ಜೈಮಿನಿ ಮಹಾಭಾರತ ಕಾವ್ಯವನ್ನು ನಿತ್ಯ ವಾಚಿಸುವ ಕಲಾವಿದ ಕಾಳಪ್ಪ ಪತ್ತಾರ
ಮಹಾಕಾವ್ಯಗಳನ್ನು ಸ್ಪಟಿಕದಂತೆ ಪಠಿಸುವ ಕಲಾವಿದ ಕಾಳಪ್ಪ ಪತ್ತಾರ
ನಿತ್ಯ ಬೆಳಗ್ಗೆ 4 ಗಂಟೆಗೆ ಮಹಾಕಾವ್ಯ ಪಠಣ, ಪುರವಂತಿಕೆ ಕಲೆಯಲ್ಲೂ ಕರಗತ ಈ ಕಲಾವಿದ ಪತ್ತಾರ
ಇತಿಹಾಸ, ಸಾಹಿತ್ಯ, ಸಂಗೀತ, ನಾಟಕ ಮುಂತಾದ ಕ್ಷೇತ್ರಗಳಲ್ಲಿ ನಡೆದ ರಚನಾತ್ಮಕ ಕಾರ್ಯ ಚಟುವಟಿಕೆಗಳಿಗೆ ಶಹಾಪೂರ ಸಾಂಸ್ಕೃತಿಕ ಪರಿಸರದಲ್ಲಿ ತನ್ನದೇ ಆದ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಯಾದಗಿರಿ ಜಿಲ್ಲೆಯ ಶಹಾಪೂರ ತಾಲ್ಲೂಕು ಐತಿಹಾಸಿಕ ಪರಂಪರೆಯ ತಾಣವಾಗಿರುವ ದೋರನಹಳ್ಳಿ ಗ್ರಾಮದ ಸಾಂಸ್ಕೃತಿಕ ಸಮುದಾಯ ಪತ್ತಾರ ಮನೆತನದ ದಿ.ಘಂಟೆಪ್ಪ ಪತ್ತಾರ ಚಂದಮ್ಮ ದಂಪತಿಗಳ ಮಗನಾದ ಕಾಳಪ್ಪ ಪತ್ತಾರರವರು ಹಳೆಗನ್ನಡ ಮಹಾಕಾವ್ಯಗಳನ್ನು ವಾಚಿಸುವ ಕಲೆ ಹಾಗೂ ಪುರವಂತಿಕೆ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ.
1951 ರಿಂದ ಪ್ರಾರಂಭವಾದ ಲಕ್ಷ್ಮೀಶ ಕವಿಯ ಜೈಮಿನಿ ಭಾರತ ಮಹಾಕಾವ್ಯವನ್ನು ವಾಚಿಸುವುದು, ಪಠಿಸುವುದು ಇಂದಿಗೂ ನಿಂತಿಲ್ಲ. ಪ್ರತಿನಿತ್ಯ ಬೆಳಗ್ಗೆ 4 ಗಂಟೆಗೆ ಸ್ನಾನಾದಿಗಳನ್ನು ಮುಗಿಸಿಕೊಂಡು ಒಂದೆರಡು ತಾಸಿನವರೆಗೂ ಮಹಾಕಾವ್ಯದ ವಾಚನ ಸಾಗುತ್ತದೆ. ಲಕ್ಷ್ಮೀಶನ ಜನ್ಮಸ್ಥಳ ಸುರಪೂರ ತಾಲ್ಲೂಕಿನ ದೇವಪೂರದಲ್ಲಿನ ಲಕ್ಷ್ಮೀದೇವಿಯು ಪತ್ತಾರ ಮನೆತನದ ಆರಾದ್ಯದೈವವಾದ್ದರಿಂದ ಪ್ರತಿದಿನ ಬೆಳಿಗ್ಗೆ ಮಹಾಕವಿ ಲಕ್ಷ್ಮೀಶನ ವಿರಚಿತ ಜೈಮಿನಿ ಭಾರತ ಮಹಾಕಾವ್ಯದ ವಾಚನದೊಂದಿಗೆ ದಿನನಿತ್ಯದ ಚಟುವಟಿಕೆಗಳು ಪ್ರಾರಂಭಿಸುತ್ತೇನೆ ಎಂದು ಕಾಳಪ್ಪ ಪತ್ತಾರ ಭಕ್ತಿ, ಅಭಿಮಾನದಿಂದ ನುಡಿಯುತ್ತಾರೆ.
