
ಬೀದರ ಜಿಲ್ಲೆಯಲ್ಲಿ ಭಾರಿ ಮಳೆಃ ಶಾಲಾ, ಕಾಲೇಜಿಗೆ ರಜೆ
ಅರೆ ಮಲೆನಾಡು ಈಗ ಮಹಾ ಮಳೆ ನಾಡು
ಬೀದರಃ ಜಿಲ್ಲೆಯಾದ್ಯಂತ ಕಳೆದ ವಾರದಿಂದ ನಿರಂತರ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ನಿರಂತರ ಮಹಾ ಮಳೆ ಮುಂದುವರೆದ ಹಿನ್ನೆಲೆ ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಶಾಲಾ, ಕಾಲೇಜಿಗೆ ರಜೆ ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ.
ರಸ್ತೆ, ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಅರೆ ಮಲೆನಾಡು ಇದೀಗ ಸಂಪೂರ್ಣ ಮಳೆನಾಡಾಗಿ ಪರಿವರ್ತನೆಯಾಗಿದೆ.
ಮೋಡ ಕವಿದ ವಾತಾವರಣ, ಮಹಾಮಳೆ ಆಗಾಗ ಜಿಟಿ ಜಿಟಿ ಮಳೆ ಯಿಂದಾಗಿ ಜಿಲ್ಲೆಯಲ್ಲಿ ಶೀತಪೂರ್ಣ ವಾತಾವರಣ ಆವರಿಸಿದ್ದು, ಸೂರ್ಯನ ಕಿರಗಳು ಕಾಣದಾಗಿ ಜನ ಬೇಸತ್ತಿದ್ದಾರೆ.
ಮಳೆಯಲಿ ಖುಷಿಯಲಿ..
ಒಂದಡೆ ನಿತ್ಯ ಬೆಂಬಿಡದ ಮಳೆಯಿಂದ ಹಲವಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದರೆ, ಇನ್ನೊಂದಡೆ ಮಕ್ಕಳು, ಯುವಕರಿಗೆ ಮಳೆ ಖುಷಿ ತಂದಿದೆ ಎನ್ನಬಹುದು. ಮಳೆಯಿಂದಾಗಿ ನಿಸರ್ಗ ಸೌಂದರ್ಯ ಝಗಮಗಿಸುತ್ತಿದ್ದು, ನಿಸರ್ಗ ಸವಿಯುತ, ಉಕ್ಕಿ ಹರಿಯುವ ನೀರಿನ ಝೇಂಕಾರ, ಹಸಿರುಡಿಗೆಯಲ್ಲಿ ತಬಿಕೊಂಡ ಭೂತಾಯಿ ಮಡಿಲಲಿ ಯುವ ಮನಸ್ಸುಗಳು ಕುಣಿದು ಸಂತಸ ಪಡುತ್ತಿವೆ. ವಿಚಿತ್ರವಾದರೂ ಸತ್ಯ. ಆದರೂ ಕೆಲವಡೆ ಇದೇ ಯುವ ಮನಸ್ಸುಗಳು ಸಂಕಷ್ಟಕ್ಕೆ ಸಿಲುಕಿದವರ ಸಹಕಾರಕ್ಕೂ ಕೈ ಜೋಡಿಸುತ್ತಿವೆ. ದೇವರ ಆಜ್ಞೆ ಇಲ್ಲದೆ ಹುಲ್ಲು ಕಡ್ಡಿಯು ಅಲುಗಾಡಲ್ಲ ಎಂಬುದು ಸತ್ಯ ಅನಿಸುತ್ತದೆ ಅಲ್ಲವೇ.? ಒಟ್ಟಾರೆ ಮಳೆ ಅವಾಂತರ ಸೃಷ್ಟಿಸದಿರಲಿ, ಅವಘಡ ಘಟನೆಗಳು ನಡೆಯದಿರಲಿ ಎಂಬುದು ವಿವಿ ಕಳಕಳಿ.
ಕಳೆದ ಮೂರು ದಿನಗಳಿಂದ ಮಳೆ ನಿರಂತರವಾಗಿದ್ದು, ಎಲ್ಲಡೆ ಮಬ್ಬುಗತ್ತಲೇ ಆವರಿಸಿದೆ. ನಿತ್ಯ ಉದಯಿಸುವ ಸೂರ್ಯದೇವ ಸಹ ತನ್ನ ಕೆಲಸಕ್ಕೆ ರಜೆ ಹಾಕಿದಂತಿದೆ. ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.
ಒದ್ದೆ ಬಟ್ಟೆಗಳು ಒಣಗದಾಗಿವೆ. ವೃದ್ಧರು ಮೈಗೂಡಿಸಿಕೊಂಡು ಮನೆ ಮೂಲೆ ಸೇರುವಂತಾಗಿದೆ. ಹಳೇ ಮನೆಗಳಲ್ಲಿ, ಶೆಡ್ ಗಳಲ್ಲಿ ವಾಸಿಸುವ ಬಡವರು ಜೀವ ಕೈಯಲ್ಲಿಡಿದು ಪರದಾಡುವಂತಾಗಿದೆ. ಇಂತವರಿಗೆ ಜಿಲ್ಲಾಡಳಿತ ಸೂಕ್ತ ಆಶ್ರಯ ಕಲ್ಪಿಸಲಿ.
– ಸಹನಾ ಮಡಿವಾಳ. ಬೀದರ.