ಬಹುಪಾಲು ವಿದೇಶಿ ತಳಿಗಳೇ ಹೆಚ್ಚಾಗಿವೆ. ಭಾರತದ ಪ್ರಸಿದ್ದು 20 ತಳಿಗಳಲ್ಲಿ ಮುಧೋಳ ಹೌಂಡ್ ಮುಂಚೂಣೆಯಲ್ಲಿದೆ. ಬಲಿಷ್ಠವಾದ ಸ್ನಾಯು ಹಾಗೂ ದೇಹಗಳಿಂದ ಕೂಡಿದ ತೆಳ್ಳನೆ ಶರೀರ , ತೀಕ್ಷ್ಣ ಕಣ್ಣು, ಅಗಲವಾದ ತಲೆ ಬುರುಡೆ, ಚೂಪಾದ ಹಲ್ಲು ಮತ್ತು ಒಸಡು ಹಾಗೂ ಆಳವಾದ ಎದೆ ಮತ್ತು ನೀಳವಾದ ಕಾಲು, ಉದ್ದನೆ ಉಗುರು, ಉದ್ದ ಬಾಲ, ಹೊಟ್ಟೆಯಿಂದ ಮುಂದೆ ದಪ್ಪ, ಹಿಂದಿನ ಭಾಗ ಸಣ್ಣಗೆ ತೆಳ್ಳಗೆ ಇರುತ್ತಿದೆ, ಹಿಂಗಾಲು ನೆಲಕ್ಕೆ ತಾಗಿಸಿ ಕೂಡುವದು. ಈ ನಾಯಿಗಳ ಬಣ್ಣ ಹೆಚ್ಚಾಗಿ ಬಿಳಿಯ ಬಣ್ಣ ಹೊಂದಿದರೂ ಸಹ ಭೂದುಗಪ್ಪು, ಬಿಳಿ ಕಂದು ಬಣ್ಣಗಳಲ್ಲಿಯೂ ಇರುತ್ತವೆ. 25ರಿಂದ 28 ಇಂಚು ಎತ್ತರ 25ರಿಂದ 35 ಕೆಜಿ ತೂಕವನ್ನು ಹೊಂದಿರುತ್ತದೆ.
ಈ ಬೇಟೆ ನಾಯಿಯ ವಯಸ್ಸು ಸುಮಾರು 12ರಿಂದ 14ವರ್ಷ ಒಟ್ಟು 18ತಿಂಗಳಲ್ಲಿ ಪರಿಪೂರ್ಣವಾಗಿ ಬೆಳವಣಿಗೆ ಕಾಣುತ್ತದೆ. ಕಣ್ಣುಗಳು ತೀಕ್ಷಣವಾಗಿರುವ ಈ ನಾಯಿಗೆ ಕನ್ನಡ,ಮರಾಠಿ ಭಾಷೆ ಅರ್ಥವಾಗುತ್ತದೆ.ಮನುಷ್ಯರಿಗಿಂತ ಬೇಗವಾಗಿ ಭಾಷೆಯನ್ನು ಅರ್ಥಮಾಡಿಕೊಳ್ಳುವ ಗ್ರಹಣ ಶಕ್ತಿ ಇರುವದು ಇದರ ವಿಶೇಷ. ಇವುಗಳ ಮುಖ್ಯ ಗುಣ ಬೇಟೆಯಾಡುವದು ಈ ಕಾರಣಕ್ಕಾಗಿ ಇತಿಹಾಸ ಪ್ರಸಿದ್ದು ಹಲಗಲಿ ಬೇಡರು ಈ ನಾಯಿಯನ್ನು ಬೇಟೆಗೆ ಬಳಿಸಿಕೊಳ್ಳುತ್ತಿದ್ದರು.
ವರ್ಷದಲ್ಲಿ ಎರಡು ಬಾರಿ ಮರಿ ಹಾಕುವದರಿಂದ ಜೂನ್ ಮತ್ತು ನವೆಂಬರ್ ತಿಂಗಳಲ್ಲಿ ಸಾಕಷ್ಟು ನಾಯಿಗಳು ಸಿಗುತ್ತವೆ.ಈ ನಾಯಿಗೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ,ಉತ್ತರ ಪ್ರದೇಶ,ಗುಜರಾತ,ಹರಿಯಾಣ,ದೇಹಲಿ ಮತ್ತು ರಾಜಸ್ತಾನಗಳಲ್ಲೂ ಬಾರಿ ಬೇಡಿಕೆ ಇದೆ.
ತಳಿ ಅಭಿವೃದ್ಧಿ:
ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ಮುಧೋಳ ಬೇಟೆ ನಾಯಿ ಇಂತಹ ತಳಿಯನ್ನು ಮುಧೋಳದ ಘೋರ್ಪಡೆ ಮಹಾರಾಜರ ಕಾಲದಲ್ಲಿ ಅಭಿವೃದ್ಧಿಯಾದ್ದು,ಮುಂದುವರೆದು ಈಗಲೂ ಮುಧೋಳ ತಾಲ್ಲೂಕಿನ ಕಿಶೋರಿ, ಹಲಗಲಿ ಸೇರಿದಂತೆ ಸುಮಾರು 175 ಕುಟುಂಬಗಳು ಈ ನಾಯಿಯ ತಳಿ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದು ತಮ್ಮ ಉಪಜೀವನವನ್ನು ಸಾಗಿಸುತ್ತಿದ್ದಾರೆ.
ಜೊತೆಗೆ ತಾಲ್ಲೂಕಿನ ತಿಮ್ಮಾಪೂರ ಬಳಿಯಲ್ಲಿ ಸುಮಾರು 40 ಎಕರೆ ವಿಶಾಲವಾದ ಪ್ರದೇಶದಲ್ಲಿ ಶ್ವಾನ ಅಭಿವೃದ್ಧಿ ಹಾಗೂ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು ಈಗ ಅಲ್ಲಿ ಸುಮಾರು ಎಲ್ಲ ವಯೋಮಾನದ 85 ನಾಯಿಗಳಿವೆ. ಇಲ್ಲಿ ಬೀದರ ಪಶು ವಿಶ್ವವಿದ್ಯಾಲಯದ ಡಾ ಮಹೇಶ ಇತರ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ವೆಂಕಟೇಶ ಪಾಂ. ಗುಡೆಪ್ಪನವರ.
ಸಂಶೋಧನಾ ವಿದ್ಯಾರ್ಥಿ.
ಕನ್ನಡ ವಿಶ್ವವಿದ್ಯಾಲಯ ಹಂಪಿ.
(ಉತ್ತೂರ) ತಾ.ಮುಧೋಳ-587313 ಜಿಲ್ಲಾ:ಬಾಗಲಕೋಟ.
ಮೋ.9902457371.