ಅಂಕಣ

ಹಣದ ಗಳಿಕೆ ಬಳಕೆ ಉಳಿಕೆ ಹೀಗೆ ಮಾಡಿ ಖುಷಿಯಾಗಿರಿ…

ಲೇಖಕಿ ಜಯಶ್ರೀ ಅಬ್ಬಿಗೇರಿ ಅವರ ‘ಜಯಾಂತರಂಗ’ ಕಾಲಂ ಆರಂಭ

ಯಾರಿಗೆ ಸಾಲುತ್ತೆ ಸಂಬಳ? ಕೈಯಲ್ಲಿ ಎಷ್ಟು ದುಡ್ಡಿದ್ದರೂ ಸಾಲುದಿಲ್ಲ ಮೊದಲಿಗೆನ ದುಬಾರಿ ಕಾಲ ಕಂಡದ್ದನ್ನೆಲ್ಲ ತೆಗೆದುಕೊಳ್ಳಬೇಕು ಅನ್ನೋ ಮನಸ್ಸು. ತಿಂಗಳದ ಕೊನೆಗೆ ಮತ್ತೆ ಅವರ ಇವರನ ಕೈಸಾಲ ಕೇಳಬೇಕು. ಸಾಕ್ ಸಾಕಾಗಿ ಹೋಗೆದ ಅನ್ನೋದು ಬಹಳ ಜನರ ಅಂಬೋಣ. ಅದರಲ್ಲೂ ಸಂಸಾರದಲ್ಲಿ ಒಬ್ಬರೇ ದುಡಿಯುವವರಿದ್ದರೆ, ಅಯ್ಯೋ! ಅವರ ಗೋಳು ಮನದ ಹಿಂಸೆ ಹೇಳ ತೀರದು. ಎಲ್ಲ ಖರ್ಚುಗಳನ್ನು ನಿಭಾಯಿಸುವದರೊಳಗೆ ಹೆಣ ಬಿದ್ದು ಹೋಯಿತು ಎನ್ನುವ ಉದ್ಗಾರ ಹೊರ ಬೀಳುತ್ತೆ. ಈ ಹಣ ನಮ್ಮ ಜೀವ ತಿಂದು ಜೀರಗಿ ಅರಿಯುತ್ತೆ ಎನ್ನುವುದು ಮನೆಯ ಯಜಮಾನರ ಅಳಲು.

ಈ ಎಲ್ಲಾ ಮಾತುಗಳನ್ನು ಕೇಳಿದರೆ ಹಣ ಗಳಿಸುವುದು ಎಷ್ಟು ಮುಖ್ಯವೋ ಅದನ್ನು ಬೇಕಾದಷ್ಟೇ ಖರ್ಚು ಮಾಡಿ ಉಳಿಸುವುದು ಅಷ್ಟೇ ಮುಖ್ಯ ಎನ್ನುವುದು ತಿಳಿಯುತ್ತದೆ. ಸಂಪಾದಿಸಿದ್ದನ್ನು ಖರ್ಚು ಮಾಡುವುದು ಒಂದು ಕಲೆ.ಬದುಕೇ ಒಂದು ಕಲೆಗಳ ಆಗರ ಹಣ ಕೈಯಲ್ಲಿದ್ದಾಗ ನೀರಿನಂತೆ ಹರಿಸಿ ನಂತರ ಗೋಳಾಡುವುದಕ್ಕಿಂತ, ಕೈಯಲ್ಲಿರುವುದನ್ನು ಎಷ್ಟೆಷ್ಟು ಯಾವುದಕ್ಕಾಗಿ ಬಳಸಬೇಕು ಎಂದು ತಿಳಿದು ಖರ್ಚು ಮಾಡಿದರೆ ಜೀವನ ಸಲೀಸು ಎನಿಸುತ್ತದೆ.