ಕೃಷಿಯ ವೃತ್ತಿಯೊಂದಿಗೆ ಪತ್ನಿ ಅಕ್ಕಮಹಾದೇವಿ ಹಾಗೂ ಮೂರು ಮಕ್ಕಳ ಜೊತೆ ಅರ್ಥಪೂರ್ಣ ಕೌಟುಂಬಿಕ ಜೀವನ ಸಾಗಿಸುತ್ತಿರುವ ಕಾಳಪ್ಪ ಪತ್ತಾರವರು ಸರಳ ಸಜ್ಜನಿಕೆಯುಳ್ಳ, ಸದುವಿನಯಶೀಲ, ಪ್ರಮಾಣಿಕ ವ್ಯಕ್ತಿತ್ವದಿಂದ ಗ್ರಾಮದಲ್ಲಿ ಎಲ್ಲರಿಗೂ ಬೇಕಾಗಿದ್ದಾರೆ.
74ರ ಇಳಿಯ ವಯಸ್ಸಿನಲ್ಲಿಯೂ ಪತ್ತಾರವರ ಉತ್ಸಾಹ, ಜೀವನ ಪ್ರೀತಿ, ಸೃಜನಶೀಲ ಹುಡುಕಾಟಗಳು ಇನ್ನೂ ಹಸಿರಾಗಿಯೇ ಇವೆ. ಪತ್ತಾರವರು ಮಹಾಕಾವ್ಯದ ವಾಚನಕ್ಕೆ ಕೂತರೆಂದರೆ ಅದೊಂದು ವಿಶಿಷ್ಟ ಅನುಭವ. ಸಮಧುರ ಕಂಠದಿಂದ ಸ್ಪಷ್ಟವಾಗಿ ಹೊರಹೊಮ್ಮುವ ಹಳೆಗನ್ನಡ ಜೈಮಿನಿ ಭಾರತ ಮಹಾಕಾವ್ಯದ ಸಾಲುಗಳನ್ನು ಕೇಳಿದರೆ ಭಾಷಾಶಾಸ್ತ್ರದ ಅಧ್ಯಾಪಕರಿಗೂ, ವಿದ್ವಾಂಸರಿಗೂ ಬೆರಗು ಮೂಡಿಸುತ್ತದೆ.
ಕೇವಲ 10ನೇ ತರಗತಿವರೆಗೆ ಓದಿದ ಕಾಳಪ್ಪನವರು ಮಹಾಕವಿ ಲಕ್ಷ್ಮೀಶನ ಕನ್ನಡ ಜೈಮಿನಿ ಭಾರತ, ಹರಿಶ್ಚಂದ್ರ ಕಾವ್ಯ, ಚೆನ್ನಬಸವ ಪುರಾಣ, ಕಾಳಿದಾಸನ ಶ್ಲೋಕಗಳು, ಶಂಕರಚಾರ್ಯರ ಸೌಂದರ್ಯ ಲಹರಿ ಶ್ಲೋಕ, ಸೊಮೇಶ್ವರ ಶತಕ, ಭದ್ರಗಿರಿ ಅಚ್ಯುತ ದಾಸವರೇಣ್ಯ ರಚಿಸಿದ ಕೀರ್ತನೆಗಳು, ಸರ್ಪಭೂಷಣ ಷಣ್ಮುಖ ಶಿವಯೋಗಿಗಳ ಕೈವಲ್ಯ, ಚನ್ನಬಸವ ಪುರಾಣ, ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ದತಿ, ಮೌನೇಶ್ವರ ಪುರಾಣ ಮತ್ತು ದೇವಿ ಪುರಾಣ ಮುಂತಾದ ಹಳೆಗನ್ನಡ ಮಹಾಕಾವ್ಯಗಳನ್ನು ವಾಚಿಸುವ ಕಲೆಯನ್ನು ತಮ್ಮ ತಂದೆಯವರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಿಂದ ಕಲಿತು ವಾಚನ ಮಾಡುತ್ತಿರುವ ಕಾಳಪ್ಪನವರು, ಈ ವಾಚನ ಕಲೆಯಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದ ಬಹು ಮುಖ್ಯವಾಗುತ್ತಾರೆ.
