ಹುಣಸೆ ಹಣ್ಣು ತೂಕ ಇಳಿಕೆಗೆ, ಜೀರ್ಣಕ್ರಿಯೆಗೆ ಸಹಕಾರಿ ಹೇಗೆ ಗೊತ್ತಾ?

ಹುಳಿಯಾದ ಹುಣಸೇಹಣ್ಣನ್ನು ನೀವು ಚಿಕ್ಕವರಿದ್ದಾಗ ಚಪ್ಪರಿಸಿ ತಿಂದಿರಬಹುದು, ಈಗ ಕ್ಯಾಂಡಿಗಳ ರೂಪದಲ್ಲೋ, ಅಥವಾ ಅಡುಗೆಗೆ ಬಳಸುವ ಮೂಲಕ ಮಾತ್ರ ಹುಣಸೆ ಹಣ್ಣನ್ನು ಬಳಸುತ್ತಿರಬಹುದು. ಆದರೆ ಹುಣಸೆ ಹಣ್ಣಿನ ನೀರು ತೂಕ ಇಳಿಸಲು ನೆರವಾಗುತ್ತದೆ.
ಹುಣಸೆ ಹಣ್ಣಿನ ನೀರು ಅತ್ಯಂತ ಕಡಿಮೆ ಕ್ಯಾಲರಿಯನ್ನು ಹೊಂದಿದೆ. ಒಂದು ಹುಣಸೆಹಣ್ಣಿನಲ್ಲಿ ಕೇವಲ ಐದರಿಂದ ಆರು ಕ್ಯಾಲರಿ ಇರುತ್ತದಂತೆ. ಹಾಗಾಗಿ ಇದರ ಮೂಲಕ ಕ್ಯಾಲರಿ ಹೆಚ್ಚು ತೆಗೆದುಕೊಂಡ ಭಯವಿಲ್ಲ. ಇದಕ್ಕೆ ಸಿಹಿ ಹಾಗೂ ಮಸಾಲೆಗಳನ್ನು ಸೇರಿಸಿದರೆ ಖಂಡಿತವಾಗಿಯೂ ಕ್ಯಾಲರಿ ಬದಲಾವಣೆಯಾಗುತ್ತದೆ. ತೂಕ ಇಳಿಕೆಯ ಹಾದಿಯಲ್ಲಿ ಜೀರ್ಣಕ್ರಿಯೆಯ ಸಮಸ್ಯೆ ಯಾವತ್ತಿಗೂ ಇರಬಾರದು. ಆಹಾರ ಚೆನ್ನಾಗಿ ಜೀರ್ಣವಾಗಬೇಕು. ನಿಮ್ಮ ಜೀರ್ಣಕ್ರಿಯೆಯ ಆರೋಗ್ಯವನ್ನು ಹೆಚ್ಚಿಸಬೇಕಾದರೆ, ಬಹುಬೇಗನೆ ಸರಿಯಾಗಿ ಆಹಾರ ಜೀರ್ಣವಾಗಬೇಕೆಂದರೆ ಈ ಹುಣಸೇ ಹಣ್ಣಿನ ನೀರು ಸಹಾಯ ಮಾಡುತ್ತದೆ.
ಇದು ಪಚನಕ್ರಿಯೆಯನ್ನು ಚುರುಕಾಗಿಸುವ ಮೂಲಕ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಹುಣಸೇಹಣ್ಣಿನಲ್ಲಿ ಸಾಕಷ್ಟು ನಾರಿನಂಶ ಇದೆ. ನಾರಿನಂಶವು ಜೀರ್ಣಕ್ರಿಯೆಗೆ ಒಳ್ಳೆಯದು. ಅಷ್ಟೇ ಅಲ್ಲ, ಇದು ತೂಕವನ್ನೂ ಇಳಿಸುತ್ತದೆ. ಹೊಟ್ಟೆ ತುಂಬಿರುವ ಫೀಲ್ ನೀಡುವುದರಿಂದ ಬೇರೆ ತಿನ್ನುವ ಬಯಕೆಯಾಗುವುದಿಲ್ಲ. ಹುಣಸೇ ಹಣ್ಣಿನ ನೀರನ್ನು ಯಾಕೆ ಕುಡಿಯಬೇಕು ಎಂದರೆ ಹುಣಸೇಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಹುಣಸೆಯಲ್ಲಿ ಟಾರ್ಟಾರಿಕ್ ಆಸಿಡ್ ಎಂಬ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್ ಇದ್ದು ಇದು ಫ್ರೀ ರ್ಯಾಡಿಕಲ್‌ಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಆಂಟಿ ಆಕ್ಸಿಡೆಂಟ್‌ನಿಂದ ಸಮೃದ್ಧವಾಗಿರುವ ಆಹಾರವು ಆರೋಗ್ಯವನ್ನು ಹೆಚ್ಚಿಸಿ, ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚು ಮಾಡಿ ತೂಕವನ್ನು ಇಳಿಸುತ್ತದೆ.