ತಮಗೆಲ್ಲ ಗೊತ್ತಿದ್ದಂತೆ ನಾವು ಹಣವನ್ನು ನಮ್ಮ ಅಗತ್ಯಗಳ ಪೂರೈಕೆಗೆ ಸಂತೋಷಕ್ಕೆ ಮತ್ತೆ ನಮ್ಮ ಜೊತೆಯಿರುವ ಜೀವಗಳ ನೆಮ್ಮದಿ ಆನಂದಕ್ಕೆ ಬಳಸುತ್ತೇವೆ. ಕಮ್ಮಿ ಹಣ ಇದ್ದಾಗ ಹೆಚ್ಚು ಸಂತೋಷ ಪಡೋಕೆ ಆಗುವುದಿಲ್ಲ ಎನ್ನೋದು ಬಹಳ ಜನರ ನಿಲುವು. ಆದರೆ ಖರ್ಚು ಮಾಡುವ ಕಲೆಯನ್ನು ಕರಗತ ಮಾಡಿಕೊಂಡರೆ ಕಡಿಮೆ ಹಣದಲ್ಲಿ ಹೆಚ್ಚು ಅಗತ್ಯತೆ ಪೂರೈಸಿಕೊಳ್ಳಬಹುದು ಮತ್ತು ಹೆಚ್ಚು ಖುಷಿಯಾಗಿರಬಹುದು. ಅದ್ಹೇಗೆ ಅಂತೀರಾ?

ಹೀಗೆ ಮಾಡಿ ನೋಡಿ
ವೀಕೆಂಡ್ ವಾರದ ಐದಾರು ದಿನ ದುಡಿದ ದೇಹಕ್ಕೆ ವೀಕೆಂಡ್‍ನಲ್ಲಿ ಮೋಜು ಮಸ್ತಿ ಮಾಡಿಸಿ ಖುಷಿ ಪಡಿಸಬೇಕು ಅನ್ನೋ ನಿಯಮ ಪಾಲಿಸುತ್ತ ಕೈಯಲ್ಲಿರುವ ಕಾರ್ಡನ್ನು ಉಜ್ಜಿ ಹೆಚ್ಚು ಖರ್ಚು ಮಾಡಿ ತಿಂಗಳ ಕೊನೆಗೆ ಮುಖ ಒಣಗಿಸಿಕೊಂಡು ಅಡ್ಡಾಡುವುದು ತರವಲ್ಲ. ನಮ್ಮಂಥ ಬಕರಾಗಳನ್ನು ತಮ್ಮ ಲಾಭದ ಬುಟ್ಟಿ ತುಂಬಿಸಿಕೊಳ್ಳಲು ಬಳಸಿಕೊಳ್ಳುವ ಮಾರ್ಕೆಟಿಂಗ್ ಟ್ರಿಕ್ಸಗಳಾದ ಡಿಸ್ಕೌಂಟ್ ಸೇಲ್,ವಿವಿಧ ಆಫರ್ಸ್, ಮೊದಲು ಅನುಭವಿಸಿ ನಂತರ ಹಣ ಜಮಾ ಮಾಡಿ ಎಂಬ ಕ್ರೆಡಿಟ್ ಕಾರ್ಡಿನ ಕ್ಯಾಶ್ ಲೆಸ್ ಶಾಪಿಂಗ್ ಮೋಹಕತೆಯ ಬಲೆಯಲ್ಲಿ ಬಿದ್ದರೆ ನಮಗೆ ಕುತ್ತು ಖಚಿತ. ವೀಕೆಂಡ್ ಮಸ್ತಿಗೆ ಲಗಾಮು ಹಾಕಿ ಮಿತಿಯಲ್ಲಿಟ್ಟುಕೊಳ್ಳುವುದು ಒಳಿತು.