ತನ್ನ ಶ್ರದ್ದೆ, ಪರಿಶ್ರಮದಿಂದ ಲಕ್ಷ್ಮೀಶನ ಜೈಮಿನಿ ಭಾರತ ಮಹಾಕಾವ್ಯದಲ್ಲಿ ಅಡಗಿರುವ ಜೀವದ್ರವ್ಯವನ್ನು ಕಲಾತ್ಮಕವಾಗಿ ಅರಳಿಸುವ ಕಾಳಪ್ಪ ಪತ್ತಾರರವರು ಒಂದು ಮೌಖಿಕ ಪರಂಪರೆಯ ಸಂಕೇತವಾಗಿದ್ದಾರೆ. ಇಂತಹ ಸಾಂಸ್ಕøತಿಕ ಕಾಳಜಿಗಳ ಮೂಲಕ ತಮಗೆ ಹಳೆಗನ್ನಡ ಮಹಾಕಾವ್ಯಗಳ ವಾಚನ ಕಲೆಯ ಧೀಕ್ಷೆ ನೀಡಿದ, ಸ್ಪೂರ್ತಿಯಾದ ತಂದೆ ದಿ.ಘಂಟೆಪ್ಪ ಪತ್ತಾರವರನ್ನು ಕಾಳಪ್ಪನವರು ಸದಾ ಸ್ಮರಿಸುತ್ತಾರೆ.
ಮಹಾಕಾವ್ಯಗಳ ವಾಚನದಲ್ಲಿ ಎರಿಳಿತ ಹಾಗೂ ವಿಸ್ತಾರ ಮತ್ತು ಕಾವ್ಯದ ಅರ್ಥವನ್ನು ಹೇಳುವಲ್ಲಿ, ಪತ್ತಾರರವರಿಗೆ ಒಳ್ಳೆಯ ಪರಿಶ್ರಮವಿದೆ. ಭಾವತುಂಬಿ ಸುಶ್ರಾವ್ಯವಾಗಿ ವಾಚನ ಮಾಡುವ ಕಾಳಪ್ಪ ವ್ಯಾಖ್ಯಗಳ ರಸದೌತಣ ನೀಡುತ್ತಾರೆ. ವಾಚನಕ್ಕೆ ತಕ್ಕಂತೆ ಕಂಠ ಸಿರಿಯುಳ್ಳ ಪತ್ತಾರ ಅದರಲ್ಲಿ ತೋರುವ ತನ್ಮಯತೆ, ವಾಚನದಲ್ಲಿ ತುಂಬುವ ಭಾವಾಭಿವ್ಯಕ್ತಿಗೆ ಎಂಥವರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ಅವರ ಕಂಠದಲ್ಲಿ ಓಜಸ್ಸು, ಮಾದುರ್ಯವನ್ನು ಕಾಣಬಹುದು. ವಯಸ್ಸು 74 ಆದರೂ ವಾಚನ ಕಲೆಗೆ 20ರ ಹರೆಯ ಇದೆ ಎಂದು ಹೆಳಬಹುದು.
