ಡಿಜಿಟಲ್ ತಂತ್ರಜ್ಞಾನದೆಡೆಗೆ ಗ್ರಂಥಾಲಯ ಪಯಣ – ಬಸನಗೌಡ
ತಂತ್ರಜ್ಞಾನ ಬೆಳೆದಂತೆಲ್ಲ ಗ್ರಂಥಾಲಯಗಳೂ ಕೂಡ ಬದಲಾವಣೆ ಕಡೆ ಹೆಜ್ಜೆ ಹಾಕಿವೆ. ಪುಸ್ತಕ ಸಂಸ್ಕೃತಿ ಬೆಳೆಸುವುದರ ಜೊತೆಗೆ ತಂತ್ರಜ್ಞಾನಾಧಾರಿತ ಗ್ರಂಥಾಲಯ ಸೇವೆಯನ್ನು ಒದಗಿಸುವ ಅಗತ್ಯತೆ ಇಂದು ಇದೆ. ಪುಸ್ತಕ ಮತ್ತು ತಂತ್ರಜ್ಞಾನಾಧಾರಿತ ಓದುಗರೂ ಗ್ರಂಥಾಲಯಕ್ಕೆ ಬರುತ್ತಾರೆ. ಎರಡೂ ವರ್ಗದ ಜನರನ್ನು ತೃಪ್ತಿಪಡಿಸುವ ಕೆಲಸ ಗ್ರಂಥಾಲಯ ಇಲಾಖೆಯದ್ದಾಗಿದೆ. ಓದುಗ ತನಗೆ ಬೇಕಾದ ಮಾಹಿತಿ ಅಥವಾ ಪುಸ್ತಕ ಸಿಗದೆ ಹಾಗೆಯೇ ಹೋಗುವಂತಿಲ್ಲ. ಈ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಮಿಂಟ್ ಬುಕ್ ಸಂಸ್ಥೆಯ ಸಹಯೋಗದೊಂದಿಗೆ ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಡಿಜಿಟಲೈಜ್ ಮಾಡಿದ ಗ್ರಂಥಗಳನ್ನು digital app ಮೂಲಕ ಜನರಿಗೆ ಸೇವೆ ನೀಡುವಂತೆ ಮಾಡಿದೆ.
ರಾಜ್ಯಮಟ್ಟದಲ್ಲಿ ಇತ್ತೀಚೆಗೆ ಡಿಜಿಟಲ್ ಗ್ರಂಥಾಲಯಗಳು ಹಾಗೂ ಡಿಜಿಟಲ್ ಆಪ್ ನ್ನು ಬಿಡುಗಡೆಗೊಳಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ತಂತ್ರಜ್ಞಾನ ಸೌಲಭ್ಯದೊಂದಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಡಿಜಿಟಲೀಕರಣಗೊಳಿಸುವ, ಇಡೀ ದೇಶದಲ್ಲಿ ಮೊಟ್ಟಮೊದಲನೆಯ ಯೋಜನೆ ಇದಾಗಿದ್ದು, ಸಾರ್ವಜನಿಕರು ಹಾಗೂ ಓದುಗರನ್ನು ವಿಶಿಷ್ಟವಾದ ಕಲಿಕಾ ಆಯಾಮಕ್ಕೆ ತೊಡಗಿಸುವ ಸರ್ಕಾರಿ ಪ್ರೇರಿತ ಬೃಹತ್ ಅಭಿಯಾನ ಇದಾಗಿದೆ ಎಂದರು. ಇದರಿಂದ ಗ್ರಂಥಾಲಯವನ್ನು ಓದುಗರ ಬೆರಳ ತುದಿಗೆ ತಂದುಕೊಳ್ಳುವ ಒಂದು ವ್ಯವಸ್ಥೆ ಇದಾಗಿದ್ದು, ಈ ಮೂಲಕ 6 ಕೋಟಿ ಗ್ರಂಥಾಲಯಗಳೇ ಸ್ಥಾಪನೆಯಾದಂತಾಗಿದೆ ಎಂಬ ಭಾವನೆ ಮೂಡುವಂತಾಗಿದೆ. ಡಿಜಿಟಲೀಕರಣದ ಮೂಲಕ ನಾವು ಕಾಲಕ್ಕೆ ತಕ್ಕಂತೆ ಬದಲಾವಣೆಯಾಗಬೇಕಿದೆ. ಇದು ಒಂದು ಸಾಂಸ್ಕೃತಿಕ ಪಲ್ಲಟ ಎನ್ನಬಹುದಾಗಿದೆ ಎಂದರು.