ತಿಂಗಳಿಗೊಮ್ಮೆ ಕುಟುಂಬದೊಂದಿಗೆ ಸಿನಿಮಾ ಪಾರ್ಕ್ ಸುತ್ತಾಟವೂ ಹಣ ಉಳಿಕೆಯಲ್ಲಿ ನೆರವಾಗುವುದರ ಜೊತೆಗೆ ಮನಸ್ಸನ್ನು ನೆಮ್ಮದಿಯಿಂದ ಇಡಲು ಸಹಕರಿಸುವುದು. ಕಂಗೊಳಿಸುವ ವಸ್ತುಗಳಿಗೆ ಮಾಲ್‍ಗಳಿಗೆ ಭೇಟಿ ನೀಡಿ ಕೃತಕ ಬೆಳಕಿನಲ್ಲಿ ಕಣ್ಣು ಕೋರೈಸುವ ಅಗತ್ಯವಿರದ ವಸ್ತುಗಳಿಗೆಲ್ಲ ಕೈ ಹಾಕಿ ತಂದು ಮನೆಯಲ್ಲಿ ಸುರಿಯುವ ಅಭ್ಯಾಸಕ್ಕೆ ಕಡಿವಾಣ ಹಾಕಿ. ವಸ್ತುಗಳು ನೀಡುವ ಸುಖ ಕ್ಷಣಿಕ. ಹನಿ ಹನಿ ಕೂಡಿದರೆ ಹಳ್ಳ ತೆನೆ ತೆನೆ ಕೂಡಿದರೆ ಬಳ್ಳ ಎನ್ನುವಂತೆ ಇಂಥ ಬೇಡದ ವಸ್ತುಗಳ ಕೊಳ್ಳದೇ, ತಿಂಗಳ ಖರ್ಚಿನ ನಂತರ ಕೈಯಲ್ಲಿ ಉಳಿದ ಹಣವನ್ನು ಮಕ್ಕಳ ಅಥವಾ ನಿಮ್ಮ ಹೆಸರಿನಲ್ಲಿ ಭವಿಷ್ಯದ ಯೋಜನೆಗಳಿಗೆ(ಮನೆ ಕಟ್ಟಿಸುವುದು ಅಥವಾ ಮಕ್ಕಳ ಶಿಕ್ಷಣ ಮದುವೆ) ಬ್ಯಾಂಕಿನಲ್ಲಿಡಿ. ಕೆಲವು ಪಾಲಿಸಿಗಳಲ್ಲಿ ಹಣ ಹೂಡಿ. ನಿಮ್ಮ ಅಗತ್ಯಕ್ಕನುಸಾರವಾಗಿ ಅಲ್ಪಾವಧಿಗೆ ಅಥವಾ ಧೀರ್ಘಾವಾಧಿಗೆ. ಹಣ ತೊಡಗಿಸುವ ಮುನ್ನ ಅವಸರ ಬೇಡ. ಉಳಿತಾಯ ಮಾಡುವ ವಿಭಿನ್ನ ಮಾಹಿತಿವುಳ್ಳ ತಜ್ಞರ ಸಲಹೆ ಪಡೆಯುವುದು ಉತ್ತಮ.

ನಮ್ಮದೇನು ಸಣ್ಣ ಉಳಿತಾಯ ಎಂದು ಯಾವುದೋ ಒಂದು ಲಾಭವಿರದ ಯೋಜನೆಯಲ್ಲಿ ಹಣ ಹೂಡಬೇಡಿ. ಮುಂದೊಂದು ದಿನ ಈ ಸಣ್ಣ ಉಳಿತಾಯವೇ ದೊಡ್ಡದಾಗಿ ನಿಮ್ಮ ಕೈ ಹಿಡಿಯುತ್ತೆ ನೆನಪಿರಲಿ. ಬಿಡುವಾಗಿರುವ ಸಮಯದಲ್ಲಿ ಅಲ್ಲಿ ಇಲ್ಲಿ ತಿರುಗಾಡಿ ಬೇಕರಿ ಸಾಮಾನುಗಳನ್ನು ಮನೆ ಮಂದಿಗೆಂದು ಖರೀದಿಸಿ ಚಾಟ್‍ವಾಲಾಗಳ ಅಂಗಡಿ ಮುಂದೆ ಹೊಟ್ಟೆಗೆ ಬೇಡವಾಗಿದ್ದರೂ ಶೋಕಿಗೆಂದು ತಿಂದು ಬರುವುದಕ್ಕಿಂತ ಆರೋಗ್ಯ ವೃದ್ಧಿಸುವ ಹಣ್ಣು ಹಾಲು ತರಕಾರಿಗಳನ್ನು ತನ್ನಿ. ವಾರಗಟ್ಟಲೇ ತಿಂದು ಆರಾಮವಾಗಿರಿ.