ವಾರ್ಧಕ ಷಟ್ಪದಿಯಲ್ಲಿರುವ ಮಹಾಕವಿ ಲಕ್ಷ್ಮೀಶರ ಜೈಮಿನಿ ಭಾರತ ಮಹಾಕಾವ್ಯದಲ್ಲಿ ಬರುವ ಯುದ್ದಗಳ, ಪ್ರಾಣಿ-ಪಕ್ಷಿಗಳ, ನದಿಗಳ ವರ್ಣನೆ ಹಾಗೂ ಹರಿಶ್ಚಂದ್ರ ಕಾವ್ಯದಲ್ಲಿರುವ ಅನೇಕ ಪ್ರಸಂಗಗಳು, ಸನ್ನಿವೇಶಗಳು ಕಣ್ಣಿಗೆ ಕಟ್ಟುವಂತೆ ವಾಚಿಸುತ್ತಾರೆ. ಕಾಳಪ್ಪ ಪತ್ತಾರರವರ ಸುಂದರ ಹಳೆಗನ್ನಡ ಮಹಾಕಾವ್ಯಗಳ ವಾಚನ ಕಲೆಯನ್ನು ನಾಡಿನ ಹಿರಿಯ ಸಾಹಿತಿಗಳಾದ ಎ.ಕೃಷ್ಣ ಸುರಪುರ, ನಾಗಪ್ಪ ತ್ರಿವೇಧಿ, ಬಿ.ಆರ್.ಸುರಪುರ, ವೀರಪ್ಪ ಕಂಚಗಾರ, ಈರಣ್ಣ ಹಳಿಸಗರ, ಚಂದ್ರಶೇಖರ ಪತ್ತಾರ, ಮಹೇಶ ಅಂಗಡಿ ಕೋನಾಳ, ಮಲ್ಲು ಗುಳಗಿ ಮುಂತಾದವರು ಕೇಳಿ ತುಂಬಾ ಖುಷಿಪಟ್ಟಿದ್ದಾರೆ.
ಹಳೆಗನ್ನಡ ಮಹಾಕಾವ್ಯಗಳ ವಾಚಿಸುವ ಕಲೆಗೆ ತಮ್ಮನ್ನು ಅರ್ಪಿಸಿಕೊಂಡಿರುವ ಕಾಳಪ್ಪ ಪತ್ತಾರರವರಿಗೆ ಯಾವುದೇ ಹಮ್ಮು-ಬಿಮ್ಮುಗಳಿಲ್ಲ. ಯಾವುದೇ ಕಾರ್ಯಕ್ರಮಗಳ ವೇದಿಕೆಗಳಿಗೆ, ಸನ್ಮಾನಗಳಿಗೆ ಆಸೆಪಡದೆ, ಕಲೆಯನ್ನು ತೊರ್ಪಡಿಸುವ ಗೋಜಿಗೆ ಹೋಗದೆ, ಯಾರ ಕೇಳಲೇಂದು ನಾನು ಹಾಡುವುದಿಲ್ಲ. ಹಾಡವುದು ಅನಿವಾರ್ಯ ಕರ್ಮ ಎನಗೆ… ಎಂಬ ಕವಿ ಜಿ.ಎಸ್.ಎಸ್‍ರ ಕಾವ್ಯದ ಸಾಲುಗಳಂತೆ ತನ್ನಷ್ಠಕ್ಕೆ ತಾನು ವಾಚನ ಮಾಡುತ್ತ ಸಂತೃಪ್ತಿ ಕಾಣುತ್ತಾರೆ.
