ಇಂದು ಭಾರತಕ್ಕೆ ಡಬಲ್ ಧಮಾಕಾ – ಅದ್ಭುತ ಕ್ಷಣ ವೀಕ್ಷಿಸಲು ಭಾರತೀಯರ ಕಾತರ
ನ್ಯೂಯಾರ್ಕ್ : ಭಾರತೀಯರಿಗೆ ಜೂನ್ 9 ಇಂದು ರವಿವಾರ ಡಬಲ್ ಧಮಾಕಾ ಆಗಿದೆ. ಪ್ರಧಾನಿ ಮೋದಿ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ, ಇನ್ನೊಂದೆಡೆ ಭಾರತದ ಕ್ರಿಕೆಟ್ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಟಿ 20 ವಿಶ್ವಕಪ್‌ನ ಪಂದ್ಯವನ್ನು ಆಡಲಿದೆ. ಹೌದು, ಇಂದು ಸಂಜೆ ದೆಹಲಿಯಲ್ಲಿ ಮೋದಿ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಸಂಜೆ 7-15ಕ್ಕೆ ಪದಗ್ರಹಣ ಮಾಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಸರ್ವ ತಯಾರಿ ಮಾಡಿಕೊಳ್ಳಲಾಗಿದೆ. ಅತ್ತ ಅಮೆರಿಕಾದ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಭಾರತ ಮುಖಾಮುಖಿಯಾಗಲಿವೆ. 2024ರ ಟಿ 20 ವಿಶ್ವಕಪ್‌ನ ಅತಿದೊಡ್ಡ ಹಣಾಹಣಿಯು ಭಾರತ ಮತ್ತು ಪಾಕಿಸ್ತಾನ ನಡುವೆ ಇಂದು ನಡೆಯಲಿದೆ. ಭಾರತ-ಪಾಕಿಸ್ತಾನದ ಅಭಿಮಾನಿಗಳು ಮಾತ್ರವಲ್ಲದೆ ಇಡೀ ವಿಶ್ವವೇ ಈ ಅಮೋಘ ಪಂದ್ಯಕ್ಕಾಗಿ ಕಾಯುತ್ತಿದೆ. ಈ ಪಂದ್ಯದಲ್ಲಿ, ರೋಹಿತ್ ಶರ್ಮಾ ಅವರ ಮೆನ್ ಇನ್ ಬ್ಲೂ ಮತ್ತು ಬಾಬರ್ ಅಜಮ್ ಅವರ ಗ್ರೀನ್ ನಡುವಿನ ಪ್ರಬಲ ಪೈಪೋಟಿ ಏರ್ಪಟಿದೆ. ಟಿ 20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭಾರತ ಗೆದ್ದೆರೆ, ಪಾಕಿಸ್ತಾನ, ಯುಎಸ್‌ಎ ವಿರುದ್ಧ ಸೋಲು ಕಂಡಿದೆ. ಉಭಯ ತಂಡಗಳಲ್ಲಿ ಆಕ್ರಮಣಕಾರಿ ಬೌಲರ್‌ಗಳಿದ್ದು, ಯಾವ ಬೌಲರ್ ಅತಿ ಹೆಚ್ಚು ಅಪಾಯಕಾರಿ ಎಂಬುದು ಇಂದಿನ ಮೆಗಾ ಫೈಟ್‌ನಲ್ಲಿ ತಿಳಿಯಲಿದೆ. ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್ ತಂಡಗಳ ನಡುವಿನ ಈ ಮಹಾ ಘರ್ಷಣೆಯನ್ನು ವೀಕ್ಷಿಸಲು ಇಡೀ ಜಗತ್ತು ಸಿದ್ಧವಾಗಿದೆ. ರಾತ್ರಿ 8:00 ರಿಂದ ಈ ಪಂದ್ಯ ಆರಂಭವಾಗಲಿದೆ. ಈ ನಡುವೆ ಟೀಮ್ ಇಂಡಿಯಾ ಮಾಜಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಭಾರತ -ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕಾಗಿ ನ್ಯೂಯಾರ್ಕ್‌ಗೆ ತಲುಪಿದ್ದಾರೆ. ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಸಚಿನ್ ಆಗಾಗ್ಗೆ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಭಾರತದಿಂದ ಪ್ರಯಾಣ ಬೆಳೆಸಿರುವ ಸಚಿನ್ ಉಭಯ ತಂಡಗಳ ನಡುವಿನ ಕದನ ವೀಕ್ಷಿಸಲು ಮತ್ತೊಮ್ಮೆ ಅಮೆರಿಕ ತಲುಪಿದ್ದಾರೆ.