ಪ್ರತಿಯೊಬ್ಬರಲ್ಲಿ ಪರಿಸರ ಜಾಗೃತಿ ಅತ್ಯಗತ್ಯ – ದರ್ಶನಾಪುರ
ಗಣೇಶ ನಗರದಲ್ಲಿ ಮನೆ ಮುಂದೆ ಎರಡು ಸಸಿ
yadgiri,ಶಹಾಪುರಃ ಪ್ರತಿಯೊಬ್ಬರಲ್ಲಿ ಪರಿಸರ ಜಾಗೃತಿ ಮೂಡಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರೂ ಮನೆ ಮುಂದೆ ಸಸಿ ನೆಟ್ಟು ಪಾಲನೆ ಪೋಷಣೆ ಮಾಡಬೇಕು. ಆ ದಿಸೆಯಲ್ಲಿ ವಾರ್ಡ್ ಸಂಖ್ಯೆ 8 ರ ಸದಸ್ಯ ಹಾಗೂ ಕಾರ್ಯಕರ್ತರ ನೇತೃತ್ವದಲ್ಲಿ ಗಣೇಶ ನಗರದ ಪ್ರತಿ ಮನೆ ಮುಂದೆ ಎರಡೆರಡು ಸಸಿ ನೆಡುವ ವ್ಯವಸ್ಥೆ ಮಾಡಿರುವದು ಶ್ಲಾಘನಿಯ ಕಾರ್ಯ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ಗಣೇಶ ನಗರದಲ್ಲಿ ಪರಿಸರ ಪ್ರೇಮಿ ಚಂದ್ರಶೇಖರ ಲಿಂಗದಳ್ಳಿ ಅವರ ನೇತೃತ್ವದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಮೂಲಕ ಸರಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ವಾರ್ಡ್ ಸದಸ್ಯರು ಆಯಾ ವಾರ್ಡ್‍ಗಳಲ್ಲಿ ಸಸಿ ನೆಡಲು ಅವಕಾಶವಿದ್ದ ಜಾಗಗಳಲ್ಲಿ ಸಸಿ ನೆಡುವ ಕಾರ್ಯ ಮಾಡಬೇಕಿದೆ. ಬರಿ ನಗರ ಪ್ರದೇಶವಲ್ಲದೆ ಗ್ರಾಪಂ ವ್ಯಾಪ್ತಿಯಲ್ಲೂ ಗ್ರಾಪಂ ಸದಸ್ಯರು ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು.
ಮನೆಗಳ ಮುಂದೆ, ಹಳ್ಳೀಗಳಲ್ಲಿ ಮನೆಗಳಿಗೆ ದೊಡ್ಡಿ ಜಾಗದಲ್ಲಿ ಹೊಲದ ಬದುವಿನಲ್ಲಿ ಸಸಿಗಳನ್ನು ಬೆಳೆಸಬೇಕು. ಮರಗಳು ಬೆಳೆದು ನಿಂತ ಮೇಲೆ ನೆರಳಿನಿಂದ ಬೆಳೆ ಬೆಳೆಯವುದಿಲ್ಲ ಎಂಬ ಅಪನಂಬಿಕೆಯಿಂದ ಹೊರಬರಬೇಕೆಂದು ಅವರು ಸಲಹೆ ನೀಡಿದರು.
ಪ್ರತಿ ಮನೆ ಮುಂದೆ ಗಿಡ, ಮರಗಳು ಬೆಳೆಸುವದರಿಂದ ಇಡಿ ಬಡವಾಣೆ ಹಸಿರುಮಯವಾಗಿ ನಿರ್ಮಿಸಲು ಸಾಧ್ಯವಿದೆ. ಇದರಿಂದ ಪರಿಸರ ಸ್ವಚ್ಛವಾಗಿರುತ್ತದೆ. ಅಲ್ಲದೆ ಶುದ್ಧ ಗಾಳಿ ಸೇವನೆಗೆ ಸಹಕಾರಿಯಾಗಲಿದೆ ಎಂದರು. ಗಣೇಶ ನಗರದಲ್ಲಿ 230 ಕ್ಕೂ ಹೆಚ್ಚು ಸಸಿಗಳನ್ನು ನೆಡುವಲ್ಲಿ ಕಾರ್ಯ ರೂಪಿಸಿರುವದು ಲಿಂಗದಳ್ಳಿ ಅವರ ಕಾರ್ಯಕ್ಷಮತೆ ಮೆಚ್ಚುವಂತದ್ದು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ್ ಹುಲಕಲ್, ಮುಖಂಡರಾದ ಚಂದ್ರಶೇಖರ ಲಿಂಗದಳ್ಳಿ, ಶರಣಗೌಡ ಗುಂಡಗುರ್ತಿ, ಸಯ್ಯದ್ ಮುಸ್ತಾಫ್, ಬಸವರಾಜ ಚೆನ್ನೂರ, ಮಂಜುರಡ್ಡಿ ಲಿಂಗದಳ್ಳಿ, ಶಾಂತಪ್ಪ ಕಟ್ಟಿಮನಿ ಹಳಿಸಗರ, ಅಜೀಮ್ ಜಮದಾರ, ಬಸವರಾಜ ಸಾಹು, ಬಂದೇನವಾಜ್ ಸಾಸನೂರ ಇತರರಿದ್ದರು.