ಪತ್ತಾರವರು ಕೇವಲ ವಾಚನ ಕಲಾವಿದನಷ್ಠೆ ಅಲ್ಲದೇ ನಾಡಿನ ಸಾಂಸ್ಕೃತಿ ಜಾನಪದ ನೃತ್ಯ ಪ್ರಕಾರಗಳಲ್ಲಿ ಒಂದಾಗಿರುವ ಪುರವಂತಿಕೆ (ವೀರಗಾಸೆ) ಕಲಾವಿದ ಕೂಡ ಹೌದು. ವಂಶಪಾರಂಪರ್ಯವಾಗಿ ಬಂದಿರುವ ಈ ಪುರವಂತಿಕೆ ಕಲೆಯನ್ನು ನಾಡಿನಾದ್ಯಂತ ನಡೆಯುವ ಧಾರ್ಮಿಕ ಜಾತ್ರೆ, ಉತ್ಸವ, ಗುಗ್ಗಳ, ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಕಳೆದ 30 ವರ್ಷಳಿಂದ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಮತ್ತು ಗ್ರಾಮದಲ್ಲಿ ಜನರ ಅಸಿಕಜ್ಜಿ, ಕಾಮಣಿ ಮುಂತಾದ ರೋಗಗಳಿಗೆ ವನಸ್ಪತಿ ಔಷದಿ ಸಹ ನೀಡುತ್ತಾರೆ. ಇವರು ನೀಡಿದ ವನಸ್ಪತಿ ಔಷಧಿಯಿಂದ ಗ್ರಾಮದ ಚಂದ್ರಕಾಂತ ಕುಲಕರ್ಣಿಯವರಿಗೆ ಹರಡಿದ ರೋಗ ನಿವಾರಣೆಯಾಗಿದ್ದು, ಇಂದಿಗೂ ಕುಲರ್ಣಿಯವರು ನೆನಪಿಸುತ್ತಾರೆ. ಪತ್ತಾರರನ್ನು ಕುಲಕರ್ಣಿಯವರು ಶಾಸ್ತ್ರಿಗಳೆಂದೇ ಕರೆಯುತ್ತಾರೆ.
ಲಕ್ಷ್ಮೀಶನ ಜೈಮಿನಿ ಭಾರತ ಹಾಗೂ ಇತರ ಹಳೆಗನ್ನಡದ ಮಹಾಕಾವ್ಯಗಳ ವಾಚನದ ಕಲೆಯನ್ನು ರೀಕಾರ್ಡ್ ಮಾಡಿಸಿ ಸಿ.ಡಿ ಮೂಲಕ ಹಾಗೂ ಬರಹಗಳ ಮೂಲಕ ದಾಖಲಿಸುವ ಕಾರ್ಯ ಅವಶ್ಯವಾಗಿ ನಡೆಯಬೇಕಾಗಿದೆ. ಇದರಿಂದ ಕಾಳಪ್ಪ ಪತ್ತಾರರವರ ವಾಚನ ಕಲೆಗೆ ಬಹಳಷ್ಟು ಮಹತ್ವ ಬರುತ್ತದೆ. ಅವರ ವಾಚನ ಕಲಾ ಪ್ರತಿಭೆಯನ್ನು ಹಾಗೂ ಪುರವಂತಿಕೆ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ. ವಾಚನ ಕಲೆ ಮತ್ತು ಪುರವಂತಿಕೆಯ ಕಲೆಯ ಮೂಲಕ ಕಾಳಪ್ಪ ಪತ್ತಾರವರು ನಾಡಿನ ಸಾಂಸ್ಕೃತಿಕ ಲೋಕಕ್ಕೆ ವಿಶಿಷ್ಟ ಕಾಣಿಕೆಯಾಗಲೆಂದು ಹಾರೈಸೋಣ.
– ರಾಘವೇಂದ್ರ ಹಾರಣಗೇರಾ.
