ಮಹಿಳೆಯರಿಗೆ ನಿವೃತ್ತಿ ಎಂಬುವದಿಲ್ಲ – ರಾಂಪೂರೆ
ಮಹಿಳಾ ಜ್ಞಾನ ವಿಕಾಸ ಹಾಗೂ ಮಹಿಳಾ ವಿಚಾರ ಗೋಷ್ಠಿ
yadgiri, ಶಹಾಪುರಃ ಪುರುಷ ಪ್ರಧಾನ ದೇಶವಿದು ಇಲ್ಲಿ ಮಹಿಳೆಯರಿಗೆ ಮುನ್ನೆಲೆಗೆ ಬರಲು ಅವಕಾಶ ಕಡಿಮೆ ಎಂಬುದನ್ನು ಮೊದಲು ಮಹಿಳೆಯರು ತಲೆಯಿಂದ ತೆಗೆದು ಹಾಕಬೇಕು. ಪ್ರತಿ ಪುರುಷನ ಯಶಸ್ಸಿನ ಹಿಂದೆ ಓರ್ವ ಮಹಿಳೆಯೇ ಇರುತ್ತಳೆ ಎಂಬುದು ಸತ್ಯ. ಅದರಂತೆ ಪುರುಷರಿಗೆ ಅವರವರ ವೃತ್ತಿಯಲ್ಲಿ ನಿವೃತ್ತಿ ಎಂಬುದಿದೆ. ಆದರೆ ಮಹಿಳೆಯರಿಗೆ ಮಾತ್ರ ನಿವೃತ್ತಿ ಎಂಬುದೇ ಇಲ್ಲವೆಂದು ಹಿರಿಯ ವಕೀಲರೆ ಬಸ್ಸಮ್ಮ ರಾಂಪೂರೆ ಅಭಿಪ್ರಾಯಪಟ್ಟರು.
ನಗರದ ಫಕೀರೇಶ್ವರ ಮಠದ ಭಾವೈಕ್ಯ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ) ತಾಲೂಕು ಶಾಖೆಯಿಂದ ನಡೆದ ಮಹಿಳಾ ಜ್ಞಾನ ವಿಕಾಸ ಹಾಗೂ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾಸ್ಥ್ಯ ಸಮಾಜದಲ್ಲಿ ಕಾನೂನಿನ ಅರಿವು ವಿಷಯ ಕುರಿತು ಉಪನ್ಯಾಸ ನೀಡಿದರು.
ಮಹಿಳೆಯರಿಗೆ ಕಾನೂನಡಿ ಹಲವಾರು ಹಕ್ಕುಗಳಿವೆ. ಅವುಗಳನ್ನು ಪಡೆಯಲು ಕಾನೂನು ಹೋರಾಟ ಅಗತ್ಯ. ಕಾನೂನಿನ ಅರಿವು ಮಹಿಳೆಯರು ಪಡೆದುಕೊಳ್ಳಬೇಕು. ಆ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಆರ್ಟಿಕಲ್ 125 ಅನ್ವಯ ಮಹಿಳೆಯರು ಜೀವನಾಂಶ ಪಡೆಯುವ ಹಕ್ಕನ್ನು ಸಂವಿಧಾನ ನೀಡಿದೆ. ಅದೇ ರೀತಿ ಮಹಿಳೆಯರಿಗೆ ಸಹೋದರಂತೆ ಅವರಿಗೂ ತಂದೆ-ತಾಯಿಗಳ ಆಸ್ತಿಯಲ್ಲಿ ಸಮಪಾಲು ಬರುತ್ತದೆ. ಮಹತ್ವದ ಹಕ್ಕುಗಳಿದ್ದು, ಯಾರೊಬ್ಬರು ವಂಚಿತರಾಗದೆ ಶೋಷಣೆಯಡಿ ಕಾಲ ಕಳೆಯದೇ ವಕೀರನ್ನು ಭೇಟಿ ಮಾಡಿ ಕಾನೂನು ಕುರಿತು ಚರ್ಚಿಸಿ ಮಹಿಳೆಯರಿಗಿರುವ ಹಕ್ಕನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಮಹಿಳಾ ಸಬಲೀಕರಣ ಕುರಿತು ಉಪನ್ಯಾಸಕಿ ಹಣಮಂತಿ ಗುತ್ತೇದಾರ ಉಪನ್ಯಾಸ ನೀಡಿ, ಮಹಿಳೆ ಅಬಲೆ ಅಲ್ಲ ಸಬಲೆ. ವಿವಿಧ ಕ್ಷೇತ್ರಗಳಲ್ಲಿ ಪ್ರಸಕ್ತ ದಿನಮಾನಗಳಲ್ಲಿ ಮಹಿಳೆಯರು ಶ್ರದ್ಧಾಪೂರ್ವಕವಾಗಿ ಭಾಗವಹಿಸಿ ಯಶಸ್ಸು ಗಳಿಸಿದ ಸಾಕಷ್ಟು ಉದಾಹರಣೆಗಳು ಕಣ್ಮುಂದೆ ಇವೆ.
ಮಹಿಳೆಯರು ತಮ್ಮ ಶ್ರಮ, ಶ್ರದ್ಧೆ ಮತ್ತು ಪ್ರಾವೀಣ್ಯತೆ ಮೂಲಕ ಎಲ್ಲಾ ಕ್ಷೇತ್ರದಲ್ಲಿ ಉದ್ಯಮದಲ್ಲೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೌಶಲ್ಯದ ಮೂಲಕ ಸ್ವತಃ ಮಹಿಳೆಯರು ತಯಾರಿಸಿ ಸಾಮಾಗ್ರಿಗಳು ಹೊರ ದೇಶಕ್ಕೆ ರಫ್ತಾಗುತ್ತಿವೆ.
ಹೀಗಾಗಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳುಂಟು ಅದನ್ನು ಸದ್ಭಳಿಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾಲಂಬಿಯಾಗು ಬದುಕು ರೂಪಿಸಿಕೊಳ್ಳಬೇಕು. ಮಹಿಳೆಯರಿಗಾಗಿ ಸರ್ಕಾರ ಸಾಕಷ್ಟು ಯೋಜನೆ, ಸಬ್ಸಿಡಿಗಳನ್ನು ನೀಡಿದೆ. ಅವುಗಳ ಸದುಪಯೋಗ ಮಾಡಿಕೊಂಡು ತಮ್ಮತನವನ್ನು ಪ್ರದರ್ಶಿಸಬೇಕು. ಯಾವ ಪುರುಷನಿಗಿಂತ ಮಹಿಳೆ ಕಡಿಮೆ ಎಂಬುದನ್ನು ತೋರಿಸಿಬೇಕಿದೆ. ಆ ನಿಟ್ಟಿನಲ್ಲಿ ಹೆಣ್ಣು ಮಕ್ಕಳಿಗೆ ಮೊದಲು ಗುಣಮಟ್ಟದ ಶಿಕ್ಷಣ ನೀಡಿದ್ದಲ್ಲಿ ಆಕೆ ಇಡಿ ಕುಟುಂಬದ ಭದ್ರತೆಗೆ ಹಿತ ಕಾಪಾಡುವಲ್ಲಿ ಶ್ರಮಿಸುತ್ತಾಳೆ ಎಂಬುದು ಮರೆಯಬೇಡಿ ಎಂದರು.
ಫಕೀರೇಶ್ವರ ಮಠದ ಗುರುಪಾದ ಮಹಾಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಹಿರಿಯ ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ನಾರಾಯಣಾಚಾರ್ಯ ಸಗರ, ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಜಯಂತಿ ಪೂಜಾರಿ, ಮುಖ್ಯ ಅಥಿತಿ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಮಾತನಾಡಿದರು. ನಿರ್ಮಲ ಉಪ್ಪಿನ್, ಎಎಸ್‍ಐ ಸಾಯಬಣ್ಣ ಉಪಸ್ಥಿತರಿದ್ದರು.
ಸರ್ಕಾರ ಮಾಡದ ಕೆಲಸ ಧರ್ಮಸ್ಥಳ ಸಂಸ್ಥೆ ಮಾಡಿದೆ – ಗುರುಪಾದ ಶ್ರೀ
ಧರ್ಮಸ್ಥಳ ಸಂಸ್ಥೆ ನಾಡಿನಾದ್ಯಂತ ಉತ್ತಮ ಕಾರ್ಯ ಮಾಡುತ್ತಿದ್ದು, ರಾಜ್ಯದಲ್ಲಿಯೇ ಸುಮಾರು 3200 ಜನರಿಗೆ ನಿರ್ಗತಿಕ ಕುಟುಂಬಕ್ಕೆ ಮಾಸಾಶನ ನೀಡುತ್ತಿರುವದು ಸಣ್ಣ ಮಾತಲ್ಲ. ಯಾವೊಂದು ಸರ್ಕಾರ ಮಾಡದ ಕೆಲಸವನ್ನು ಧರ್ಮಸ್ಥಳದ ಸಂಸ್ಥೆ ಮಾಡುತ್ತಿದೆ ಫಕೀರೇಶ್ವರ ಮಠದ ಗುರುಪಾದ ಮಹಾಸ್ವಾಮೀಜಿ ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಬಡವರಿಗೆ, ಮಹಿಳೆಯರಿಗೆ, ವಿಶೇಷವಾಗಿ ಅನುದಾನ ನೀಡುವದು, ನಿರಾಶ್ರಿತ ಕುಟುಂಬಕ್ಕೆ ಮನೆ ಕಟ್ಟಿಸಿಕೊಡುವದು, ವಿವಿಧ ಗ್ರಾಮದ ಕೆರೆ ಕಟ್ಟೆಗಳ ಹೂಳೆತ್ತುವ ಮೂಲಕ ಅಂತರಜಲ ಮಟ್ಟ ಹೆಚ್ಚಿಸುವ ಕೆಲಸ ಮಾಡಿದೆ. ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಸಹಾಯ ಹಸ್ತ ಚಾಚಿದೆ.
ಕುಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಕೊಡುವಂತದ್ದಾಗಲಿ, ಸಹಕಾರಿ ಮಹಿಳಾ ಸಂಘಗಳಿಗೆ ಸಾಲ ವಿತರಿಸಿ ಆರ್ಥಿಕವಾಗಿ ಅವರ ಉದ್ಯೋಗ ಅಭಿವೃದ್ಧಿಗೆ ಸಹಕಾರಿಯಾಗುವಂತ ಕೆಲಸ ಮತ್ತು ವಿಶೇಷವಾಗಿ ಹಳೆ ದೇವಾಲಯಗಳ ಜೀರ್ಣೋದ್ಧಾರಕ್ಕೆ ಅನುದಾನ ಕಲ್ಪಿಸಿದೆ. ಹೀಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಇನ್ನಷ್ಟು ಸೇವೆ ಮಾಡುವ ಶಕ್ತಿಯನ್ನು ಭಗವಂತ ಶ್ರೀ ಮಂಜುನಾಥ ಸಂಸ್ಥೆಗೆ ಕರುಣಿಸಲಿ ಎಂದು ಹಾರೈಸಿದರು.