ಶಹಾಪುರ ಸರ್ಕಾರಿ ನೌಕರರ ಪ್ರೀತಿ-ವಿಶ್ವಾಸಕ್ಕೆ ಚಿರಋಣಿಃ ಷಡಾಕ್ಷರಿ

ಹೋರಾಟದ ಹಾದಿ ತುಳಿಯದೇ ಶೇ.90 ರಷ್ಟು ಬೇಡಿಕೆ ಈಡೇರಿಕೆ-ಸಿ.ಎಸ್.ಷಡಾಕ್ಷರಿ
yadgiri, ಶಹಾಪುರ: ಸರ್ಕಾರಕ್ಕೆ ಮುಜುಗರ ತರುವಂಥ ಯಾವುದೇ ಸತ್ಯಾಗ್ರಹ, ಚಳುವಳಿ ಹೋರಾಟದ ಹಾದಿ ತುಳಿಯದೆ, ರಾಜ್ಯದ ಎಲ್ಲಾ ವರ್ಗದ ಸರ್ಕಾರಿ ನೌಕರರ ಶೇ.90 ರಷ್ಟು ಬೇಡಿಕೆಗಳನ್ನು ಈಡೇರಿಸಿಕೊಂಡ ತೃಪ್ತಿ ರಾಜ್ಯ ಸರ್ಕಾರಿ ನೌಕರರ ಸಂಘಕ್ಕಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದರು.
ನಗರದ ಕಲ್ಯಾಣ ಮಂಟಪದಲ್ಲಿ ಶಹಾಪುರ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 25ನೇ ವರ್ಷದ ಬೆಳ್ಳಿ ಮಹೋತ್ಸವ ಅಂಗವಾಗಿ ಎನ್‍ಜಿಓ ಕಾಲೋನಿಗೆ ಭೀಮರಡ್ಡಿ ಬೈರೆಡ್ಡಿ ಕಾಲೊನಿ ಎಂದು ನೂತನ ನಾಮಕರಣ ಹಾಗೂ ರಾಜ್ಯ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆ ಮತ್ತು ರಾಜ್ಯ ಸರ್ಕಾರಿ ನೌಕರರ ಮಕ್ಕಳು ಉತ್ತಮ ಅಂಕಗಳಿಸಿದಕ್ಕಾಗಿ ಪ್ರತಿಭಾ ಪುರಸ್ಕಾರ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿನಂದನೆ ಗೌರವ ಸ್ವೀಕರಿಸಿ ಮಾತನಾಡಿದರು.
ತಾಲೂಕಿನ ಸರ್ಕಾರಿ ನೌಕರರ ಸಂಘದ ಸಂಘಟಿತ ಶಕ್ತಿ ರಾಜ್ಯಕ್ಕೆ ಮಾದರಿಯಾಗಿದೆ. ಪ್ರತಿಯೊಂದು ತಾಲೂಕ ಜಿಲ್ಲಾ ಮಟ್ಟದಲ್ಲಿ ಸಂಘಗಳು ಇಷ್ಟು ಬಲಿಷ್ಠವಾಗಿದ್ದರೆ ಸರ್ಕಾರ ನೌಕರರ ಧ್ವನಿಗೆ ತಕ್ಷಣದಲ್ಲಿ ಸ್ಪಂದಿಸುವುದರಲ್ಲಿ ಸಂದೇಹವಿಲ್ಲ. 87 ಇಲಾಖೆಯಲ್ಲಿನ ಎಲ್ಲಾ ವರ್ಗದ ನೌಕರರ ಸಮಸ್ಯೆಗಳನ್ನು ಆಲಿಸಿ ಅವುಗಳ ಪರಿಹಾರಕ್ಕೆ ಸರಕಾರದಿಂದ ಸಾರ್ಥಕ ಪ್ರಯತ್ನ ಮಾಡಿದ್ದೇವೆ. ಬರುವ ತಿಂಗಳಾಂತ್ಯದೊಳಗೆ 6 ಲಕ್ಷ ಜನ ನೌಕರರು ಮತ್ತು ಅವರ ಕುಟುಂಬ ವರ್ಗಕ್ಕೆ ಅತ್ಯಂತ ಸುಸಜ್ಜಿತವಾದ ರೀತಿಯಲ್ಲಿ ಆರೋಗ್ಯ ರಕ್ಷಣೆಗೆ ಅತ್ಯಾಧುನಿಕ ರೀತಿಯ ಉತ್ತಮ ಚಿಕಿತ್ಸೆ ಅವಕಾಶ ದೊರಕಲಿದ್ದು, ಇದು ಕರ್ನಾಟಕ ರಾಜ್ಯದ ನೌಕರರ ಸೌಭಾಗ್ಯವೆಂದೇ ಹೇಳಬಹುದು.