digital app: ಸುಮಾರು 272 ಸಾರ್ವಜನಿಕ ಗ್ರಂಥಾಲಯಗಳಲ್ಲಿ ಲಭ್ಯವಿರುವ ಹಕ್ಕುಸ್ವಾಮ್ಯ ಹೊಂದಿರುವ ಕೃತಿಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಇನ್ನು ಮುಂದೆ ಸಾರ್ವಜನಿಕರು ತಮ್ಮ ಮೊಬೈಲ್‍ನಲ್ಲಿಯೇ ‘ಸಾರ್ವಜನಿಕ ಇ-ಗ್ರಂಥಾಲಯ ಆಪ್’ ಮೂಲಕವೇ ಓದಬಹುದಾಗಿದೆ. ಸುಮಾರು ಒಂದು ಲಕ್ಷ ಪುಸ್ತಕಗಳನ್ನು ಈಗಾಗಲೇ ಆಪ್‍ನಲ್ಲಿ ವೆಬ್‍ಸೈಟ್‍ನಲ್ಲಿ ಡಿಜಿಟಲೀಕರಣಗೊಳಿಸಿ ಅಡಕಗೊಳಿಸಲಾಗಿದೆ. ನಿಯತಕಾಲಿಕೆಗಳು, ಭಾಷಾ ಪುಸ್ತಕಗಳು, ವಿಡಿಯೋಗಳು ಹೀಗೆ ಎಲ್ಲವೂ ಒಂದೇ ಆಪ್ ನಲ್ಲಿ ದೊರೆಯಲಿವೆ. ಓದುಗ ತನಗೆ ಬೇಕಾದ ಪುಸ್ತಕದಲ್ಲಿನ ಮುಖ್ಯ ಮಾಹಿತಿಯನ್ನು ಮಾರ್ಕ ಮಾಡಬಹುದು, ಬೋಲ್ಡ್ ಮಾಡಬಹುದು, ಸೇವ್ ಕೂಡ ಮಾಡಬಹುದು. ಆದರೆ ಪ್ರಿಂಟ್ ಪಡೆದುಕೊಳ್ಳುವಂತಿಲ್ಲ. ಈ ಸೌಲಭ್ಯವನ್ನು ಉಪಯೋಗ ಪಡೆದುಕೊಳ್ಳಲು ಹತ್ತಿರದ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಬೇಕಾಗುತ್ತದೆ. ಅಲ್ಲಿನ ಸಿಬ್ಬಂದಿ ಇದರ ಉಪಯೋಗವನ್ನು ತಿಳಿಸುವರು.
ಪ್ರಪಂಚದಾದ್ಯಂತ ಭಾರತೀಯರ ಕೌಶಲ್ಯ ಮೆಚ್ಚುವಂತಹದ್ದು. 21ನೇ ಶತಮಾನ ಭಾರತದ ಶತಮಾನವಾಗಬೇಕು. ಭಾರತೀಯರ ಶತಮಾನವಾಗಬೇಕು. ತಂತ್ರಜ್ಞಾನವಿಲ್ಲದೆ ಇದು ಅಸಾಧ್ಯ. ಹೀಗಾಗಿ ಗ್ರಂಥಾಲಯ ಇಲಾಖೆ ಕೂಡ ತಂತ್ರಜ್ಞಾನದ ನೆರವನ್ನು ತೆಗೆದುಕೊಂಡು ಪ್ರತಿಗ್ರಾಮಗಳನ್ನು ತಲುಪಬೇಕೆಂಬ ಮಹಾತ್ವಾಕಾಂಕ್ಷೆ ಇಲಾಖೆಯದ್ದಾಗಿದೆ. ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆ ಇಡೀ ದೇಶದಲ್ಲೇ ಮಾದರಿಯಾಗಿದೆ. ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಮಾತನಾಡಿ ಯುರೋಪ್‍ನಾದ್ಯಂತ 3ನೇ ಮನೆಯ ಕಲ್ಪನೆ ಜಾರಿಯಲ್ಲಿದೆ. ಮನೆ ಮತ್ತು ಕೆಲಸದ ಸ್ಥಳದ ನಂತರದ 3ನೇ ಸ್ಥಳವೇ ಗ್ರಂಥಾಲಯವಾಗಿದೆ. ಈ ನಿಟ್ಟಿನಲ್ಲಿ ಗ್ರಂಥಾಲಯಗಳೂ ಸಾರ್ವಜನಿಕರ 3 ನೇ ಮನೆಯಾಗಬೇಕು ಎಂದರು.
