ನಿನ್ನ ಪ್ರೀತಿಯಿಂದ ಕಾಣುವ ಒಂಟಿ ಸಲಗ ನಾನು
ನೀ ಸತ್ಯ ನಾ ನಿತ್ಯ ಕಾಯಕ
ಕೇಳೆನ್ನ ಮನದಾಳ ಓ ನನ್ನ ಪೆದ್ದು
ಕಷ್ಟ ಸುಖ ನೋವು ನಲಿವು
ನೀ ನನ್ನ ಅರ್ಧಾಂಗಿ ಸಮಪಾಲು
ನಿನ್ನ ಇನ್ನೂ ಅರ್ಧ ನಾ ಸಮಬಾಳು
ಇಬ್ಬರು ಒಬ್ಬರಂತೆ ಒಂದಾಗಿ ಎಲ್ಲವೂ
ಹಂಚಿಕೊಂಡು ಸಾಗೋಣ ನಾವೆಂದೂ
ಸತ್ಯ ಸುಂದರಿ ಮೊದಲ ದಿನದಂದೇ
ಶುರು ನೋಡು ನನ್ನ ಕೆಲಸ
ಗುಡಿಸಿ ಒರೆಸಿ ನಸುಕಿನಲ್ಲೆ ಎದ್ದು
ಶುಚಿಗೊಳಿಸಿವೆ ಮನೆಯನ್ನೆಲ್ಲಾ
ನೀ ಏಳುವಾಗ ತಂದು ಕಾಫಿಯನ್ನ
ಕುಡಿಸಿ ಮುತ್ತನ್ನಿಟ್ಟು ಮುದ್ದಿಸುವೆ ನಿನ್ನ
ನೀ ನಕ್ಕಾಗ ಬಿಳಿ ದಾಳಿಂಬೆಗಳ ಜಾದೂ
ಮೆಲ್ಲಗೆ ಉಜ್ಜುವೆ ಪಳ ಪಳ ಅಂತ
ಅಂದಗಾತಿ ನಿನ್ನ ಮೈಯ ಮಾಟ ಕಂಡು
ಸುರಿಸಿ ಅಮೃತ ಬಿಂದು ತ್ವಚೆ ಕೋಮಲ
ನವಿರಾಗಿ ಮುಟ್ಟಿ ತಟ್ಟಿ ಸೀರೆ ಸುತ್ತಿ ಕಟ್ಟಿ
ನಾಚಿ ಕೆಂಪಾಗಿಸಿ ನಿನ್ನ ಕೆನ್ನೆಯನ್ನ
ನಾ ಹೇಳುವೆ ಹೀಗೆ ಒಂದು ಕವನವನ್ನ
ರೇಷ್ಮೆ ಎಳೆಗಳಿಗೆ ಮಲ್ಲಿಗೆಯ ವಯ್ಯಾರ
ಲಲ್ಲೆಗೆರೆದು ಮುಡಿಸಿ ಸ್ವಾದಿಸುವೆ ಚಂದನ
ನಿನಗಿಷ್ಟವಾದ ಅಡಿಗೆ ಮಾಡಿ ತಿನಿಸಿ
ಕಣ್ಣಲ್ಲಿ ಕಣ್ಣಿಟ್ಟು ಕಾಯುವೆ ನಿನ್ನ ಹಿತವನ್ನ
ಇಷ್ಟ ಕಷ್ಟ ಬೇಕು ಬೇಡಗಳ ತಿಳಿದು
ನಡೆದು ನಡೆಸುವೆ ನಿತ್ಯ ಕಾಯಕವನ್ನ
ನೋಡಿಕೊಳ್ಳುವೆ ಹೀಗೆ ಸದಾ ಚೆಂದ ನಿನ್ನ