ಸಾಲಕ್ಕೆ ಹೆದರಿ ದುರಂತ ಅಂತ್ಯ ಕಂಡ ಸುರಪುರ ಕುಟುಂಬ
4 ಮಕ್ಕಳೊಂದಿಗೆ ಬಾವಿಗೆ ಹಾರಿದ ದಂಪತಿಗಳು, ಸ್ಥಳಕ್ಕೆ ಎಸ್‍ಪಿ ಭೇಟಿ
yadgiri, ಶಹಾಪುರಃ ಸಾಲಬಾಧೆ ತಾಳಲಾರದೆ ನಾಲ್ಕು ಮಕ್ಕಳೊಂದಿಗೆ ದಂಪತಿಗಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಭೀಮರಾಯ ಸುರಪುರ (45), ಶಾಂತಮ್ಮ ಸುರಪುರ(36), ಸುಮಿತ್ರಾ (12), ಶ್ರೀದೇವಿ(13), ಶಿವರಾಜ(6), ಲಕ್ಷ್ಮೀ (4) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಗ್ರಾಮದ ನುರಿತ ಈಜುಗಾರರಿಂದ ಶವಪತ್ತೆ ಕಾರ್ಯಾಚರಣೆ ನಡೆಸಿ ಶವಗಳನ್ನು ಹೊರ ತೆಗೆಯಲಾಯಿತು.
ವಿವರಃ ಮೃತ ಭೀಮರಾಯ ಸುರಪುರ ಈತನ ಪಾಲಿಗೆ ಬಂದಿದ್ದ ಜಮೀನು ಈಗಾಗಲೇ ಸಾಲಕ್ಕಾಗಿಯೇ ಮಾರಾಟ ಮಾಡಿ ಹದಿನಾಲ್ಕು ವರ್ಷಗಳೇ ಕಳೆದಿವೆ. ಪ್ರಸ್ತುತ ತಾಯಿ ಪಾಲಿಗೆ ಎಂದು ಇಟ್ಟಿದ್ದ 2 ಎಕರೆ ಜಮೀನಿನಲ್ಲ್ಲಿ ಕೃಷಿ ಹೊಂಡ ತೋಡಿಸಿ ತೋಟಗಾರಿಕೆ ಬೆಳೆ ಮಾಡುವ ಧಾವಂತದಲ್ಲಿದ್ದ, ಅದು ಕೂಡ ಸಫಲತೆ ಕಾಣದಾದಾಗ ಆತ್ಮಹತ್ಯೆ ದಾರಿ ತುಳಿದಿದ್ದಾನೆ ಎನ್ನಲಾಗಿದೆ.
ಆದರೆ ಮೈತುಂಬಾ ಸಾಲ ಮಾಡಿ ಕೊಂಡಿದ್ದ ಆತ ತೀವ್ರ ನೋವು ಅನುಭವಿಸುತ್ತಿದ್ದ, ಇಂದು ಸಾಲಬಾಧೆ ತಾಳಲಾರದೆ ತಾನೇ ತೋಡಿಸಿದ್ದ ಕೃಷಿ ಹೊಂಡದಲ್ಲಿ ಹೆಂಡತಿ ಮಕ್ಕಳೊಂದಿಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವದು ದುರಂತ.
20 ಲಕ್ಷ ಮೇಲ್ಪಟ್ಟು ಕೈಸಾಲವಿದೆ ಎಂಬುದು ಇದೀಗ ಗೊತ್ತಾಗುತ್ತಿದೆ. ಒಮ್ಮೆಯು ನಮ್ಮೆದು ಹೇಳಿಲ್ಲವೆಂದು ಸಹೋದರರು ಕಣ್ಣೀರಿಟ್ಟರು. ಘಟನೆ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಶವಗಳನ್ನು ಮರಣೋತ್ತರ ಪರೀಕ್ಷೆಗೆ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ತಹಸೀಲ್ದಾರ, ಎಸ್‍ಪಿ ಭೇಟಿಃ ಘಟನಾ ಸ್ಥಳಕ್ಕೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೇದಮೂರ್ತಿ ಹಾಗೂ ಶಹಾಪುರ ತಹಸೀಲ್ದಾರ ಜಗನ್ನಾಥರಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಟುಂಬದ ಸಾವಿಗೆ ಕಾರಣ ಕುರಿತು ಸಮರ್ಪಕ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಸುರಪುರ ವಲಯ ಡಿವೈಎಸ್‍ಪಿ ವೆಂಕಟೇಶ ಉಗಿಬಂಡಿ, ಶಹಾಪುರ ಠಾಣೆ ಕ್ರೈಂ ಪಿಎಸ್‍ಐ ಶಾಮಸುಂದರ ನಾಯಕ, ಪಿಎಸ್‍ಐ ಚಂದ್ರಕಾಂತ ಮೆಕಾಲೆ ಇತರರಿದ್ದರು.
20 ದಿನಗಳ ಹಿಂದಷ್ಟೆ ಹಿರಿ ಮಗಳ ಮದುವೆ ಮಾಡಿದ್ದ..
ಕಳೆದ 20 ದಿನಗಳ ಹಿಂದೆ ಮೃತ ಭೀಮರಾಯನ ದೊಡ್ಡ ಮಗಳ ಮದುವೆ ಮಾಡಿ ಕೊಡಲಾಗಿದೆ. ಆತ ಸಂಭಾವಿತ ನಾಲ್ಕು ಜನರೊಂದಿಗೆ ಬೆರೆಯುವಾತ. ಇದುವರೆಗೂ ಯಾವುದೇ ಸಲಾಸೂಲ ಕುರಿತು ನನಗೇನು ಹೇಳಿಲ್ಲ. ವಯಸ್ಸೆ ಆಯಿತು ನಮ್ಮೆದುರು ನಿಂತು ಮಾತಾಡಿಲ್ಲ ಆತ. ನಿತ್ಯ ತನ್ನ ಕೆಲಸ ತಾನು. ಆದರೆ ದಿಡೀರನೆ ಹೀಗೆ ಮಾಡಿಕೊಂಡಿರುವ ಕಾರಣ ನಾವು ದಿಗ್ಭ್ರಾಂತರಾಗಿದ್ದೇವೆ. ಇದೀಗ ಸಾಲ ಮಾಡಿಕೊಂಡಿದ್ದಾನೆ ಎಂಬುದು ತಿಳಿಯುತ್ತಿದೆ.
-ಮಲ್ಲಿಕಾರ್ಜುನ. ಮೃತನ ಹಿರಿಯಣ್ಣ.