ರಾಜ್ಯದ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಡಿಜಿಟಲ್‍ಮಯದೆಡೆಗೆ ಕರೆದೊಯ್ಯುವ ಭಾರ ನಿರ್ದೇಶಕ ಡಾ|| ಸತೀಶ್ ಕುಮಾರ ಹೊಸಮನಿಯವರ ಹೆಗಲೇರಿದೆ. ಹೀಗಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುತ್ತಾಡಿ ಡಿಜಿಟಲ್ ಗ್ರಂಥಾಲಯಗಳನ್ನು ಸಮರ್ಪಕವಾಗಿ ಓದುಗರಿಗೆ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಓಡಾಡುತ್ತಿದ್ದಾರೆ. ಈಗಾಗಲೇ ಬೆಂಗಳೂರು, ಕಲಬುರ್ಗಿ, ರಾಯಚೂರು, ತುಮಕೂರು ಉಡುಪಿ, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಡಿಜಿಟಲ್ ಗ್ರಂಥಾಲಯಗಳು ಉದ್ಘಾಟನೆಗೊಳಿಸಿದ್ದಾರೆ. ಜೊತೆಗೆ ತಂತ್ರಜ್ಞಾನದ ಬಳಕೆಯ ಬಗ್ಗೆ ಸಿಬ್ಬಂದಿಗಳಿಗೆ ತಿಳಿಸಲೋಸುಗ ತರಬೇತಿಗಳನ್ನೂ ಆಯೋಜಿಸುತ್ತಿದ್ದಾರೆ.
ಕಲ್ಕತ್ತಾದ ಆರ್.ಆರ್.ಎಲ್.ಎಫ್ ಹಾಗೂ ಬೆಂಗಳೂರಿನಲ್ಲಿ ಡಿಜಿಟಲ್ ಗ್ರಂಥಾಲಯ ತರಬೇತಿಗೂ ಸಿಬ್ಬಂದಿಗಳನ್ನು ನಿಯೋಜಿಸಿ ತಂಡೋಪತಂಡವಾಗಿ ಕಳುಹಿಸುತ್ತಿದ್ದಾರೆ. ಇವರ ಉತ್ಸಾಹಕ್ಕೆ ಅಧಿಕಾರಿಗಳೂ/ಸಿಬ್ಬಂದಿಗಳು ಕೂಡ ಅಷ್ಟೇ ಉತ್ಸಾಹದಿಂದ ತೊಡಗಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳು ಹಾಗೂ ಆಯ್ದ ಶಾಖಾ ಗ್ರಂಥಾಲಯಗಳು ಸೇರಿ ಒಟ್ಟು 272 ಗ್ರಂಥಾಲಯಗಳಿಗೆ ಎರಡು ಕಂಪ್ಯೂಟರ್ ಹಾಗೂ ಎರಡು ಟ್ಯಾಬ್‍ಗಳನ್ನು ನೀಡಿದ್ದಾರೆ. ಜೊತೆಗೆ digital app ಮೂಲಕವು ಓದುಗರಿಗೆ ಪುಸ್ತಕಗಳನ್ನು ಒದಗಿಸುವ ಸೌಲಭ್ಯ ಜಾರಿಗೊಳಿಸಲಾಗುತ್ತಿದೆ. ಮುಂದಿನ ಹಂತದಲ್ಲಿ ರಾಜ್ಯದ ಉಳಿದ ಎಲ್ಲ ಶಾಖಾ ಗ್ರಂಥಾಲಯಗಳು ಕೂಡ ಡಿಜಿಟಲ್ ರೂಪದ ಸೇವೆ ಒದಗಿಸುವ ನಿಟ್ಟಿನಲ್ಲಿ ನಿರ್ದೇಶಕ ಡಾ|| ಸತೀಶ್ ಕುಮಾರ್ ಹೊಸಮನಿ ಕಾರ್ಯೋನ್ಮುಖರಾಗಿದ್ದಾರೆ.
ಜಿಲ್ಲೆಯ 6 ಗ್ರಂಥಾಲಯಗಳು ಡಿಜಿಟಲ್‍ಮಯ: ಇಲಾಖೆಯ ಬಹು ನಿರೀಕ್ಷಿತ ಡಿಜಿಟಲ್ ಗ್ರಂಥಾಲಯ ಸೇವೆಯು ಯಾದಗಿರಿಯ 6 ಶಾಖಾ ಗ್ರಂಥಾಲಯದಲ್ಲೂ ಒದಗಿಸಲಿದೆ. ಯಾದಗಿರಿ ನಗರದ ಕೇಂದ್ರ ಗ್ರಂಥಾಲಯ, ಕನಕ ವೃತ್ತದ ಶಾಖೆ, ಹುಣಸಗಿ, ಶಹಾಪುರ, ಕೆಂಭಾವಿ, ಗುರುಮಠಕಲ್ ಶಾಖಾ ಗ್ರಂಥಾಲಯಗಳಲ್ಲಿ ಶೀಘ್ರವೇ ಸೇವೆಯನ್ನು ನೀಡಲಾಗುವುದೆಂದು ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಎಂ.ಎಸ್.ರೆಬಿನಾಳ ತಿಳಿಸುತ್ತಾರೆ.
-ಪಾಟೀಲ ಬಸನಗೌಡ ಹುಣಸಗಿ
9900771427