ಶೀಘ್ರವೇ ಬಸ್ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ
ಬೆಂಗಳೂರು: ಪೆಟ್ರೋಲ್-ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳದ ಬೆನ್ನಲ್ಲೇ ಅದ ರಿಂದಾಗುತ್ತಿರುವ ಹೊರೆ ತಗ್ಗಿಸಿಕೊಳ್ಳಲು ಪ್ರಯಾಣ ದರ ಹೆಚ್ಚಳಕ್ಕೆ ಮುಂದಾಗಿರುವ ನಾಲ್ಕೂ ಸಾರಿಗೆ ನಿಗಮಗಳು ಈ ಸಂಬಂಧ ದರ ಪರಿಷ್ಕರಣೆಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ.
ಈ ಮೂಲಕ ಬಸ್ ಪ್ರಯಾಣಿಕರಿಗೂ ತೆರಿಗೆ ಹೊರೆಯ ಬಿಸಿ ತಟ್ಟುವ ಸಾಧ್ಯತೆ ಕಂಡುಬಂದಿದೆ. ಶೇ. 25ರಷ್ಟು ಬೆಲೆಯೇರಿಕೆ ಪ್ರಸ್ತಾವನೆ ಸಲ್ಲಿಸ ಲಾಗಿದ್ದು, ಸರಕಾರ ಒಪ್ಪಿಗೆ ಸೂಚಿಸಿದರೆ ಶೇ. 12ರಷ್ಟು ಏರಿಕೆಯಾಗುವ ಅಂದಾಜಿದೆ.
ಕೆಎಸ್ಸಾರ್ಟಿಸಿ, ಬಿಎಂಟಿಸಿ ಸಹಿತ ನಾಲ್ಕೂ ನಿಗಮಗಳು ಆಗಲಿರುವ ಹೊರೆ ಮತ್ತು ಪ್ರಸ್ತುತ ಆರ್ಥಿಕ ಸ್ಥಿತಿಗತಿಯನ್ನು ಲೆಕ್ಕಹಾಕಿ ಸರಾಸರಿ ಶೇ. 25ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಒಂದು ವೇಳೆ ಯಥಾವತ್ತಾದ ಪ್ರಸ್ತಾವನೆಗೆ ಅಸ್ತು ಎಂದರೆ ನಿತ್ಯ ಸರಾಸರಿ 5ರಿಂದ 6 ಕೋಟಿ ರೂ. ಆದಾಯ ಹೆಚ್ಚಳವಾಗುವ ನಿರೀಕ್ಷೆ ಇದೆ. ಆದರೆ ಆ ಪೈಕಿ ಅರ್ಧಕ್ಕರ್ಧ ಹೊರೆಯನ್ನು ಸರಕಾರವೇ ಹೊರಬೇಕಾಗುತ್ತದೆ.
ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸುವ ಒಟ್ಟು ಪ್ರಯಾಣಿಕರ ಪೈಕಿ ಶೇ. 58ರಷ್ಟು ಮಹಿಳೆಯರು. ಅವರ ಪ್ರಯಾಣ ವೆಚ್ಚವನ್ನು “ಶಕ್ತಿ’ ಯೋಜನೆ ಅಡಿ ಸರಕಾರವೇ ಭರಿಸುತ್ತಿದೆ. ಒಂದು ವೇಳೆ ಪ್ರಸ್ತಾವನೆಯಂತೆ ಪ್ರಯಾಣ ದರವನ್ನು ಶೇ. 25ರಷ್ಟು ಹೆಚ್ಚಳ ಮಾಡಿದರೆ, ಅದರಿಂದ ನಿತ್ಯ 5-6 ಕೋಟಿ ರೂ. ಆದಾಯವಂತೂ ಹೆಚ್ಚಳ ಆಗುತ್ತದೆ. ಇದರಲ್ಲೂ ಅರ್ಧದಷ್ಟನ್ನು ಶಕ್ತಿ ಯೋಜನೆಯಡಿ ಸರಕಾರವೇ ಕೊಡಬೇಕಿದೆ.
ಪ್ರಸ್ತಾವನೆಯ ಅರ್ಧದಷ್ಟು ಅಂದರೆ ಶೇ. 10ರಿಂದ 12ರಷ್ಟು ದರ ಏರಿಕೆಗೆ ಅನುಮತಿ ನೀಡಿದರೂ ನಿಗಮಗಳಿಗೆ ಬರುವ ಆದಾಯ ದಿನಕ್ಕೆ 2.50ರಿಂದ 3 ಕೋಟಿ ರೂ. ಆಗುತ್ತದೆ. ವಾರ್ಷಿಕ 1,100-1,200 ಕೋಟಿ ರೂ. ಆಗಲಿದೆ. ಇದರಲ್ಲಿ ಮಹಿಳಾ ಪ್ರಯಾಣಿಕರ ಪ್ರಯಾಣ ದರ ಶೇ. 55-60ರಷ್ಟು ಎಂದು ಲೆಕ್ಕ ಹಾಕಿದರೂ ವಾರ್ಷಿಕ 550-600 ಕೋಟಿ ರೂ. ಆಗುತ್ತದೆ. ಒಟ್ಟಾರೆಯಾಗಿ ತೈಲ ದರ ಏರಿಕೆಯಿಂದ 3 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಈ ಪೈಕಿ ಶೇ. 20ರಷ್ಟು “ಶಕ್ತಿ’ ಯೋಜನೆ ಅಡಿ ನಿಗಮಗಳಿಗೆ ಪಾವತಿಸಬೇಕಾಗುತ್ತದೆ ಎಂದು ಕೆಎಸ್ಸಾರ್ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.