ಪತ್ನಿ ಕೊಲೆಗೈದು ಬೈಕ್ ಮೇಲೆ ಶವ ತಂದು ಜಿಲ್ಲಾ ಆಸ್ಪತ್ರೆಯಲ್ಲಿ ಬಿಸಾಕಿ ಹೋದ ಭೂಪ
ಯಾದಗಿರಿಃ ಬೈಕ್ ಮೇಲೆ ಹೊತ್ತು ತಂದ ಶವ, ಸಿಸಿ ಕ್ಯಾಮೆರಾದಲ್ಲಿ ಸೆರೆ
ರುಕ್ಮಾಪುರದ ಶಾಂತಮ್ಮ-ಖಾನಾಪುರದ ವೆಂಕಟೇಶ ಪ್ರೇಮ ವಿವಾಹ ಕೊಲೆಯಲ್ಲಿ ಅಂತ್ಯ
ಯಾದಗಿರಿಃ ಪ್ರೇಮಿಸಿ ವಿವಾಹವಾಗಿದ್ದ ಪತ್ನಿಯನ್ನೆ ಕೊಂದ ಪತಿಯೊಬ್ಬ ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಬೈಕ್ ಮೇಲೆ ಶವ ತಂದು ಬಿಸಾಕಿ ಹೋದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಶಾಂತಮ್ಮ (28) ಕೊಲೆಯಾದ ಮಹಿಳೆ. ಬೆಂಗಳೂರಿನ ಗಾರ್ಮೆಂಟ್ಸ್‍ವೊಂದರಲ್ಲಿ ಕೆಲಸ ಮಾಡುವಾಗ ಇಬ್ಬರ ಮಧ್ಯೆ ಪ್ರೇಮ ಬೆಳೆದು ವಿವಾಹವಾಗಿದ್ದರು ಎನ್ನಲಾಗಿದೆ.
ಶಾಂತಮ್ಮಳಿಗೆ ಈ ಮೊದಲು ಮದುವೆಯಾಗಿ ಮೂರು ಮಕ್ಕಳಿದ್ದರು, ವೆಂಕಟೇಶ ಎಂಬಾತ ಶಾಂತಮ್ಮಳನ್ನು ಪ್ರೀತಿಸಿ ಮದುವೆಯಾಗಿದ್ದ ಎನ್ನಲಾಗಿದೆ.
ಕೌಟುಂಬಿಕ ಕಲಹಗಳಿಗೆ ಬೇಸತ್ತು ನಿನ್ನೆ ರಾತ್ರಿ ಶಾಂತಮ್ಮಳನ್ನು ಕೊಲೆಗೈದು ತನ್ನ ಬೈಕ್ ಮೇಲೆಯೇ ಪತ್ನಿ ಶವ ಹೊತ್ತು ತಂದು ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹಾಕಿ ಆರೋಪಿ ಪತಿ ವೆಂಕಟೇಶ ಪರಾರಿಯಾಗಿದ್ದಾನೆ.
ಬೈಕ್ ಮೇಲೆ ಶವ ಹೊತ್ತು ತರುತ್ತಿರುವುದು ಇಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಪತ್ತೆ ಮಾಡಿದ್ದಾರೆ.
ಕೊಲೆಯಾದ ಶಾಂತಮ್ಮ ಜಿಲ್ಲೆಯ ಸುರಪುರ ತಾಲೂಕಿನ ರುಕ್ಮಾಪುರ ಗ್ರಾಮದ ನಿವಾಸಿ ಎನ್ನಲಾಗಿದೆ. ಆರೋಪಿ ಪತಿ ವೆಂಕಟೇಶ ಜಿಲ್ಲೆಯ ಶಹಾಪುರ ತಾಲೂಕಿನ ಖಾನಾಪುರ ಗ್ರಾಮದ ನಿವಾಸಿಯಾಗಿದ್ದು, ರಾತ್ರಿ ಘಟನೆ ನಡೆದಿರುವುದು ಖಾನಾಪುರ ಗ್ರಾಮದ ಅವರ ಮನೆಯಲ್ಲಿ ಎಂದು ತಿಳಿದು ಬಂದಿದೆ.
ಪತಿ-ಪತ್ನಿ ಮಧ್ಯೆ ನಡೆದ ಗಲಾಟೆಯಲ್ಲಿ ಕೊಲೆಯಾದ ಪತ್ನಿ ಶಾಂತಮ್ಮಳನ್ನು ಆಸ್ಪತ್ರೆಗೆ ತಂದು ಹಾಕಿದ್ದಾನೆ ಎನ್ನಲಾಗಿದೆ. ಈ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರ ಸೂಕ್ತ ತನಿಖೆಯ ನಂತರವೇ ಸಂಪೂರ್ಣ ಘಟನೆಯ ಸತ್ಯಾಂಶ ಹೊರಬರಲಿದೆ.