ಉಪನ್ಯಾಸಕರು ಶಹಾಪುರ ಜಿಲ್ಲೆ: ಯಾದಗಿರಿ
ಮೋ ನಂ: 9901559873
ಈ ಇಳಿ ವಯಸ್ಸಿನಲ್ಲಿಯೂ ಹಳಗನ್ನಡ ಕಾವ್ಯವಾಚನ ಪರಂಪರೆಯನ್ನು ಉಳಿಸಿಕೊಂಡು ತನ್ಮೂಲಕ ಅಧ್ಯಯನದ ಖುಷಿಯನ್ನು ಸವಿಯುತ್ತಿರುವ ಶ್ರೀ ಕಾಳಪ್ಪ ಪತ್ತಾರ ಅಪರೂಪದ ಪ್ರತಿಭೆ.ವಿದ್ಯೆಯೊಂದಿಗೆ ವಿನಯವನ್ನೂ ಹೊಂದಿರುವ ಇವರು ಪ್ರವಚನ,ಪುರಾಣಗಳನ್ನು ಅತ್ಯಂತ ಶೃದ್ಧೆಯಿಂದ ಆಲಿಸುತ್ತಾರೆ.ಸಭೆಯಲ್ಲಿ ಇವರು ಎದುರಿಗಿದ್ದರೆ ಒಂದಷ್ಟು ಎಚ್ಚರಿಕೆಯಿಂದ ಮಾತನಾಡಬೇಕೆಂಬ ಪ್ರಜ್ಞೆಯನ್ನು ಮೂಡಿಸುವಷ್ಟು ಜ್ಞಾನಿಯೆಂದರೂ ತಪ್ಪಿಲ್ಲ.
ಎಲೆಮರೆಯ ಕಾಯಿಯೊಂದನ್ನು ಪರಿಚಯಿಸಿದ ಉಪನ್ಯಾಸಕ ಮಿತ್ರ ಶ್ರೀ ರಾಘವೇಂದ್ರ ಹಾರಣಗೇರಾ ಅವರಿಗೂ,ಪ್ರಕಟಿಸಿದ ವಿನಯವಾಣಿಯ ಸಂಪಾದಕರಿಗೂ ಶುಭಕಾಮನೆಗಳು.
– ಅಜೇಂದ್ರಸ್ವಾಮೀಜಿ ಏಕದಂಡಿಗಿಮಠ
ಉಪನ್ಯಾಸಕರು,ಸಪಪೂ ಕಾಲೇಜು ಹುಮನಾಬಾದ
* ೯೮೪೫೪ ೫೭೫೧೯
ಪ್ರಸ್ತುತ ದಿನಮಾನಗಳಲ್ಲಿ ಕನ್ನಡ ಮಾತನಾಡುವವರೆ ಇಲ್ಲ! ಇಂತಹ ಸ್ಥಿತಿಯಲ್ಲಿ “ಜೈಮಿನಿ ಭಾರತ”ದಂತಹ ಹಳೆಗನ್ನಡ ವಾಚನ ಮಾಡುತ್ತಾರೆಂದರೆ ಅದ್ಬುತ. ಈ ರೀತಿಯ ಕನ್ನಡವನ್ನು ಅದರಲ್ಲೂ ಹಳೆಗನ್ನಡವನ್ನು ವಾಚಿಸುವ ಕಾಳಪ್ಪ ಪತ್ತಾರ ರವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕೆಂದು ನನ್ನ ಬಯಕೆ.
ಈ ಲೇಖನವನ್ನು ಅಚ್ಚುಕಟ್ಟಾಗಿ ನಿರೂಪಿಸಿರುವ ರಾಘವೇಂದ್ರ ಹಾರಣಗೇರೆ ಅವರಿಗೂ ನನ್ನ ನಮನಗಳು.
ಕರ್ನಾಟಕದಲ್ಲಿ ಈ ತರಹದ ಅದೆಷ್ಟೋ ಸಾಧಕರು ಇದ್ದಾರೆ ಅಂತವರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಮುಂದಿನ ಪೀಳಿಗೆಯು ಹಳೆಗನ್ನಡವನ್ನು ವಾಚಿಸುವಂತಾಗಲಿ ಎನ್ನೂವುದು ನನ್ನ ಅಭಿಲಾಷೆ.
ಜೈ ಕರ್ನಾಟಕ
ಪ್ರಮೋದ ತಂ ಘಂಟೆಪ್ಪ ಪತ್ತಾರ
ದೋರನಹಳ್ಳಿ
ತಾ ಶಹಾಪೂರ
ಜಿ ಯಾದಗಿರಿ
ಸೂಪರ್