ಕೋವಿಡ್‍ನಂತಹ ಸಂದರ್ಭ ಆರ್ಥಿಕ ಸಂದಿಗ್ಧ ಪರಿಸ್ಥಿತಿಯಲ್ಲಿಯು, ಸರ್ಕಾರಿ ನೌಕರರು ಅತ್ಯಂತ ಸಂಯಮದಿಂದ ಸೇವೆ ನಿರ್ವಹಿಸಿ ಸರ್ಕಾರಕ್ಕೆ ಸ್ಪಂದಿಸಿದ್ದು ಅತ್ಯಂತ ಗೌರವ ತಂದಿದೆ. ಕೇಂದ್ರ ಮಾದರಿ ವೇತನ ಜಾರಿಗಾಗಿ ಹೆಚ್ಚು ಪ್ರಯತ್ನ ಹಾಕಲಾಗುತ್ತಿದ್ದು, 2022 ಜುಲೈ ವೇಳೆಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ನ್ಯಾಯಯುತ ಹೋರಾಟಕ್ಕೆ ಸರ್ವರೂ ಸಜ್ಜಾಗಬೇಕು ಎಂದು ಕರೆ ನೀಡಿದ ಅವರು, ಸರ್ಕಾರಿ ನೌಕರರ ಪ್ರತಿಯೊಂದು ಹಂತದ ಬಾಕಿ ಉಳಿದಿರುವ ಬೇಡಿಕೆಗಳನ್ನು ಈಡೇರಿಸುವ ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದು ಅಭಯ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಹಾಪುರ ಶಾಖೆಯ ಅಧ್ಯಕ್ಷ ರಾಯಪ್ಪಗೌಡ ಹುಡೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಸಿದ್ಧರಾಮ ಹೊನ್ಕಲ್, ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ, ಕಾರ್ಯಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಹಿರಿಯರಾದ ಭೀಮರೆಡ್ಡಿ ಬೈರೆಡ್ಡಿ, ತಹಶೀಲ್ದಾರ ಮಧುರಾಜ ಕೂಡಲಿಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ 2022ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ವೇದಿಕೆ ಮೇಲೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥರಡ್ಡಿ ದರ್ಶನಾಪುರ, ನಗರಸಭೆ ಅಧ್ಯಕ್ಷ ಕಮಲಾಬಾಯಿ ಚಂದ್ರಶೇಖರ್, ಜಿಲ್ಲಾಧ್ಯಕ್ಷ ರಾಜು ಟೆಂಗಳಿ, ರಾಜೇಂದ್ರಕುಮಾರ, ಭೀಮಣ್ಣ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ, ಬಿ.ಹೆಚ್.ಸೂರ್ಯವಂಶಿ, ಮೋಹನಕುಮಾರ, ಶ್ರೀನಿವಾಸ, ಹೇಮರೆಡ್ಡಿ ಪಾಟೀಲ, ಎಂ.ನಾರಾಯಣ, ಗೌಡಪ್ಪ ತೊನಸಳ್ಳಿ ಸೇರಿದಂತೆ ನಿವೃತ್ತ ನೌಕರರ ಸಂಘದ ರಾಜ್ಯಧ್ಯಕ್ಷ ಎನ್.ಸಿ.ಪಾಟೀಲ್ ಇತರರಿದ್ದರು. ಕಾರ್ಯಕ್ರಮಕ್ಕೂ ಮುಂಚೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳ ಭವ್ಯ ಶೋಭಾಯಾತ್ರೆ ಜರುಗಿತು. ಪ್ರಶಾಂತ ನಿರೂಪಿಸಿದರು. ರಾಮಕೃಷ್ಣ ಕಟ್ಕಾವಲಿ ಸ್ವಾಗತಿಸಿದರು. ಲಕ್ಷ್ಮಣ ಲಾಳಸೇರಿ ವಂದಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಹುದ್ದೆಗಳು ಭರ್ತಿಯಾಗಿಲ್ಲ. ವಿವಿಧ ಹುದ್ದೆಗಳಲ್ಲಿ ಬಡ್ತಿ ಹೊಂದುವುದು ನನೆಗುದಿಗೆ ಬಿದ್ದಿದೆ. ಪದವಿಧರ ನೌಕರರಲ್ಲಿ ತಾರತಮ್ಯವಾಗಿದೆ. ಹಳೆಯ ಪೆನ್ಶನ್, ಸ್ಕೀಮ್ ಸಮಗ್ರವಾಗಿ ಜಾರಿಗೆ ಬರಬೇಕು, ಇವೆಲ್ಲವುಗಳ ಬಗ್ಗೆ ಪ್ರಾಮಾಣಿಕವಾಗಿ ಸ್ಪಂದಿಸುವೆ.
-ಸಿ.ಎಸ್.ಷಡಕ್ಷರಿ. ನೌಕರರ ಸಂಘದ ರಾಜ್ಯಾಧ್ಯಕ್ಷ.