ಆರೋಗ್ಯ ಕೆಡಿಸಿಕೊಂಡರೆ ಹಣದ ಜೊತೆ ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ. ದಿನದ ಕೆಲಸಕ್ಕೆ ಆಗಿ ನಿಮಗೆ ಸಮಯ ಉಳಿಯುತ್ತಿದ್ದರೆ ನಿಮ್ಮ ಮನೆಯ ಕೆಲಸಗಳನ್ನು ಪ್ರತಿಷ್ಠೆಗೆಂದು ಬೇರೆಯವರ ಕಡೆ ಮಾಡಿಸುವುದನ್ನು ಬಿಡಿಸಿ ನೀವೇ ಮಾಡಿಕೊಳ್ಳುವುದರಿಂದ ಹಣವೂ ಉಳಿಯುತ್ತದೆ. ದೇಹಕ್ಕೂ ಶ್ರಮ ನೀಡಿದಂತಾಗುತ್ತದೆ. ಸ್ನೇಹಿತರೊಂದಿಗೆ ಹಾಳು ಹರಟೆಯಲ್ಲಿ ಕಾಲ ಕಳೆಯುವುದಕ್ಕಿಂತ ಸಿಕ್ಕ ಸಮಯದಲ್ಲಿ ಪಾರ್ಟ್ ಟೈಂ ಕೆಲಸ ಮಾಡಿದರೆ ಕುಟುಂಬಕ್ಕೆ ಆದಾಯವೂ ಹೆಚ್ಚಾಗುತ್ತದೆ ನೀವೂ ಚುರುಕಾಗಿ ಉಲ್ಲಸಿತರಾಗಿರುತ್ತೀರಿ.

ಹೆಚ್ಚು ಗಳಿಕೆ ಹೆಚ್ಚು ಸಂತಸ ಹೆಚ್ಚು ಗಳಿಕೆಯಿದ್ದರೆ ಮಾತ್ರ ಹೆಚ್ಚು ಸಂತೋಷ ಸಿಗುತ್ತೆ ಅನ್ನುವುದು ನಮ್ಮಲ್ಲಿರುವ ಭ್ರಮೆ ವಾಸ್ತವದಲ್ಲಿ ಹೆಚ್ಚು ಸಂಪಾದನೆಯ ಬೆನ್ನು ಹತ್ತಿದವರು ನಿಜ ಜೀವನದ ಸಂತಸವನ್ನು ಅನುಭವಿಸುವಲ್ಲಿ ಹೆಚ್ಚು ವಿಫಲರಾಗಿರುತ್ತಾರೆ ಎನ್ನುವುದು ಸಮೀಕ್ಷೆಯೊಂದರ ವರದಿ. ಹೆಚ್ಚು ಗಳಿಸಬೆಕೆಂಬ ಒತ್ತಡದಲ್ಲಿ ಬದುಕಿನ ಸಣ್ಣ ಪುಟ್ಟ ವಿಷಯಗಳಲ್ಲಿ ಸಿಗುವ ಸಂತೋಷವನ್ನು ಆಸ್ವಾದಿಸಲು ಸಾಧ್ಯವಾಗುವುದಿಲ್ಲ. ಮಾಡುವ ಕೆಲಸವನ್ನು ಶ್ರದ್ಧೆಯಿಂದ ಇಷ್ಟ ಪಟ್ಟು ಮಾಡಿದರೆ ಹಣದ ಜೊತೆ ಸಂತಸವೂ ದೊರೆಯುವುದು.

