ಬೀದರಃ ಭಗ್ನ ಪ್ರೇಮಿಯಿಂದ ಯುವತಿಗೆ ಚಾಕು ಇರಿತ
ಭಾಲ್ಕಿಃ ಭಗ್ನ ಪ್ರೇಮಿಯಿಂದ ಯುವತಿಗೆ ಚಾಕು ಇರಿತ ಆರೋಪಿ ಬಂಧನ
ಬೀದರಃ ಜನನಿಬಿಡ ಗಾಂಧಿ ವೃತ್ತದ ಬದಿಯ ನಡುರಸ್ತೆಯಲ್ಲಿ ಭಗ್ನ ಪ್ರೇಮಿಯೊಬ್ಬ ಯುವತಿ ಒಬ್ಬಳ ಮೇಲೆ ಹಲ್ಲೆ ನಡೆಸಿ ಚಾಕು ಇರಿದ ಘಟನೆ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಗುರುವಾರ ನಡೆದಿದೆ.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡಿಕೊಂಡಿದ್ದ, ರೂಪಾ ಎಂಬಾಕೆ ಮೇಲೆಯೇ ಭಗ್ನ ಪ್ರೇಮಿ ತಿಪ್ಪಣ್ಣ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಯುವತಿ ಗಂಭೀರಗಾಯಗೊಂಡಿದ್ದು, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಬೀದರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಯುವತಿ ಪ್ರಾಣಪಾಯ ದಿಂದ ಪಾರಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಪ್ರೀತಿ ನಿರಾಕರಿಸಿದ ಕಾರಣ ಕೋಪಗೊಂಡ ಆಟೋ ಚಾಲಕ ತಿಪ್ಪಣ್ಣ ಈ ಕೃತ್ಯ ಎಸಗಿದ್ದಾನೆ. ಯುವತಿ ರೂಪಾ, ಆರೋಪಿ ತಿಪ್ಪಣ್ಣನ ಸೋದರತ್ತೆ ಮಗಳೆಂದು ತಿಳಿದು ಬಂದಿದೆ. ಕಳೆದ ಎರಡು ಮೂರು ವರ್ಷದಿಂದ ಪ್ರೀತಿಸುವಂತೆ ಯುವತಿ ಹಿಂದೆ ದುಂಬಾಲು ಬಿದ್ದಿದ್ದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೆ ಆರೋಪಿ ತಿಪ್ಪಣ್ಣನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ಈ ಕುರಿತು ಭಾಲ್ಕಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.