ಕೆರೆಹೂಳೆತ್ತುವ ಮೂಲಕ ಅಂತರ ಜಲ ಹೆಚ್ಚಳ-ದರ್ಶನಾಪುರ
ಹೊಸಕೇರಾ ಕೆರೆ ಹೂಳೆತ್ತುವ ಕೆಲಸ ಪರಿಶೀಲಿಸಿದ ದರ್ಶನಾಪುರ
ಶಹಾಪುರ: ಕೆರೆಗಳ ಹೂಳೆತ್ತುವ ಮೂಲಕ ನೀರು ಸಂಗ್ರಹದಿಂದ ಅಂತರಜಲ ವೃದ್ಧಿಯಾಗಲಿದೆ. ಇದರಿಂದ ಸಾಕಷ್ಟು ನೀರಿನ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ಭಾಗ್ಯ ನಿಗಮದಿಂದ ತಾಲೂಕಿನ ವಿವಿಧ ಗ್ರಾಮಗಳ ಕೆರೆ ಹೂಳೆತ್ತುವ ಕಾಮಗಾರಿಗೆ 12 ಕೋಟಿ ರೂ.ವೆಚ್ಚ ಮಾಡಲಾಗಿದ್ದು ಹೂಳೆತ್ತಿದ್ದಲ್ಲದೆ ಕೆರೆಗೆ ನೀರು ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ತಾಲ್ಲೂಕಿನ ಹೊಸಕೇರಾ ಗ್ರಾಮದಲ್ಲಿ ಕೈಗೆತ್ತಿಕೊಂಡಿರುವ 1ಕೋಟಿ ರೂ.ವೆಚ್ಚದಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿದ ಅವರು ಮಾತನಾಡಿದರು.
ಪೋಲಾಗುವ ಮಳೆ ನೀರು ಸಂಗ್ರಹ ಸೇರಿದಂತೆ ಕೆರೆ ಹೂಳೆತ್ತಿ ನೀರು ಸಂಗ್ರಹ ಮೂಲಕ ಅಂತರಜಲಮಟ್ಟ ಹೆಚ್ಚಳಕ್ಕೆ ಒತ್ತು ನೀಡಲಾಗುತ್ತಿದೆ.
ಕೊರೊನಾ ವೈರಸ್ ಹಾವಳಿಯಿಂದ ಹೆಚ್ಚಿನ ಅನುದಾನ ವಾಪಸ್ಸು ಹೋಗಿದೆ. ಆದರೂ ಸಹ ಕೆಬಿಜೆಎಎನ್‍ಎಲ್ ನಿಗಮದ ಅನುದಾನದಲ್ಲಿ ಕೈಗೆತ್ತಿಕೊಂಡ ಕೆಲಸಗಳನ್ನು ಪೂರ್ಣಗೊಳಿಸಲಾಗುವದು. ಮುಖ್ಯವಾಗಿ ನಡಿಹಾಳ ಕೆರೆ 2.20ಕೋಟಿ ವೆಚ್ಚದಲ್ಲಿ ಹೂಳೆತ್ತುವುದು ಮತ್ತು ನೀರು ಸಂಗ್ರಹ ಕಾರ್ಯ ಮುಕ್ತಾಯಕ್ಕೆ ಬಂದಿದೆ.
ಅದರಂತೆ 2.28ಕೋಟಿ ರೂ.ವೆಚ್ಚದಲ್ಲಿ ಖಾನಾಪುರ ಕೆರೆಯಲ್ಲಿ ಹೂಳೆತ್ತುವುದು ಮತ್ತು ನೀರು ಸಂಗ್ರಹಿಸಲಾಗಿದೆ. ಅದೆರೀತಿ ಉಕ್ಕಿನಾಳ ಕೆರೆಗೆ 4ಕೋಟಿ, ಮುಡಬೂಳ 1 ಕೋಟಿ, ಮುಡ್ನಾಳ 1 ಕೋಟಿ ವೆಚ್ಚದಲ್ಲಿ ಕೆರೆಗೆ ಹೂಳೆತ್ತುವ ಕಾರ್ಯ ಸಾಗಲಿದೆ ಎಂದರು.
ವಿವಿಧ ಕಾಲುವೆಗಳ ಮೂಲಕ ನಗನೂರ ಗ್ರಾಮದ ಬಳಿ ಇರುವ ಖಾನಾಪುರ ಹಾಗೂ ನಡಿಹಾಳ ಕೆರೆಗೆ ನೀರು ಸಂಗ್ರಹಿಸಿದ್ದರಿಂದ ಪ್ರಸಕ್ತ ಬಾರಿ ಅಲ್ಲಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರಜಲಮಟ್ಟ ಹೆಚ್ಚಳವಾಗಿ ಕೊಳವೆಬಾವಿಯಲ್ಲಿ ಜಿನುಗಿದವು. ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿಲ್ಲ.
ಬರುವ ದಿನಗಳಲ್ಲಿ ತಾಲ್ಲೂಕಿನ ಬೂದನೂರ, ಕಕ್ಕಸಗೇರಾ, ಮೇಲಿನ ಹೊಸಕೇರ, ಗುಂಡಾಪುರ ಗ್ರಾಮದ ಕೆರೆಗಳನ್ನು ಅಭಿವೃದ್ಧಿಪಡಿಸಿ ಕೆರೆ ಹೂಳೆತ್ತುವ ಕೆಲಸ ಕೈಗೆತ್ತಿಕೊಳ್ಳಲು ಅಂದಾಜಪಟ್ಟಿಯನ್ನು ಸಿದ್ಧಪಡಿಸುವಂತೆ ಎಂಜಿನಿಯರ್ ಸೂಚಿಸಿರುವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಶಿವಮಹಾಂತ ಚಂದಾಪುರ, ಮಾನಸಿಂಗ್ ಚವ್ಹಾಣ, ಬಸವರಾಜಪ್ಪ ತಂಗಡಗಿ, ನಾಗಪ್ಪ ಕಾಶಿರಾಜ, ಹಣಮಂತರಾಯಗೌಡ ಹೊಸಕೇರಾ, ಹೊನ್ನಪ್ಪಗೌಡ, ಆನಂದಸ್ವಾಮಿ ಹಿರೇಮಠ, ಶರಣಗೌಡ ಬಿರೆದಾರ, ದೇವಣ್ಣಗೌಡ ಪಾಟೀಲ್, ಲಕ್ಕಪ್ಪ ಗುಂಡಾಪುರ, ಲಕ್ಷ್ಮಣ ರಾಠೋಡ ಇದ್ದರು.