ಬಡ್ಜೆಟ್ ಸಿದ್ಧ ಪಡಿಸಿ ಬರೋ ಇಷ್ಟು ಸಂಬಳಕ್ಕೆ ಬಡ್ಜೆಟ್ ಸಿದ್ಧ ಪಡಿಸಿಕೊಳ್ಳುವುದಾ? ಅಂತ ಹುಬ್ಬೇರಿಸಬೇಡಿ.ಪ್ರತಿ ತಿಂಗಳಕ್ಕೆ ಹಾಲು ಕಾಯಿಪಲ್ಲೆ,ಬೇಳೆ ಕಾಳು ಪೇಪರ್ ಪೆಟ್ರೋಲ್ ಲೈಟ್ ಬಿಲ್ ಮನರಂಜನೆಯ ಖರ್ಚು ಹೀಗೆ ಬರೆದಾಗ ಒಂದು ಅಂದಾಜು ಲೆಕ್ಕ ಸಿಗುವುದು ಇದರೊಂದಿಗೆ ಅನಿರೀಕ್ಷಿತ ಖರ್ಚುಗಳಿಗೆ ಒಂದಿಷ್ಟು ಹಣವನ್ನು ಎತ್ತಿಟ್ಟು ಉಳಿದ ದುಡ್ಡನ್ನು ಭವಿಷ್ಯಕ್ಕೆ ಉಳಿತಾಯ ಮಾಡಬೇಕು. ಕೆಲ ಜನ ಉಳಿತಾಯ ಮಾಡಬೇಕೆಂದು ದೈನಂದಿನ ಖರ್ಚಿಗೆ ಇಟ್ಟುಕೊಳ್ಳದೇ ಒದ್ದಾಡುವವರೂ ಇದ್ದಾರೆ.

ಹೀಗೆ ಬಡ್ಜೆಟ್ ಮಾಡಿಕೊಳ್ಳುವುದರಿಂದ ಹಣ ಅನಗತ್ಯವಾಗಿ ಪೋಲಾಗುವದವನ್ನು ತಡೆಯಬಹುದು. ಹಣದ ಖರ್ಚಿನ ಸ್ಪಷ್ಟತೆಯೂ ಅರಿವಿಗೆ ಬರುತ್ತದೆ. ಟೂ ವ್ಹೀಲರ್ ಫೋರ್ ವ್ಹೀಲರ್ ಸಾಮಾಜಿಕ ಪ್ರತಿಷ್ಠೆಗೆಂದು ಮೇಲಿಂದ ಮೇಲೆ ಬೈಕ್ ಮತ್ತು ಕಾರುಗಳನ್ನು ಬದಲಾಯಿಸಿ ಹೊಸದು ಕೊಂಡುಕೊಳ್ಳುವುದು ಅಥವಾ ಅವಶ್ಯಕತೆ ಇಲ್ಲದಿದ್ದಾಗಲೂ ಸಾಲ ಮಾಡಿ ಮನೆಯ ಮುಂದೆ ಫೋರ್ ವ್ಹೀಲರ್ ನಿಲ್ಲಿಸುವುದು ಆರ್ಥಿಕ ತಜ್ಞರ ಪ್ರಕಾರ ನಿಜಕ್ಕೂ ಮೂರ್ಖತನವೇ ಸರಿ. ಹೀಗೆ ಫ್ಯಾಷನ್ ಟ್ರೆಂಡ್‍ಗೆ ಬಲಿಯಾಗಿ ಕೊಂಡ ಕಾರು ಬೈಕ್‍ಗಳನ್ನು ರೀಸೇಲ್ ಮಾಡಲು ಹೋದರೆ ನಷ್ಟ ಅನುಭವಿಸುವುದೇ ಹೆಚ್ಚು.

ಹೀಗೆ ಲಕ್ಷಗಟ್ಟಲೇ ಹಣವನ್ನು ಹೂಡುವಾಗ ನಿಜಕ್ಕೂ ನಮಗೆ ಆ ವಸ್ತುವಿನ ಅಗತ್ಯತೆ ಅಷ್ಟೊಂದಿದೆಯೇ? ಎಂಬುದನ್ನು ಲೆಕ್ಕ ಹಾಕಬೇಕು. ಹೀಗೆ ಅಗತ್ಯವಿರದ ವಸ್ತುಗಳ ಕೊಂಡು ನೆರಳುವುದಕ್ಕಿಂತ ಬಂಧು ಮಿತ್ರರ ಸಂಕಷ್ಟಕ್ಕೆ ಆದರೆ ಮಧುರ ಬಾಂಧವ್ಯದ ಸವಿ ಅನುಭವಿಸಬಹುದು. ಅಸಹಾಯಕರಿಗೆ ನೆರವಾದರೆ ಆನಂದವೂ ಸಿಗುವುದು. ಈ ರೀತಿಯ ನೆರವು ನಮ್ಮ ಕಷ್ಟದ ಕಾಲಕ್ಕೆ ಮರಳುವ ಸಾಧ್ಯತೆಗಳೂ ಇಲ್ಲದಿಲ್ಲ.
ಜಗತ್ತಿನ ದೊಡ್ಡ ಶ್ರೀಮಂತ ಎಂದೇ ಹೆಸರಾಗಿರುವ ವಾರೆನ್ ಬಫೆಟ್ ಪ್ರಕಾರ ಗಳಿಸುವುದಕ್ಕಿಂತ ಸರಿಯಾದ ಮಾರ್ಗದಲ್ಲಿ ಬಳಸುವುದು ಮತ್ತು ಉಳಿಸುವುದು ಮಹತ್ವ ಪಡೆದಿವೆ.

ಬಫೆಟ್ ದೃಷ್ಟಿಯಲ್ಲಿ ಹೇಳುವುದಾದರೆ ಸೇವೆಯೂ ಒಂದು ಬಂಡವಾಳ. ಹೀಗಾಗಿ ತನ್ನ ಗಳಿಕೆಯ ಅಧಿಕ ಭಾಗವನ್ನು ಸೇವೆಗೆ ಹಂಚಿದ್ದಾರೆ. ಹೀಗೆ ಅಸಹಾಯಕರಿಗೆ ದುರ್ಬಲರಿಗೆ ಹಂಚುವದರಿಂದ ಸಿಗುವ ಆನಂದ ಗಳಿಸಿ ನಮಗಾಗಿ ಕೂಡಿಡುವುದರಲಿಲ್ಲ ಇನವೆಸ್ಟಿಂಗ್ ಫಾರ್ ಅದರ್ಸ್ ನಮಗೆ ಹೆಚ್ಚು ಮಹದಾನಂದ ನೀಡುತ್ತದೆ. ಸಾಮಾಜಿಕ ಹೊಣೆ ಹೊತ್ತು ಇನ್ನಷ್ಟು ಗಳಿಸುವ ಬಳಸುವ ಬೆಳೆಸುವ ಇರಾಧೆ ಹೆಚ್ಚುತ್ತದೆ. ಹೀಗೆ ಮಾಡಿ ನೋಡತಿರಾ??

ಜಯಶ್ರೀ.ಜೆ.ಅಬ್ಬಿಗೇರಿ, ಲೇಖಕರು.

ಆಂಗ್ಲ ಭಾಷಾ ಉಪನ್ಯಾಸಕರು.
ಸ.ಪ.ಪೂ ಕಾಲೇಜು ಹಿರೇಬಾಗೇವಾಡಿ.
ತಾ:ಜಿ: ಬೆಳಗಾವಿ -591109
9449234142.

Related Articles

Leave a Reply

Your email address will not be published. Required fields are marked *

Back to top button